ಬೆಂಗಳೂರು: ಸಕಲೇಶಪುರ ಅರಣ್ಯದಲ್ಲಿ ಸಂಭವಿಸಿದ ಕಾಳ್ಗಿಚ್ಚಿನಿಂದಾಗಿ ಮೃತಪಟ್ಟಿರುವ ಸುಂದರೇಶ್ ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಲಾಗಿದೆ. ಮೃತರ ಪತ್ನಿಗೆ ಸರ್ಕಾರಿ ಕೆಲಸ ನೀಡಲಾಗುವುದು ಎಂದು ಸಿಎಂ ಪರವಾಗಿ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ವಿಧಾನಸಭೆಯಲ್ಲಿ ಭರವಸೆ ನೀಡಿದ್ದಾರೆ. ಶೂನ್ಯವೇಳೆಯಲ್ಲಿ ಜೆಡಿಎಸ್ ಸದಸ್ಯ ಹೆಚ್.ಕೆ.ಕುಮಾರಸ್ವಾಮಿ ಅವರು ಮಾಡಿದ ಪ್ರಸ್ತಾಪಕ್ಕೆ ಸ್ಪಂದಿಸಿದ ಸಚಿವರು, ಕಾಳ್ಗಿಚ್ಚಿನಿಂದಾಗಿ ಮೃತಪಟ್ಟು ಸಂಕಷ್ಟಕ್ಕೀಡಾಗಿರುವ ಸುಂದರೇಶ್ ಕುಟುಂಬದ ಬೆಂಬಲಕ್ಕೆ ಸರ್ಕಾರ ನಿಂತಿದೆ.
ಕಾಡಿನ ಬೆಂಕಿ ಅವಘಡಗಳಲ್ಲಿ ಮೃತಪಟ್ಟವರಿಗೆ ನೀಡುತ್ತಿದ್ದ 30 ಲಕ್ಷ ರೂ ಪರಿಹಾರದ ಬದಲಿಗೆ 50 ಲಕ್ಷ ರೂ. ನೀಡಲಾಗಿದೆ. ಕಾಳ್ಗಿಚ್ಚಿನಲ್ಲಿ ಗಾಯಗೊಂಡ ಮತ್ತೊಬ್ಬರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಹೆಚ್ಚು ಪರಿಹಾರ ನೀಡಲು ಒತ್ತಾಯ: ಇದಕ್ಕೂ ಮುನ್ನ ಮಾತನಾಡಿದ ಹೆಚ್.ಕೆ. ಕುಮಾರಸ್ವಾಮಿ ವಿಷಯ ಪ್ರಸ್ತಾಪಿಸಿ, ರಕ್ಷಿತ ಅರಣ್ಯ ಪ್ರದೇಶದಲ್ಲಿ ಸಂಭವಿಸಿದ ಕಾಳ್ಗಿಚ್ಚಿನಲ್ಲಿ ಗಾಡ್ ಸುಂದರೇಶ್ ಮೃತಪಟ್ಟಿದ್ದರಿಂದ ಅವರ ಕುಟುಂಬ ತುಂಬಾ ಕಷ್ಟದಲ್ಲಿದೆ. ಕಾಳ್ಗಿಚ್ಚಿನ ಸಂದರ್ಭದಲ್ಲಿ 5 ಜನರು ಗಾಯಗೊಂಡಿದ್ದರು. ಈ ಪೈಕಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಹೆಚ್ಚಿನ ಪರಿಹಾರ ನೀಡಬೇಕು. ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದು ಆಗ್ರಹಿಸಿದರು.
ಶರಾವತಿ ಜಲಾಶಯ, ಜಮೀನು ನೀಡಿದ್ದವರನ್ನು ಕೈಬಿಡುವುದಿಲ್ಲ: ಶರಾವತಿ ಜಲಾಶಯಕ್ಕಾಗಿ ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ. ಅವರಿಗೆ ಮುಂದಿನ 15 ದಿನದ ಒಳಗೆ ಪರ್ಯಾಯ ಜಮೀನು ನೀಡಲು ಸರಕಾರದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಸಚಿವ ಮಾಧುಸ್ವಾಮಿ ಭರವಸೆ ನೀಡಿದರು.
ಜಮೀನು ಪುನರ್ ವಸತಿ ಕಲ್ಪಿಸಲು ಸರ್ಕಾರ ಬದ್ಧ: ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯ ಹರತಾಳು ಹಾಲಪ್ಪ ಮತ್ತು ಕುಮಾರ ಬಂಗಾರಪ್ಪ ಅವರು ಮಾಡಿದ ಪ್ರಸ್ತಾವನೆಗಳಿಗೆ ಉತ್ತರಿಸಿದ ಸಚಿವರು, ಜಮೀನು ಕಳೆದುಕೊಂಡವರಿಗೆ ಪರ್ಯಾಯ ಜಮೀನು ಮತ್ತು ಪುನರ್ ವಸತಿ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಜಮೀನು ಮಂಜೂರು ಮಾಡಲು ಸರ್ಕಾರ ಕೈಗೊಂಡಿದ್ದ ಕ್ರಮದ ವಿರುದ್ಧ ಕೆಲವು ಪರಿಸರವಾದಿಗಳು ನ್ಯಾಯಾಲಯದ ಮೊರೆ ಹೋಗಿದ್ದರಿಂದ ವಿಳಂಬವಾಗಿದೆ. ಆದಷ್ಟು ಬೇಗ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಒದಗಿಸಲಾಗುವುದು ಎಂದು ಹೇಳಿದರು.
ಸಂತ್ರಸ್ತರು ಭಯಪಡುವ ಅಗತ್ಯವಿಲ್ಲ: ಸಂತ್ರಸ್ತರು ಯಾರು ಆತಂಕ ಪಡಬೇಕಾಗಿಲ್ಲ. ಸರ್ಕಾರದಿಂದ ಈಗಾಗಲೇ ಡಿ ನೋಟಿಫೈ ಮೂಲಕ ನೀಡಿರುವ ಜಮೀನನ್ನು ಅವರಿಗೆ ನೀಡಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಗಾಗಲೇ ಭರವಸೆ ನೀಡಿರುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸದನಕ್ಕೆ ಮಾಹಿತಿ ನೀಡಿದರು. ಮಧ್ಯೆ ಪ್ರವೇಶಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ಮೂಲಕವೇ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಮುಂದಾಗಬೇಕು. ಈಗಲೇ ಸಾಕಷ್ಟು ವಿಳಂಬವಾಗಿದೆ. ಸರ್ಕಾರ ಗಂಭೀರವಾಗಿ ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದನ್ನೂಓದಿ:'ನ್ಯಾಷನಲ್ ಲಾ ಸ್ಕೂಲ್‌ನಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಾತಿ ಕಲ್ಪಿಸಲು ಸರ್ಕಾರ ಬದ್ಧ'