ಬೆಂಗಳೂರು: ಲಂಚ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಇಂಜಿನಿಯರ್ಗೆ ನ್ಯಾಯಾಲಯ ತಕ್ಕ ಶಾಸ್ತಿ ಮಾಡಿದೆ. ಇದು ಭ್ರಷ್ಟ ಅಧಿಕಾರಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ. ವಾಣಿಜ್ಯ ಕಟ್ಟಡಕ್ಕೆ ನೀರಿನ ಸಂಪರ್ಕ ಕಲ್ಪಿಸುವ ಸಂಬಂಧ 10 ಸಾವಿರ ರೂಪಾಯಿ ಲಂಚ ಪಡೆದ ಬೆಂಗಳೂರು ಜಲಮಂಡಳಿಯ ಕಿರಿಯ ಎಂಜಿನಿಯರ್‌ಗೆ ನಗರದ 23ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಿ ಮಹತ್ವದ ಆದೇಶ ಹೊರಡಿಸಿದೆ. ಎಚ್.ಬಿ ಚನ್ನೇಶಪ್ಪ ಶಿಕ್ಷೆಗೆ ಗುರಿಯಾದ ಕಿರಿಯ ಎಂಜಿನಿಯರ್.
ಬೆಂಗಳೂರು ನಗರದ ಟಿ.ದಾಸರಹಳ್ಳಿ ನಿವಾಸಿಯೊಬ್ಬರು ತಮ್ಮ ಸ್ನೇಹಿತನ ವಾಣಿಜ್ಯ ಕಟ್ಟಡಕ್ಕೆ ಕಾವೇರಿ ನೀರಿನ ಸಂಪರ್ಕ ಕಲ್ಪಿಸುವ ಸಂಬಂಧ 2017ನೇ ಸಾಲಿನ ಜನವರಿಯಲ್ಲಿ ಬೆಂಗಳೂರು ಜಲಮಂಡಳಿಯ ನಾಗರಬಾವಿ ಉಪ ವಿಭಾಗದ ಕಿರಿಯ ಎಂಜಿನಿಯರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಕಿರಿಯ ಎಂಜಿನಿಯರ್ ಹೆಚ್ ಬಿ ಚನ್ನೇಶಪ್ಪ 30 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ್ದ ಎಸಿಬಿ ಪೊಲೀಸರು, ಚನ್ನೇಶಪ್ಪ ಅವರು ದೂರುದಾರನಿಂದ 10 ಸಾವಿರ ರೂ. ಲಂಚ ಪಡೆಯುವಾಗ ಬಂಧಿಸಿದ್ದರು.