ಕರ್ನಾಟಕ

karnataka

ETV Bharat / state

ಸಾರಿಗೆ ನಿಗಮಗಳ ಶಕ್ತಿಗೆ 5500 ಬಸ್ ಖರೀದಿ: 100 ಇವಿ ಬಸ್​ಗಳ ಸಂಚಾರಕ್ಕೆ ಡಿ. 26 ರಂದು ಗ್ರೀನ್ ಸಿಗ್ನಲ್ - ನಾನ್ ಎಸಿ ಸ್ಲೀಪರ್

ಡಿಸೆಂಬರ್ 26 ರಂದು 100 ಇವಿ ಬಸ್​ಗಳ ಚಾಲನೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಗ್ರೀನ್ ಸಿಗ್ನಲ್ ನೀಡಲಿದ್ದಾರೆ.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

By ETV Bharat Karnataka Team

Published : Dec 18, 2023, 9:31 PM IST

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು :ಶಕ್ತಿ ಯೋಜನೆಯ ಯಶಸ್ಸಿನ ಬೆನ್ನಲ್ಲೇ ಸಾರಿಗೆ ನಿಗಮಗಳಿಗೆ ಹೆಚ್ಚುವರಿಯಾಗಿ 5.5 ಸಾವಿರ ಬಸ್​ಗಳ ಸೇರ್ಪಡೆಗೆ ಮುಂದಾಗಿದ್ದು, ಡೀಸೆಲ್ ಬಸ್​ಗಳ ಜೊತೆ ವಿದ್ಯುತ್ ಚಾಲಿತ ಬಸ್​ಗಳೂ ಸೇರಿವೆ. ಆರಂಭಿಕ ಹಂತವಾಗಿ 100 ಎಲೆಕ್ಟ್ರಿಕ್ ನಾನ್ ಎಸಿ ಬಸ್​ಗಳು ಮುಂದಿನ ವಾರ ಬಿಎಂಟಿಸಿಗೆ ಸೇರಿಕೊಳ್ಳಲಿದ್ದು, ಹಂತ ಹಂತವಾಗಿ ಉಳಿದ ಬಸ್​ಗಳು ಕೆಎಸ್ಆರ್​ಟಿಸಿ ಸೇರಿದಂತೆ ಎಲ್ಲ ಸಾರಿಗೆ ನಿಗಮಗಳಿಗೆ ಹಸ್ತಾಂತರಗೊಳ್ಳಲಿದೆ.

ಕೇಂದ್ರ ಸರ್ಕಾರದ ಫೇಮ್-2 ಯೋಜನೆ ಅಡಿ ಬಿಎಂಟಿಸಿಗೆ 921 ಬಸ್​ಗಳು ಲಭ್ಯವಾಗಿದ್ದು, ಇದರಲ್ಲಿ ಮೊದಲ ಕಂತಿನ 100 ನಾನ್ ಎಸಿ ಎಲೆಕ್ಟ್ರಿಕ್ ಬಸ್​ಗಳನ್ನು ಟಾಟಾ ಸಂಸ್ಥೆ ಹಸ್ತಾಂತರ ಮಾಡಿದೆ. ಡಿಸೆಂಬರ್ 26 ರಂದು 100 ಇವಿ ಬಸ್​ಗಳ ಚಾಲನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಗ್ರೀನ್ ಸಿಗ್ನಲ್ ನೀಡಲಿದ್ದಾರೆ.

5500 ಬಸ್​ಗಳ ಖರೀದಿಗೆ ತಯಾರಿ: ಶಕ್ತಿ ಯೋಜನೆ ನಂತರ ಸಾರಿಗೆ ನಿಗಮಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.15-20 ರಷ್ಟು ಹೆಚ್ಚಳಗೊಂಡಿದ್ದು, ಅದಕ್ಕೆ ತಕ್ಕಂತೆ ಹೆಚ್ಚುವರಿ ಬಸ್​ಗಳ ವ್ಯವಸ್ಥೆ ಕಲ್ಪಿಸಲು ಸಾರಿಗೆ ನಿಗಮಗಳು ಮುಂದಾಗಿದ್ದು, ಅದಕ್ಕೆ ತಕ್ಕಂತೆ ಬಸ್​ಗಳ ಖರೀದಿಗೆ ಟೆಂಡರ್ ಕರೆದಿವೆ. ಡೀಸೆಲ್ ಬಸ್​ಗಳು, ವಿದ್ಯುತ್ ಚಾಲಿತ ಎಸಿ ಬಸ್, ಇವಿ ನಾನ್ ಎಸಿ ಬಸ್​ಗಳು ಸೇರಿದ್ದು, ಒಟ್ಟಾರೆಯಾಗಿ 5,500 ಬಸ್​ಗಳ ಖರೀದಿಗೆ ಎಲ್ಲ ತಯಾರಿ ನಡೆಸಲಾಗಿದೆ.

ಈ ಕುರಿತು ಈಟಿವಿ ಭಾರತ್​ಗೆ ಮಾಹಿತಿ ನೀಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಕ್ತಿ ಯೋಜನೆಯಿಂದಾಗಿ ನಮಗೆ ಬಸ್​ಗಳ ಕೊರತೆಯಾಗಿಲ್ಲ. ನಾನು ಈ ಹಿಂದೆ ಸಾರಿಗೆ ಸಚಿವನಾಗಿದ್ದಾಗ ನಾಲ್ಕು ಸಾರಿಗೆ ನಿಗಮಗಳಿಂದ ಸೇರಿ ಒಟ್ಟು 24 ಸಾವಿರ ಬಸ್​ಗಳಿದ್ದವು. ಆದರೆ, 10 ವರ್ಷವಾದರೂ ಈಗ ಬಸ್​ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ. ಬದಲಿಗೆ 1 ಸಾವಿರ ಸಂಖ್ಯೆ ಕಡಿಮೆಯಾಗಿದ್ದು, 23 ಸಾವಿರ ಆಗಿದೆ ಎಂದರು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಂದೇ ಒಂದು ಬಸ್ ಖರೀದಿಯೇ ಆಗಿಲ್ಲ. ಜನಸಂಖ್ಯೆ ಹೆಚ್ಚಾದಂತೆ ಅದಕ್ಕೆ ತಕ್ಕಂತೆ ಬಸ್​ಗಳೂ ಹೆಚ್ಚಾಗಬೇಕು. ಸದ್ಯ ನಾವು 4-5 ಸಾವಿರ ಬಸ್ ಖರೀದಿ ಮಾಡುತ್ತಿದ್ದೇವೆ. ಆದರೂ ನಮ್ಮ ಜನಸಂಖ್ಯೆ ನೋಡಿದರೆ, ನಮಗೆ 35 ಸಾವಿರ ಬಸ್​ಗಳ ಅಗತ್ಯ ಇದೆ. ಆ ನಿಟ್ಟಿನಲ್ಲಿ ನಾವು ಬಸ್ ವ್ಯವಸ್ಥೆಗೆ ಮುಂದಾಗಲಿದ್ದೇವೆ ಎಂದು ಹೇಳಿದರು.

ಬಿಎಂಟಿಸಿಗೆ 921 ಎಲೆಕ್ಟ್ರಿಕ್ ನಾನ್ ಎಸಿ ಬಸ್ ಫೇಮ್-2 ಯೋಜನೆಯಡಿ ಮಂಜೂರಾತಿ ಸಿಕ್ಕಿದ್ದು, ಅದರಲ್ಲಿ ಮೊದಲ ಹಂತವಾಗಿ 100 ಬಸ್​ಗಳು ಬಂದಿವೆ. ಡಿಸೆಂಬರ್ 26ಕ್ಕೆ ಈ ಬಸ್​ಗಳ ಚಾಲನೆಗೆ ಹಸಿರು ನಿಶಾನೆ ಸಿಗಲಿದೆ. ನಂತರ ಉಳಿದ ಬಸ್​ಗಳು ತಯಾರಾಗುತ್ತಿದ್ದಂತೆ ಬಿಎಂಟಿಸಿಗೆ ಸೇರ್ಪಡೆಯಾಗಲಿವೆ. ಈಗಾಗಲೇ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ 600ಕ್ಕೂ ಹೆಚ್ಚಿನ ಬಸ್​ಗಳ ಖರೀದಿ ಮುಗಿದು ಸೇವೆಗೆ ಚಾಲನೆ ನೀಡಲಾಗಿದೆ.

ಉಳಿದಂತೆ ಇನ್ನು ಎಲ್ಲ ನಿಗಮಕ್ಕೂ ಸೇರಿದಂತೆ ಐದಾರು ಟೆಂಡರ್ ಆಗಿದೆ. ಅದರಂತೆ ಕೆಎಸ್ಆರ್​ಟಿಸಿಗೆ 800ಕ್ಕೂ ಹೆಚ್ಚಿನ ಡೀಸೆಲ್ ಬಸ್​ಗಳು ಬರಲಿವೆ. ಇದರೊಂದಿಗೆ 325 ವಿದ್ಯುತ್ ಚಾಲಿತ ಹವಾನಿಯಂತ್ರಿತ ಬಸ್​ಗಳನ್ನೂ ಒಪ್ಪಂದದ ಮೂಲಕ ಕೆಎಸ್ಆರ್​ಟಿಸಿಗೆ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದರು.

100 ಪಲ್ಲಕ್ಕಿ ಬಸ್​ಗಳನ್ನು ಖರೀದಿ:ಇತ್ತೀಚಿನ ದಿನಗಳಲ್ಲಿ ಕೆಎಸ್ಆರ್​ಟಿಸಿ ಹೊಸದಾಗಿ ನಾನ್ ಎಸಿ ಸ್ಲೀಪರ್​ನ ಪಲ್ಲಕ್ಕಿ ಹೆಸರಿನ 40 ಬಸ್​ಗಳ ಖರೀದಿ ಮಾಡಿದೆ. ಅದಕ್ಕೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಬೇಡಿಕೆಯೂ ಹೆಚ್ಚಾಗಿದೆ. ಹಾಗಾಗಿ ಹೊಸದಾಗಿ ಮತ್ತು 100 ಪಲ್ಲಕ್ಕಿ ಬಸ್​ಗಳನ್ನು ಖರೀದಿ ಮಾಡಲಾಗುತ್ತಿದೆ. ಇದರಿಂದಾಗಿ ಕೆಎಸ್ಆರ್​ಟಿಸಿಯ ನಾನ್ ಎಸಿ ಸ್ಲೀಪರ್ ಸೇವೆಗೆ ಮತ್ತಷ್ಟು ಬಸ್​ಗಳು ಸೇರ್ಪಡೆಯಾದಂತಾಗಲಿವೆ ಎಂದರು.

ಬಿಎಂಟಿಸಿ ಬಸ್​ಗಳಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಿದೆ. ಈಗಾಗಲೇ 1800ಕ್ಕೂ ಹೆಚ್ಚಿನ ಬಸ್​ಗಳ ಖರೀದಿ ಪ್ರಕ್ರಿಯೆ ಆರಂಭಿಸಲಾಗಿದೆ. ಇದರ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿರುವ 300ಕ್ಕೂ ಹೆಚ್ಚಿನ ಬಸ್​ಗಳು ಸೇರ್ಪಡೆಯಾಗಲಿದ್ದು, ಒಟ್ಟು 2100ಕ್ಕೂ ಹೆಚ್ಚಿನ ಬಸ್​ಗಳು ಮುಂದಿನ ಒಂದು ವರ್ಷದ ಒಳಗೆ ನಿಗಮಕ್ಕೆ ಸೇರ್ಪಡೆಯಾಗಲಿವೆ ಎಂದು ಹೇಳಿದರು.

ಹಳೆಯ ಬಸ್​ಗಳು ಸಾರಿಗೆ ನಿಗಮಗಳಿಂದ ನಿವೃತ್ತಿಯಾಗಿ ಸ್ಕ್ರ್ಯಾಪ್​ಗೆ ಸೇರುತ್ತಿದ್ದಂತೆ ಹೊಸ ಬಸ್​ಗಳು ಸೇರ್ಪಡೆಯಾಗಲಿವೆ. ಯಾವ ಕಾರಣಕ್ಕೂ 15 ವರ್ಷ ಮೀರಿದ ಹಾಗು 10 ಲಕ್ಷ ಕಿಲೋಮೀಟರ್ ದಾಟಿದ ಬಸ್​ಗಳನ್ನು ಸಾರಿಗೆ ನಿಗಮಗಳಲ್ಲಿ ಸಂಚಾರಕ್ಕೆ ಅವಕಾಶ ನೀಡಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ :100 ಕರ್ನಾಟಕ ಸಾರಿಗೆ ಹಾಗೂ 40 ನಾನ್​ ಎಸಿ ಸ್ಲೀಪರ್ ಪಲ್ಲಕ್ಕಿ ಬಸ್​​​​ಗಳಿಗೆ ಸಿಎಂ, ಡಿಸಿಎಂ ಚಾಲನೆ

ABOUT THE AUTHOR

...view details