ಕರ್ನಾಟಕ

karnataka

ETV Bharat / state

ಐದು ಸಾವಿರ ಪೊಲೀಸ್ ಪೇದೆ ನೇಮಕ: ಗೃಹ ಸಚಿವ ಆರಗ ಜ್ಞಾನೇಂದ್ರ - ಈಟಿವಿ ಭಾರತ ಕನ್ನಡ

ರಾಜ್ಯದಲ್ಲಿ ಈ ವರ್ಷ ಐದು ಸಾವಿರ ಪೊಲೀಸ್​ ಪೇದೆಗಳ ಹುದ್ದೆಯನ್ನು ಭರ್ತಿ ಮಾಡಲಾಗುವುದು. ಇನ್ನು ನೇಮಕಾತಿಯ ವಯೋಮಿತಿ ಸಡಿಲಿಕೆ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

5000-police-constables-appointed-says-araga-jnanendra
ಐದು ಸಾವಿರ ಪೊಲೀಸ್ ಪೇದೆ ನೇಮಕ : ಗೃಹ ಸಚಿವ ಆರಗ ಜ್ಞಾನೇಂದ್ರ

By

Published : Sep 20, 2022, 6:44 PM IST

ಬೆಂಗಳೂರು :ರಾಜ್ಯದಲ್ಲಿ ಈ ವರ್ಷ ಐದು ಸಾವಿರ ಪೊಲೀಸ್ ಪೇದೆಗಳ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಈ ನೇಮಕಾತಿಗಳಿಗೆ ವಯೋಮಿತಿ ಸಡಿಲಿಕೆ ಮಾಡುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ವಿಧಾನಸಭೆಯಲ್ಲಿ ತಿಳಿಸಿದರು.

ಪೊಲೀಸ್ ಪೇದೆಗಳ ನೇಮಕಾತಿ ವೇಳೆ ವಯೋಮಿತಿ ಸಡಿಲಿಕೆ ಮಾಡಬೇಕೆಂಬ ಬೇಡಿಕೆ ಇದೆ. ಅನೇಕರು ನನಗೂ ಕೂಡ ದೂರವಾಣಿ ಕರೆ ಮಾಡಿ ಸಡಿಲಿಕೆ ಮಾಡಿ ಎಂದು ಒತ್ತಡ ಹಾಕುತ್ತಿದ್ದಾರೆ. ಆದರೆ, ಸದ್ಯಕ್ಕೆ ಅಂತಹ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಹೇಳಿದರು.

ಇಂದು ಪ್ರಶ್ನೋತ್ತರ ವೇಳೆ ಬಿಜೆಪಿ ಶಾಸಕ ಪ್ರೀತಮ್ ಗೌಡ ಅವರು, ಪೊಲೀಸ್ ನೇಮಕಾತಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ವೇಳೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪೊಲೀಸ್ ನೇಮಕಾತಿಗೆ ವಯೋಮಿತಿ ಸಡಿಲಿಕೆ ಮಾಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸಾಮಾನ್ಯ ವರ್ಗಕ್ಕೆ 18 ರಿಂದ 25 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. 2 ವರ್ಷ ಕಡಿಮೆ ಮಾಡಬೇಕು ಎಂಬ ಒತ್ತಡ ಇದೆ. ಯುವಕರನ್ನೇ ನೇಮಕಾತಿ ಮಾಡಿಕೊಳ್ಳುತ್ತಿರುವುದರಿಂದ ಸಡಿಲಿಕೆ ಸಾಧ್ಯವಿಲ್ಲ ಎಂದರು.

ಗೃಹ ಇಲಾಖೆಯಲ್ಲಿ ಪ್ರಸ್ತುತ 9,432 ಹುದ್ದೆಗಳು ಖಾಲಿ ಇವೆ. ಪೊಲೀಸ್ ಪೇದೆ (ಸಿವಿಲ್)-2874, ಸಿಎಎಆರ್/ಡಿಎಆರ್ 3512, ಪಿಸಿ (ಎಫ್‍ಪಿಬಿ)-5, ಪಿಸಿ(ವೈರ್‌ಲೆಸ್)-99, ಆರ್ ಪಿಸಿ ( ಕೆಎಸ್ ಆರ್ ಪಿ) 2757, ಪಿಸಿ (ಕೆಎಸ್/ಐಎಸ್‍ಎಫ್) 185 ಹುದ್ದೆಗಳು ಖಾಲಿಯಿವೆ ಎಂದು ಹೇಳಿದರು.

ಒಟ್ಟು ಐದು ಸಾವಿರ ಹುದ್ದೆಗಳು ಭರ್ತಿ: ನಾವು ಅಧಿಕಾರ ವಹಿಸಿಕೊಂಡಾಗ 22,000 ಹುದ್ದೆಗಳು ಖಾಲಿ ಇದ್ದವು. ಒಂದು ಕಾಲದಲ್ಲಿ 35 ಸಾವಿರ ಹುದ್ದೆ ಹಾಗೇ ಉಳಿದಿದ್ದವು. 12-09-2020ರಲ್ಲಿ 3500 ಪೊಲೀಸ್ ಪೇದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಈ ಬಾರಿ 1500 ಪೊಲೀಸ್ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸುತ್ತೇವೆ. ಒಟ್ಟು 5 ಸಾವಿರ ಹುದ್ದೆಗಳು ಭರ್ತಿಯಾಗಲಿವೆ ಎಂದರು.

ಈ ವೇಳೆ ಪ್ರೀತಂಗೌಡ ಅವರು ಖಾಲಿ ಇರುವ ಹುದ್ದೆಗಳನ್ನು ಆದಷ್ಟು ಶೀಘ್ರ ಭರ್ತಿ ಮಾಡುವುದರಿಂದ ನಿರುದ್ಯೋಗ ಸಮಸ್ಯೆ ಕಡಿಮೆಯಾಗುತ್ತದೆ ಎಂದು ಸರ್ಕಾರಕ್ಕೆ ಸಲಹೆ ಮಾಡಿದರು. ಇದಕ್ಕೆ ಆಕ್ಷೇಪಿಸಿದ ಸಚಿವ ಆರಗ ಜ್ಞಾನೇಂದ್ರ, ಪೊಲೀಸ್ ಇಲಾಖೆಯಲ್ಲಿ ನಿರುದ್ಯೋಗ ನಿವಾರಣೆಯಾಗಲಿ ಎಂದು ಉದ್ಯೋಗ ತುಂಬುವುದಿಲ್ಲ. ದೈಹಿಕವಾಗಿ ಸಾಮರ್ಥ್ಯ ಇರುವವರನ್ನು ಮಾತ್ರ ಆಯ್ಕೆ ಮಾಡುತ್ತೇವೆ. ಕೊರೊನಾ ಸಂಕಷ್ಟದಲ್ಲೂ ಹುದ್ದೆಗಳಿಗೆ ನೇಮಕ ಮಾಡಿದ್ದೇವೆ. ಹೀಗಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವುದಿಲ್ಲ ಎಂದರು.

ಹೊಸ ಪೊಲೀಸ್ ಠಾಣೆ ಇಲ್ಲ: ಗೌರಿಬಿದನೂರಿನ ತೊಂಡೆಬಾವಿಯಲ್ಲಿ ಕೇಂದ್ರೀಯ ಪೊಲೀಸ್ ಮಾನದಂಡಗಳ ಪ್ರಕಾರ ಹೊಸ ಪೊಲೀಸ್ ಠಾಣೆಯನ್ನು ನೀಡಲು ಸಾಧ್ಯವಿಲ್ಲ. ಈಗ ಅಲ್ಲಿ ಪೊಲೀಸ್ ಹೊರ ಠಾಣೆ ಕಾರ್ಯನಿರ್ವಹಿಸುತ್ತಿದೆ ಎಂದು ಕಾಂಗ್ರೆಸ್ ಸದಸ್ಯ ಶಿವಶಂಕರರೆಡ್ಡಿ ಅವರ ಪ್ರಶ್ನೆಗೆ ಗೃಹ ಸಚಿವರು ಉತ್ತರಿಸಿದರು.

ಯಾವುದೇ ಹೊಸ ಪೊಲೀಸ್ ಠಾಣೆಯನ್ನು ಆರಂಭಿಸಬೇಕಾದರೆ ಆ ಭಾಗದ 150 ಚದುರ ಕಿಮೀ. ವ್ಯಾಪ್ತಿಯಲ್ಲಿರಬೇಕು. ಜನ ಸಂಖ್ಯೆ 60 ಸಾವಿರಕ್ಕಿಂತ ಹೆಚ್ಚಿರಬೇಕು. ಮತ್ತು ವಾರ್ಷಿಕ ಸರಾಸರಿ 300 ಕ್ಕಿಂತ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿರಬೇಕು. ಇಲ್ಲಿನ ಜನ ಸಜ್ಜನರಿದ್ದಾರೆ. ಅಷ್ಟು ಅಪರಾಧ ಪ್ರಕರಣಗಳು ಇಲ್ಲ ಎಂದು ಹೇಳಿದರು.

ಪೊಲೀಸರ ವಸತಿ ಗೃಹ ನಿರ್ಮಾಣ: ಪೊಲೀಸ್ ಕ್ಷೇಮಾಭಿವೃದ್ಧಿಗಾಗಿ ಪೊಲೀಸ್ ವಸತಿ ಗೃಹ - 2025 ಯೋಜನೆಯನ್ನು 2740 ಕೋಟಿ ರೂ. ಮೊತ್ತದಲ್ಲಿ ಪ್ರಾರಂಭಿಸಿದ್ದು, 10,032 ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಪ್ರಶ್ನೋತ್ತರ ವೇಳೆ ಶಾಸಕ ಐಹೊಳೆ ಡಿ.ಮಹಾಲಿಂಗಪ್ಪ ಅವರ ಪ್ರಶ್ನೆಗೆ ಅವರು ಉತ್ತರಿಸಿದರು.

ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ 5,159 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, 2302 ವಸತಿ ಗೃಹಗಳಿವೆ. ಪೊಲೀಸ್ ಗೃಹ 2025 ರಡಿ ಲಭ್ಯವಾಗುವ ವಸತಿ ಗೃಹಗಳನ್ನು ಆಧರಿಸಿ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳು ವಸತಿ ಗೃಹ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಪೊಲೀಸ್ ಹೊರಠಾಣೆ ಇದ್ದು, ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಕ್ರೆಸರ್ ವಲಯ ಇರುವುದರಿಂದ ಪೊಲೀಸ್ ಠಾಣೆಯಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಕಾಂಗ್ರೆಸ್ ಶಾಸಕ ನಂಜೇಗೌಡ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ಶಾಸಕ ಕೆ.ರಘುಪತಿ ಭಟ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರಾವಳಿ ಕಾವಲು ಪೊಲೀಸ್ ಘಟಕದಲ್ಲಿ 13 ಬೋಟ್‍ಗಳಿದ್ದು, ಇವುಗಳಲ್ಲಿ ಎರಡು ದುರಸ್ತಿಯಲ್ಲಿವೆ. ಬೋಟ್‍ಗಳ ಮೇಲ್ದರ್ಜೆಗೆ 22 ಕೋಟಿ ರೂ. ಒದಗಿಸಲಾಗಿದೆ ಎಂದು ಹೇಳಿದರು.

ರಕ್ಷಣಾ ಕಾರ್ಯಕ್ಕಾಗಿ 20 ಮೀಟರ್ ಬೋಟ್ ಹಾಗೂ ಸಮುದ್ರ ಆ್ಯಂಬುಲೆನ್ಸ್ ಹಾಗೂ ಹೆಚ್ಚುವರಿ ಬೋಟ್ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು. 12 ನಾಟಿಕಲ್ ವ್ಯಾಪ್ತಿಯೊಳಗೆ ವಾಸಿಸುವ ಹೊರರಾಜ್ಯದ ಮೀನುಗಾರರಿಗೆ ಮೀನಿನ 5 ಪಟ್ಟು ದಂಡ ವಿಧಿಸುವ ಬಗ್ಗೆ ರಾಜ್ಯ ಮೀನುಗಾರರ ಹಿತದೃಷ್ಟಿಯಿಂದ ಪರಿಶೀಲಿಸಲಾಗುವುದು ಎಂದರು.

ಇದನ್ನೂ ಓದಿ :ಪಂಚಮಸಾಲಿ ಮೀಸಲಾತಿ ಬಗ್ಗೆ ಸದನದಲ್ಲಿ ಮತ್ತೆ ಪ್ರಸ್ತಾಪ ಮಾಡಿದ ಯತ್ನಾಳ್​​ : ಸಿಎಂ ಕೊಟ್ಟ ಉತ್ತರವೇನು ?

ABOUT THE AUTHOR

...view details