ಬೆಂಗಳೂರು: ಗಾಳಿಪಟ ಕೊಡಿಸುವ ಆಸೆ ತೋರಿಸಿ ಬಟ್ಟೆ ವ್ಯಾಪಾರಿಯ 11 ವರ್ಷದ ಪುತ್ರನನ್ನು ಅಪಹರಿಸಿ 2 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಬಂಧಿಸಲು ಹೋದ ಭಾರತಿ ನಗರ ಪೊಲೀಸರ ಮೇಲೆಯೇ ದಾಳಿಗೆ ಮುಂದಾದ ಆರೋಪಿಯ ಕಾಲಿಗೆ ಗುಂಡು ಹೊಡೆದು ವಶಕ್ಕೆ ಪಡೆಯಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಝೈನ್ ಗುಂಡು ತಗುಲಿ ಗಾಯಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರಕರಣದಲ್ಲಿ ಫಾಹೀಂ, ಮುಜಾಮಿಲ್, ಪೈಜಾನ್, ಮೊಹಮ್ಮದ್ ಷಾಹೀದ್, ಖಲೀಲ್ ಎಂಬುವವರು ಬಂಧನಕ್ಕೊಳಗಾಗಿದ್ದಾರೆ.
ಭಾರತಿ ನಗರದಲ್ಲಿ ವಾಸಿಸುತ್ತಿರುವ ಮೊಹಮ್ಮದ್ ಸಾಧೀಕ್ ಹಾಗೂ ಉಸ್ಮಾ ದಂಪತಿ ಕಾಮರಾಜ ರಸ್ತೆಯಲ್ಲಿ ಬಟ್ಟೆ ಅಂಗಡಿ ತೆರೆದಿದ್ದರು. ದಂಪತಿಯ 11 ವರ್ಷದ ಮಗ ಉಮರ್, ಶಾಲೆಗೆ ರಜೆ ಇದ್ದ ಪರಿಣಾಮ ಮನೆಯಂಗಳದಲ್ಲಿ ಆಟವಾಡುತ್ತಿದ್ದ. ಗುರುವಾರ ಸಂಜೆ ಮನೆ ಹತ್ತಿರ ಆಟವಾಡುತ್ತಿದ್ದ ಜಾಗಕ್ಕೆ ಅಪಹರಣಕಾರರು ಗಾಳಿಪಟ ಕೊಡಿಸುವ ಸೋಗಿನಲ್ಲಿ ಪುಸಲಾಯಿಸಿ ಬೈಕ್ನಲ್ಲಿ ಕರೆದುಕೊಂಡು ಹೋಗಿದ್ದಾರೆ. ಅದಾದ ಬಳಿಕ ಹಲಸೂರಿನಲ್ಲಿ ಕಾರಿನಲ್ಲಿ ಕಾಯುತ್ತಿದ್ದ ಅಪಹರಣಕಾರರ ಗುಂಪು ಬಾಲಕನನ್ನು ಬೆದರಿಸಿ ತುಮಕೂರಿಗೆ ಕರೆದೊಯ್ದಿದೆ.
ಪಾನೀಯದಲ್ಲಿ ನಿದ್ರೆ ಮಾತ್ರೆ ಹಾಕಿದ ಕಿರಾತಕರು
ಬಾಲಕ ಗಾಳಿಪಟ ಆಡುವ ಆಸಕ್ತಿ ಹೊಂದಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿದ ಆರೋಪಿಗಳು, ಮನೆ ಹತ್ತಿರ ಗಾಳಿಪಟ ಕೊಡಿಸುವ ಆಸೆ ತೋರಿಸಿ ಅಪಹರಣ ಮಾಡಿದ್ದಾರೆ. ಯಾರಿಗೂ ಅನುಮಾನ ಬಾರದಿರಲು ಬಾಲಕನಿಗೆ ಆರೋಪಿಗಳು ತಂಪು ಪಾನೀಯದಲ್ಲಿ ನಿದ್ರೆ ಮಾತೆ ಹಾಕಿ ಕುಡಿಸಿದ್ದಾರೆ.