ಬೆಂಗಳೂರು:ಸರ್ಕಾರಿ ಆದೇಶದ ಅನ್ವಯ ಸಂಚಾರಿ ದಂಡ ಪಾವತಿಗೆ 50 ಶೇಕಡಾ ರಿಯಾಯಿತಿ ನೀಡಿರುವುದಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ನಾಲ್ಕನೇ ದಿನವೂ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ದಂಡ ಪಾವತಿಸುತ್ತಿದ್ದು, 25 ಕೋಟಿ ರೂ ದಂಡ ಸಂಗ್ರಹವಾಗಿದೆ. ಫೆಬ್ರವರಿ 2ರಿಂದ ಇಲ್ಲಿಯವರೆಗೂ 8,68,405 ಪ್ರಕರಣಗಳಿಗೆ ಸಂಬಂಧಿಸಿದಂತೆ 25,42,52,000 ಕೋಟಿಗೂ ಅಧಿಕ ಮೊತ್ತದ ದಂಡ ಸಂಗ್ರಹವಾಗಿದ್ದು, ಇನ್ನೂ 1 ಕೋಟಿಗೂ ಅಧಿಕ ಪ್ರಕರಣಗಳು ಇತ್ಯರ್ಥವಾಗಬೇಕಿದೆ ಎಂದು ಸಂಚಾರ ವಿಭಾಗದ ವಿಶೇಷ ಆಯುಕ್ತ ಎಂ.ಎ. ಸಲೀಂ ತಿಳಿಸಿದ್ದಾರೆ.
ಪೊಲೀಸ್ ಠಾಣೆ, ಬೆಂಗಳೂರು ಒನ್ ಸೆಂಟರ್, ಪೇಟಿಎಂಗಳಲ್ಲಿ ದಂಡ ಪಾವತಿಗೆ ಅವಕಾಶ ನೀಡಲಾಗಿದ್ದು, ದಂಡ ವಿಧಿಸಿರುವುದರಲ್ಲಿ ಸಮಸ್ಯೆಗಳಿದ್ದರೆ ಇನ್ಫ್ಯಾಂಟ್ರಿ ರಸ್ತೆಯಲ್ಲಿರುವ ಸಂಚಾರ ನಿಯಂತ್ರಣ ಕೇಂದ್ರಕ್ಕೆ ಭೇಟಿ ನೀಡಿ ಪರಿಹರಿಸಿಕೊಳ್ಳಬಹುದಾಗಿದೆ. ದಂಡ ಪಾವತಿ ಮಾಡುವ ವೇಳೆ, ಕೆಲವು ನಕಲಿ ನಂಬರ್ ಪ್ಲೇಟ್ಗಳಿಂದ ಸಮಸ್ಯೆಯಾಗಿರುವ ಬಗ್ಗೆಯೂ ದೂರುಗಳು ಬರುತ್ತಿದ್ದು, ಅಂತಹವುಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಡಾ. ಎಂ.ಎ. ಸಲೀಂ ತಿಳಿಸಿದ್ದಾರೆ.
50% ವಿನಾಯಿತಿ ಕಾಲಮಿತಿ ಮೂರು ತಿಂಗಳು ವಿಸ್ತರಿಸುವಂತೆ ಆಪ್ ಮಾಧ್ಯಮ ಸಂಚಾಲಕ ಜಗದೀಶ್ ಸದಂ ಸಿಎಂಗೆ ಪತ್ರ:ನಿಯಮ ಉಲ್ಲಂಘನೆಯ ದಂಡದ ಬಾಕಿ ಮೊತ್ತ ಪಾವತಿಯ ಶೇ. 50 ವಿನಾಯಿತಿಯ ಕಾಲಮಿತಿಯನ್ನು ಮೂರು ತಿಂಗಳು ವಿಸ್ತರಿಸಬೇಕು ಎಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಮನವಿ ಮಾಡಿದ್ದಾರೆ.