ಬೆಂಗಳೂರು:ಕಳೆದ ಎರಡು ತಿಂಗಳಲ್ಲಿ ವರ್ಗಾವಣೆ ಮೂಲಕ 500 ಕೋಟಿ ರೂಪಾಯಿ ವ್ಯವಹಾರವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ವರ್ಗಾವಣೆಯಲ್ಲೇ ಕಳೆದ ಎರಡು ತಿಂಗಳಲ್ಲಿ 500 ಕೋಟಿ ರೂ. ವ್ಯವಹಾರ ಆಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ರೀತಿ ಆದರೆ ರಾಜ್ಯ ಉಳಿಯುತ್ತಾ?. ಇವುಗಳಿಗೆ ಎಲ್ಲಿಂದ ದಾಖಲೆ ತರುವುದು? ಎಂದು ಪ್ರಶ್ನಿಸಿದರು.
ಮೊನ್ನೆ ಕೃಷಿ ಇಲಾಖೆಗೆ ಸಂಬಂಧಿಸಿದಂತೆ ರೇಟ್ ಕಾರ್ಡ್ ತೋರಿಸಿದ್ದೆ. ಅದಕ್ಕೆ ಪ್ರತಿಯಾಗಿ ಕಲಾಪದಲ್ಲಿ ಸಿಎಂ ಸಿದ್ದರಾಮಯ್ಯ ಪತ್ರಿಕಾ ವರದಿಯನ್ನು ತೋರಿಸಿದ್ದರು. ನನ್ನ ಕಾಲದಲ್ಲಿ ಲಂಚ ಪಡೆಯಲಾಗಿದೆ ಎಂದು ಹೇಳಿದ್ದಾರೆ. ಯಾವುದಪ್ಪ ನನ್ನ ಕಾಲದಲ್ಲಿ ಅವ್ಯವಹಾರ ಆಗಿದೆ ಎಂದು ನಾನೇ ಭಯಗೊಂಡೆ. ಪತ್ರಿಕಾ ವರದಿ ತರಿಸಿ ನೋಡಿದೆ. ಅದರಲ್ಲಿ 2008 -2013 ರಲ್ಲಿ ಮಾಗಡಿ ಕ್ಷೇತ್ರದಲ್ಲಿ 600 ಕೋಟಿ ರೂ. ಅಕ್ರಮದ ಬಗ್ಗೆ ತಿಳಿಸಿದ್ದಾರೆ. ಇದು ನಾನು ಸಿಎಂ ಆಗುವ ಮೊದಲು ಆಗಿದ್ದ ಪ್ರಕರಣ. 40% ಕಮಿಷನ್ ಹೇಳುತ್ತರಲ್ಲಾ ಇವರು, ಈ ಪತ್ರಿಕಾ ವರದಿಯಲ್ಲಿ 58% ಕಮಿಷನ್ ಎಂದು ಬರೆದಿದ್ದಾರೆ. ರೇವಣ್ಣ ಅವರಿಗಾಗಲಿ, ನನಗಾಗಲಿ ಯಾವನಾದರು ಏನಾದರು ಕೊಟ್ಟಿರುವುದನ್ನು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಅದೇನೋ ಸೂರಿ ಪಾಯಲಾ ಅಂತೆ. ಪಾಯಲ್ ಎಂಬವನು ಕನ್ನಡಿಗನಾ?. ವಿದೇಶಿಗ ಇರಬೇಕು? ಎಂದು ಹೆಚ್ಡಿಕೆ ವ್ಯಂಗ್ಯವಾಡಿದರು. ಸಿದ್ದರಾಮಯ್ಯ ಅವಧಿಯಲ್ಲಿ ಹಣಕಾಸು ಇಲಾಖೆಯ ಅನುಮತಿ ಇಲ್ಲದೆ 1,500 ಕೋಟಿ ರೂ. ಕಾರ್ಯಾದೇಶವನ್ನೂ ಕೊಟಿದ್ದರು. ಈಗ 40 ಜನ ನಾಯಕರನ್ನು ಕರೆದು ಅದೇನು ದೇಶಕ್ಕೆ ಸಂದೇಶ ಕೊಡುತ್ತಾರೆ ಅನ್ನೋದನ್ನು ನೋಡೋಣ ಎಂದರು.
ರೈತರ ಸಮಾಧಿ ಮೇಲೆ ಮಹಾಘಟಬಂಧನ ಮಾಡುತ್ತಿದ್ದೀರಿ: ಯಾವ ಪುರುಷಾರ್ಥಕ್ಕೆ ಇಲ್ಲಿ ಮಹಾಘಟಬಂಧನ ಮಾಡುತ್ತಿದ್ದೀರಾ? ಎಂದು ವಾಗ್ದಾಳಿ ನಡೆಸಿದ ಹೆಚ್ಡಿಕೆ, ಪ್ರಸ್ತುತ ರಾಜಕಾರಣ ಬೆಳವಣಿಗೆ ರಾಜ್ಯದ ರಾಜಧಾನಿಗೆ ವರ್ಗಾವಣೆ ಆಗಿದೆ. ಮಹಾಘಟಬಂಧನಕ್ಕೆ ಹಲವಾರು ಪಕ್ಷಗಳು ದೇಶದ ನಾನಾ ನಾಯಕರಿಗೆ ಆಹ್ವಾನ ನೀಡಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣ ಹಾಗೂ ಹೆಚ್ಎಎಲ್ ರಸ್ತೆಯ ಇಕ್ಕೆಲಗಳಲ್ಲೂ ಕಟೌಟ್ ಮೇಲೆ ಕಟೌಟ್ ಹಾಕಿದ್ದಾರೆ. ಯಾರ ಸಮಾಧಿ ಮೇಲೆ ಮಹಾಘಟಬಂಧನ ನಾಯಕರಿಗೆ ಕಟೌಟ್ ಮೂಲಕ ಸ್ವಾಗತ ಕೋರುತ್ತಿದ್ದೀರಾ? ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಸಮಾಧಿ ಮೇಲೆ ವಿಜೃಂಭಣೆಯಿಂದ ಕಟೌಟ್ ಹಾಕಿ ಸ್ವಾಗತ ಕೋರಿದ್ದೀರ. ರೈತರ ಬಗ್ಗೆ ಯಾವ ಸಚಿವರು ಅನುಕಂಪದ ಮಾತನಾಡಿಲ್ಲ. ಅದೇನೂ ಗ್ಯಾರಂಟಿ ಮಾಡೆಲ್. ಗ್ಯಾರಂಟಿ ಜಾರಿಯಾದ ಬಳಿಕನೇ 42 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು. ಈ ಮಾಡೆಲ್ ಅನ್ನು ದೇಶಕ್ಕೆ ಕೊಡಲು ಹೊರಟಿದ್ದಾ? ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಕಳೆದ ಬಾರಿ ವಿಧಾನಸೌಧದ ಮುಂದೆ ನಾವೆಲ್ಲರೂ ಕೈ ಎತ್ತಿನೇ ನಿಂತಿದ್ದೆವು. ಆ ಮೇಲೆ ಏನಾಯಿತು ಗೊತ್ತಲ್ಲ. ಮಹಾಘಟಬಂಧನಕ್ಕೆ ಆವತ್ತು ಆದ ಗತಿಯೇ ಆಗುತ್ತೆ ಎಂದು ಹೆಚ್ಡಿಕೆ ವ್ಯಂಗ್ಯವಾಡಿದ್ದಾರೆ.
ಏನು ನಿಮ್ಮ ಸಾಧನೆ?. ನೀವು ಕೃಷಿಗೆ, ನೀರಾವರಿಗೆ ಅನುದಾನ ಕಡಿತ ಮಾಡಿದ್ದೀರಾ. ಯಾವ ಪುರುಷಾರ್ಥಕ್ಕೆ ಇಲ್ಲಿ ಮಹಾಘಟಬಂಧನ ಮಾಡುತ್ತಿದ್ದೀರಾ?. ನನ್ನ ರಾಜ್ಯದ ರೈತರ ಆತ್ಮಹತ್ಯೆ ಹುಡುಕಾಟ ಅಲ್ಲ. ನಿಮ್ಮ ಮಹಾಘಟಬಂಧನದಲ್ಲಿ ರಾಜ್ಯದ ರೈತರ ಬದುಕು ಏನು ಎಂದು ಹೇಳಿ. ಇವರು ಐದು ವರ್ಷದಲ್ಲಿ ಅಧಿಕಾರದಲ್ಲಿದ್ದಾಗ ಮಾಡಿದ ಸಾಲ ಏನಿತ್ತು?. ಎರಡು ವರ್ಷದಲ್ಲಿ ಸಿದ್ದರಾಮಯ್ಯ ಅವರು 28,000 ಕೋಟಿ ರೂ. ಸಾಲ ಮಾಡಿದ್ದರು. ಬಿಜೆಪಿ ಅವಧಿಯಲ್ಲಿ ಕೋವಿಡ್ ಇತ್ತು. ಈಗ ಏನಕ್ಕೆ 85,000 ಕೋಟಿ ರೂ. ಸಾಲ ಮಾಡಿದ್ದೀರ?. ನೀರಾವರಿ, ಕೃಷಿಗೆ ಎಲ್ಲಿ ಹೆಚ್ಚುವರಿ ಅನುದಾನ ಕೊಟ್ಟಿದ್ದೀರಿ?. ಒಂದು ಒಳ್ಳೆ ಹೆಸರು ಮಾಡಿ ಹೋಗಿ. ಬೀದಿ ಬೀದಿಯಲ್ಲಿ ಈ ತರದ ಆರೋಪ ನಾನು ಎಂದೂ ಕೇಳಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಮೇಯ್ತಾ ಇದ್ದಾರೆ:ಮಹಾಘಟಬಂಧನಕ್ಕೆ ಹಣ ಎಲ್ಲಿಂದ ಎಂಬ ಬಗ್ಗೆ ಪ್ರತಿಕ್ರಿಯಿಸುತ್ತಾ, ಕಾಂಗ್ರೆಸ್ ನವರು ಮೇಯ್ತಾ ಇದ್ದಾರೆ. ಇಲ್ಲಿ ಖಜಾನೆ ಚೆನ್ನಾಗಿದೆ. ದೇಶಕ್ಕೆ ಇವರೇ ಹಂಚಬೇಕಲ್ಲಾ. ಈಗ ಮೇಯಿಸುತ್ತಿದ್ದಾರೆ. ನಮ್ಮದು ಸಂಪದ್ಬರಿತವಾದ ರಾಜ್ಯವಾಗಿದೆ. ರಾಜ್ಯವನ್ನು ಅಮಿತ್ ಶಾ ಹೇಳಿದಂತೆ ಎಟಿಎಂ ಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ನಾನು ತಾಜ್ ವೆಸ್ಟ್ನಲ್ಲಿದ್ದರೆ ಮಹಾ ಅಪರಾಧ. ಈಗ ಎಲ್ಲರೂ ಅಲ್ಲೇ ಇದ್ದಾರೆ. ಅವರು ಮಾಡಿದರೆ ಘನಂಧಾರಿ ಕೆಲಸ. ನಾವು ಮಾಡಿದರೆ ಮಹಾಪರಾಧ ಎಂದು ಹೆಚ್ಡಿಕೆ ತಿರುಗೇಟು ಕೊಟ್ಟಿದ್ದಾರೆ.