ಬೆಂಗಳೂರು: ಅತ್ಯುತ್ತಮ ತನಿಖೆಗಾಗಿ ನೀಡಲಾಗುವ 2023ರ ಸಾಲಿನ ಗೃಹಮಂತ್ರಿಗಳ ಪದಕವನ್ನು ಕೇಂದ್ರ ಗೃಹ ಸಚಿವಾಲಯ ಶನಿವಾರ ಪ್ರಕಟಿಸಿದ್ದು, ರಾಜ್ಯದ ಐವರು ಪೊಲೀಸ್ ಅಧಿಕಾರಿಗಳು ಈ ಪಟ್ಟಿಯಲ್ಲಿದ್ದಾರೆ. ಒಟ್ಟಾರೆ ದೇಶದ ಪೊಲೀಸ್, ಸಿಬಿಐ ಮತ್ತು ಎನ್‌ಐಎಯಿಂದ 140 ಅಧಿಕಾರಿಗಳು ಈ ಪ್ರಶಸ್ತಿಗೆ ಭಾಜನರಾಗಲಿದದ್ದಾರೆ. ಕೇಂದ್ರೀಯ ತನಿಖಾ ದಳದ (ಸಿಬಿಐ) 15 ಸಿಬ್ಬಂದಿ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) 12 ಅಧಿಕಾರಿಗಳಿಗೆ ದೊರೆಯಲಿದೆ. 140 ಅಧಿಕಾರಿಗಳಲ್ಲಿ 22 ಮಹಿಳಾ ಅಧಿಕಾರಿಗಳಿದ್ದಾರೆ.
ತನಿಖೆಯ ಉನ್ನತ ವೃತ್ತಿಪರ ಮಾನದಂಡಗಳನ್ನು ಉತ್ತೇಜಿಸುವ ಮತ್ತು ತನಿಖೆಯಲ್ಲಿ ಶ್ರೇಷ್ಠತೆಯನ್ನು ಗುರುತಿಸುವ ಉದ್ದೇಶದಿಂದ 2018 ರಲ್ಲಿ ಪದಕವನ್ನು ಸ್ಥಾಪಿಸಲಾಗಿದೆ. ಇದನ್ನು ಪ್ರತಿ ವರ್ಷ ಆಗಸ್ಟ್ 12 ರಂದು ಘೋಷಿಸಲಾಗುತ್ತದೆ. 2023ರ ತನಿಖೆಯಲ್ಲಿನ ಶ್ರೇಷ್ಠತೆಗಾಗಿ ಕೇಂದ್ರ ಗೃಹ ಸಚಿವರ ಪದಕವನ್ನು 140 ಜನ ಪೊಲೀಸ್ ಸಿಬ್ಬಂದಿಗೆ ನೀಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.