ಬೆಂಗಳೂರು:ಸೈಬರ್ ಕ್ರೈಂ ಇದೀಗ ಯಾರಿಗೆ ಗೊತ್ತಿಲ್ಲ ಹೇಳಿ. ಇಂದಿನ ಹೈಟೆಕ್ ಜಮಾನದಲ್ಲಿ ಟೆಕ್ನಾಲಜಿ ಹೆಚ್ಚು ಬಳಕೆಯಾಗುತ್ತಿದ್ದಂತೆ ದುರ್ಬಳಕೆ ಪ್ರಮಾಣವು ಅಧಿಕವಾಗುತ್ತಿದೆ. ಕಾಲ ಬದಲಾದಂತೆ ಸೈಬರ್ ಚೋರರು ಹೊಸ ಹೊಸ ಐಡಿಯಾ ಬಳಸಿ ಹಣ ಲೂಟಿ ಹೊಡೆಯುವ ಮಾರ್ಗ ಕಂಡು ಕೊಂಡಿದ್ದಾರೆ. ಕಳೆದ ಏಳು ವರ್ಷಗಳಲ್ಲಿ ರಾಜಧಾನಿಯಲ್ಲಿ 50 ಸಾವಿರಕ್ಕಿಂತ ಹೆಚ್ಚು ಸೈಬರ್ ಪ್ರಕರಣಗಳು ದಾಖಲಾಗಿರುವುದೇ ಚೋರರ ಚಾಣಾಕ್ಷತನಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಡಿಜಿಟಲ್ ವಹಿವಾಟು:ತರಕಾರಿ ಖರೀದಿಯಿಂದ ಹಿಡಿದು ಸಿನಿಮಾ ಬುಕ್ ಮಾಡುವವರೆಗೂ ಎಲ್ಲವೂ ಇಂದು ಆನ್ಲೈನ್ ಮಯವಾಗಿದೆ. ಹಣಕಾಸಿನ ವಹಿವಾಟು ಡಿಜಿಟಲ್ ರೂಪದಲ್ಲಿ ಬಹುತೇಕ ನಡೆಯುತ್ತಿದೆ. ಡೆಬಿಟ್ ಕಾರ್ಡ್, ಒಟಿಪಿ, ಬಹುಮಾನದ ಆಸೆ ಹೀಗೆ.. ನಾನಾ ತರಹದ ಕಾರಣಗಳನ್ನು ನೀಡಿ ಜನರನ್ನು ಮಂಕುಬೂದಿ ಎರಚಿ ಕೋಟ್ಯಂತರ ರೂ. ಹಣವನ್ನ ಸೈಬರ್ ಖದೀಮರು ಲೂಟಿ ಮಾಡಿದ್ದಾರೆ ಮತ್ತು ಮಾಡ್ತಿದ್ದಾರೆ.
ಏಳು ವರ್ಷಗಳಲ್ಲಿ 50 ಸಾವಿರ ಪ್ರಕರಣ: ಆನ್ಲೈನ್ ವಂಚನೆ ಪ್ರಕರಣ ಹೆಚ್ಚಾಗುತ್ತಿದ್ದಂತೆ ಬೆಂಗಳೂರು ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ 2017ರ ಮಾರ್ಚ್ನಲ್ಲಿ ಸೈಬರ್ ಕೈಂ ಪೊಲೀಸ್ ಠಾಣೆ ತೆರೆಯಲಾಯಿತು. ಇದಾದ ಕೆಲ ವರ್ಷಗಳಲ್ಲಿ ನಗರದ ವಲಯಕ್ಕೊಂದರಂತೆ 8 ಸೈಬರ್, ಆರ್ಥಿಕ, ನಾರ್ಕೋಟಿಕ್ಸ್ ವಿಭಾಗದ (ಸೆನ್ ) ಪೊಲೀಸ್ ಠಾಣೆಗಳನ್ನ ತೆರೆದು ದೂರು ದಾಖಲಿಸುವ ಕೆಲಸವಾಯಿತು. ವರ್ಷದಿಂದ ವರ್ಷಕ್ಕೆ ದಾಖಲಾಗುವ ಆನ್ಲೈನ್ ವಂಚನೆ ಪ್ರಕರಣಗಳು ಅಧಿಕವಾಗುತ್ತಲೇ ಇದೆ. ಕಳೆದ ಏಳು ವರ್ಷಗಳಲ್ಲಿ 50027 ಪ್ರಕರಣ ದಾಖಲಾಗಿವೆ ಎಂದು ಪೊಲೀಸ್ ಇಲಾಖೆ ನೀಡಿದ ಅಂಕಿ - ಅಂಶಗಳೇ ಪುಷ್ಟಿಕರಿಸಿದೆ.
ಡಿಜಿಟಲ್ ಪ್ರಪಂಚದಲ್ಲಿ ವಂಚನೆ ಮಾಮೂಲಿ: ಡಿಜಿಟಲ್ ಪ್ರಪಂಚದಲ್ಲಿ ಸೈಬರ್ ಕ್ರೈಂ ವಂಚನೆ ಮಾಮೂಲಿಯಂತಾಗಿದೆ. ಎಲ್ಲೋ ಕುಳಿತು ಜಗತ್ತಿನ ಯಾವುದೇ ಮೂಲೆಯ ಜನರಿಗೂ ಮೋಸ ಮಾಡುವುದನ್ನ ಖದೀಮರು ಕರಗತ ಮಾಡಿಕೊಂಡಿದ್ದಾರೆ. ಹೊಸ ಹೊಸ ವಿಧಾನ ಬಳಸಿ ಆಯಾ ಕಾಲಕ್ಕೆ ಅನುಗುಣವಾಗಿ ಸಾರ್ವಜನಿಕರನ್ನು ತಮ್ಮತ್ತ ಸೆಳೆದು ಅವರನ್ನು ನಂಬಿಸಿ ಕೋಟ್ಯಂತರ ರೂಪಾಯಿ ಹಣವನ್ನ ಕ್ಷಣಾರ್ಧದಲ್ಲೇ ವಂಚಿಸಿದ್ದಾರೆ.