ಬೆಂಗಳೂರು:ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಂಪುಟದಲ್ಲಿದ್ದ 7 ಸಚಿವರಿಗೆ ಕೊಕ್ ನೀಡಲಾಗಿದ್ದು, ಐವರು ಹೊಸ ಮುಖಗಳಿಗೆ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಳೆದು ತೂಗಿದರೂ ಯಡಿಯೂರಪ್ಪ ಸಂಪುಟದಲ್ಲಿ ಭಾರಿ ಬದಲಾವಣೆ ಮಾಡುವ ಹೈಕಮಾಂಡ್ ಪ್ರಯತ್ನ ಸಫಲವಾಗಿಲ್ಲ ಎನ್ನಲಾಗ್ತಿದೆ.
ಬಹುತೇಕ ಯಡಿಯೂರಪ್ಪ ಸಂಪುಟವನ್ನೇ ಮುಂದುವರೆಸಿಕೊಂಡು ಹೋಗಲಾಗುತ್ತಿದ್ದು, ಕೆಲ ಅಚ್ಚರಿಯ ಸೇರ್ಪಡೆಯೊಂದಿಗೆ ಕೆಲ ಪ್ರಭಾವಿಗಳಿಗೆ ಮಂತ್ರಿಗಿರಿ ಕೈತಪ್ಪಿದೆ. ಜೊತೆಗೆ ಯಡಿಯೂರಪ್ಪ ನಿರ್ಧಾರವೇ ಅಂತಿಮ ಎಂದು ಸಾಬೀತಾಗಿದೆ. ಸಿಎಂ ಆಯ್ಕೆ ಹಾಗೂ ಸಂಪುಟ ರಚನೆಯಲ್ಲಿ ಯಡಿಯೂರಪ್ಪ ಅವರದ್ದೇ ನಿರ್ಣಾಯಕ ಪಾತ್ರವಾಗಿದೆ. ಆ ಮೂಲಕ 2011ರಲ್ಲಿ ಹೈಕಮಾಂಡ್ ಮುಂದೆ ಗೆದ್ದಂತೆ 2021ರಲ್ಲಿಯೂ ಬಿಎಸ್ವೈ ಗೆದ್ದಂತಾಗಿದೆ.