ಬೆಂಗಳೂರು:ಕೊರೊನಾ ನಿಯಂತ್ರಿಸಲು ರಾಜ್ಯ ಸರ್ಕಾರ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಅದರಂತೆ 5 ಲಕ್ಷ ಪಿಪಿಇ ಕಿಟ್‍ಗಳನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದೇವೆ ಎಂದು ರಾಜ್ಯ ಸರ್ಕಾರವು ಹೈಕೋರ್ಟ್‍ಗೆ ಮಾಹಿತಿ ನೀಡಿದೆ.
ಕೊರೊನಾ ನಿಯಂತ್ರಿಸಲು ಸರ್ಕಾರಕ್ಕೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು.
ಈ ವೇಳೆ ರಾಜ್ಯ ಸರ್ಕಾರದ ಪರ ವಿಡಿಯೋ ಕಾನ್ಫರೆನ್ಸ್ ಮೂಲಕ ಪೀಠಕ್ಕೆ ಮಾಹಿತಿ ನೀಡಿದ ವಕೀಲ ವಿಕ್ರಂ ಹುಯಿಲ್ಗೋಳ ಅವರು, ಬೇಡಿಕೆಗೆ ತಕ್ಕಂತೆ ಪಿಪಿಇ (ಪರ್ಸನಲ್ ಪ್ರೊಟೆಕ್ಷನ್ ಇಕ್ಯುಪ್‌ಮೆಂಟ್) ಕಿಟ್‍ಗಳನ್ನು ಪೂರೈಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಳ್ಳುತ್ತಿದೆ. ಇಡೀ ದೇಶಕ್ಕೆ ಪಿಪಿಇ ಕಿಟ್‍ಗಳನ್ನು ಕೇಂದ್ರ ಸರ್ಕಾರವೇ ಪೂರೈಸುತ್ತಿದೆ. ಅದರಂತೆ ವಿವಿಧ ರಾಜ್ಯಗಳಿಂದ 1.6 ಕೋಟಿ ಪಿಪಿಇ ಕಿಟ್‍ಗಳಿಗೆ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಬಂದಿದೆ. ಅದೇ ರೀತಿ ನಮ್ಮ ರಾಜ್ಯಕ್ಕೆ 5 ಲಕ್ಷ ಕಿಟ್‍ಗಳನ್ನು ಪೂರೈಸುವಂತೆ ಕೇಂದ್ರಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಪೀಠಕ್ಕೆ ವಿವರಿಸಿದರು.
ಇನ್ನು ಅಗತ್ಯ ವೈದ್ಯಕೀಯ ಪರಿಕರಗಳನ್ನು ದೇಶಿಯವಾಗಿಯೇ ಉತ್ಪಾದಿಸಿಕೊಳ್ಳುವ ಹೈಕೋರ್ಟ್ ಸಲಹೆಗೆ ಉತ್ತರಿಸಿದ ವಕೀಲರು, ಕೇಂದ್ರ ಜವಳಿ ಸಚಿವಾಲಯವು ದಕ್ಷಿಣ ಭಾರತ ಜವಳಿ ಸಂಶೋಧನಾ ಸಂಸ್ಥೆಯಿಂದ ಪ್ರಮಾಣಪತ್ರ ಪಡೆದಿರುವ ದೇಶದ 22 ಗಾರ್ಮೆಂಟ್ಸ್ ಗಳನ್ನು ಗುರುತಿಸಿದೆ. ಈ 22 ಘಟಕಗಳು ದಿನಕ್ಕೆ ತಲಾ ಸಾವಿರ ಪಿಪಿಇ ಕಿಟ್‍ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ.
ಅದರಂತೆ ಇಡೀ ದೇಶದಲ್ಲಿ ದಿನಕ್ಕೆ 22 ಸಾವಿರ ಪಿಪಿಇ ಕಿಟ್‍ಗಳ ಉತ್ಪಾದನೆ ಆಗಲಿದೆ. ಕೇಂದ್ರ ಸರ್ಕಾರ ಗುರುತಿಸಿರುವ ರಾಜ್ಯದಲ್ಲಿರುವ 9 ಜವಳಿ ಉದ್ದಿಮೆಗಳ ನೌಕರರಿಗೆ ಪಾಸ್ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಮಾಡಿಕೊಡಲು ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿದರು.