ಬೆಂಗಳೂರು: ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಲಿಂಗಾಯತ ಸಮುದಾಯದ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮವನ್ನು ಅಖಿಲ ಭಾರತ ವೀರಶೈವ ಮಹಾಸಭಾ ಹಮ್ಮಿಕೊಂಡಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ 135 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಹೊಸ ಇತಿಹಾಸ ಬರೆದಿದೆ. ಬಿಜೆಪಿ 66 ಸ್ಥಾನ, ಜೆಡಿಎಸ್ 19 ಸ್ಥಾನ ಪಡೆದರೆ ಇತರರು 4 ಸ್ಥಾನಗಳಲ್ಲಿ ಗೆಲ್ಲುವ ಮೂಲಕ 2023ರ ವಿಧಾಸಭೆ ಚುನಾವಣೆ ಮುಗಿಸಿದ್ದಾರೆ.
ಲಿಂಗಾಯತ ವೀರಶೈವ ಸಮುದಾಯದಿಂದ 54 ಮಂದಿ ಆಯ್ಕೆ: ಅವರಲ್ಲಿ ಲಿಂಗಾಯತ ಸಮುದಾಯದ ಶಾಸಕರನ್ನು ಲೆಕ್ಕ ಹಾಕುವುದಾದರೆ, ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಅತಿದೊಡ್ಡ ಸಮುದಾಯ ಆಗಿರುವ ಲಿಂಗಾಯತ ವೀರಶೈವ ಸಮುದಾಯದಿಂದ 54 ಮಂದಿ ಆಯ್ಕೆಯಾಗಿದ್ದಾರೆ. ಸಾಮಾನ್ಯವಾಗಿ ಲಿಂಗಾಯತ ವೀರಶೈವ ಸಮುದಾಯದವರು ಬಿಜೆಪಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಿದ್ದರು. ಆದರೆ, ಈ ಬಾರಿ ಕಾಂಗ್ರೆಸ್ ಪಕ್ಷದಿಂದ 34, ಬಿಜೆಪಿಯಿಂದ 19, ಜೆಡಿಎಸ್‍ನಿಂದ 2 ಹಾಗೂ ಒಬ್ಬರು ಪಕ್ಷೇತರ ಸದಸ್ಯರು ಶಾಸನ ಸಭೆಗೆ ಆಯ್ಕೆಯಾಗಿರುವುದು ವಿಶೇಷವಾಗಿದೆ.
ಸ್ಥಳ ಪರಿಶೀಲಿಸಿದ ಸಚಿವ ಖಂಡ್ರೆ..ಸಾರ್ವತ್ರಿಕ ಚುನಾವಣೆಯ ಬಳಿಕ ಚುನಾಯಿತರಾದ ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಶಾಸಕರು ಮತ್ತು ಸಚಿವರುಗಳನ್ನು ಸನ್ಮಾನಿಸಿ ಗೌರವಿಸುವ ಪರಂಪರೆಯನ್ನು ಹೊಂದಿರುವ ಅಖಿಲ ಭಾರತ ವೀರಶೈವ ಮಹಾಸಭಾ ಜುಲೈ 6 ರಂದು ಸಂಜೆ 5 ಗಂಟೆಗೆ ಬೆಂಗಳೂರು, ಮಲ್ಲೇಶ್ವರದ, ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಿದೆ. ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿಗಳೂ ಆಗಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಇಂದು ಸ್ಥಳ ಪರಿಶೀಲನೆ ಮಾಡಿದರು. ಮಹಾಸಭಾದ ಕಾರ್ಯದರ್ಶಿ ರೇಣುಕಾ ಪ್ರಸನ್ನ, ಶರಣು ಮೋದಿ ಸೇರಿದಂತೆ ಹಲವು ಪದಾಧಿಕಾರಿಗಳು ಹಾಜರಿದ್ದರು.
ಕೈ ಹಿಡಿದ ಲಿಂಗಾಯತರು..2008 ಮತ್ತು 2018ರಲ್ಲಿ ಬೆಂಬಲ ಸಿಕ್ಕಂತೆ ಲಿಂಗಾಯತ ಮತ ಬ್ಯಾಂಕ್ ಈ ಬಾರಿ ಬಿಜೆಪಿಗೆ ಒಲಿದಿಲ್ಲ. ಲಿಂಗಾಯತರು ಕರ್ನಾಟಕ ರಾಜ್ಯದ ಒಟ್ಟು ಜನಸಂಖ್ಯೆಯ ಸುಮಾರು 17-20 ಪ್ರತಿಶತವನ್ನು ಹೊಂದಿದ್ದಾರೆ. 2008ರಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು, ಕೊಟ್ಟ ಮಾತಿನಂತೆ ಅಧಿಕಾರ ಹಸ್ತಾಂತರಿಸದೇ ಜೆಡಿಎಸ್ ವಂಚಿಸಿದೆ ಎಂದು ಸಮುದಾಯದವರ ಮುಂದೆ ಕಣ್ಣೀರಿಟ್ಟಿದ್ದರು. ಆಗ ಸಮುದಾಯವು ಅವರನ್ನು ಸಂಪೂರ್ಣವಾಗಿ ಬೆಂಬಲಿಸಿತ್ತು.
2018 ರಲ್ಲಿ ಕಾಂಗ್ರೆಸ್ ವಿರುದ್ಧ ವೀರಶೈವರು ಮತ್ತು ಲಿಂಗಾಯತರನ್ನು ಒಡೆಯುವ ಆರೋಪ ಕೇಳಿಬಂದು ಬಿಜೆಪಿಗೆ ಉತ್ಸಾಹದಿಂದ ಲಿಂಗಾಯತ ಸಮುದಾಯದವರು ಮತ ಹಾಕಿದ್ದರು. 1967ರಲ್ಲಿ ಒಟ್ಟು ವೀರಶೈವ ಲಿಂಗಾಯತ ಶಾಸಕರ ಸಂಖ್ಯೆ 90 ಆಗಿತ್ತು. 1972ರಲ್ಲಿ 77 ಮತ್ತು 1983ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದಾಗ 77 ಇತ್ತು. ನಂತರ ಇತರೆ ಸಮುದಾಯಗಳು ಸೆಳೆದುಕೊಂಡವು. 1989ರಲ್ಲಿ ಕಾಂಗ್ರೆಸ್ ತನ್ನ ಅತ್ಯಧಿಕ 179 ಸ್ಥಾನಗಳನ್ನು ಗೆದ್ದಾಗ 41 ವೀರಶೈವ ಲಿಂಗಾಯತ ಶಾಸಕರಿದ್ದರು ಎಂಬುದನ್ನು ಇಲ್ಲಿ ಗಮನಿಸಬಹುದು.
ಇದನ್ನೂಓದಿ:ಬಿಎಸ್ವೈ ಅಧಿಕಾರದಿಂದ ಕೆಳಗಿಳಿಸಿದ್ದಕ್ಕೆ ಬಿಜೆಪಿ ಅಧಿಕಾರ ಕಳೆದುಕೊಂಡಿದೆ : ಸ್ವಪಕ್ಷದ ವಿರುದ್ಧವೇ ರೇಣುಕಾಚಾರ್ಯ ವಾಗ್ದಾಳಿ