ಇಂಡಿಯಾ v/s ಇಂಗ್ಲೆಂಡ್
ಇದು ಸ್ಯಾಂಡಲ್ವುಡ್ ಮೇಷ್ಟ್ರು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಸಿನಿಮಾ. ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿ ವೈ.ಎನ್. ಶಂಕರೇಗೌಡ ಹಾಗೂ ಸ್ನೇಹಿತರು ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ತಮ್ಮ ಸಿನಿಮಾಗಳನ್ನು ಹೆಚ್ಚಾಗಿ ವಿದೇಶದಲ್ಲಿ ಚಿತ್ರೀಕರಣ ಮಾಡುವ ಮೇಷ್ಟ್ರು, ಈ ಬಾರಿ ಕೂಡಾ ಬಹುತೇಕ ಚಿತ್ರೀಕರಣವನ್ನು ಇಂಗ್ಲೆಂಡ್ನಲ್ಲಿ ಮಾಡಿದ್ದಾರೆ. ಈ ಬಾರಿ ತಮ್ಮ ಪುತ್ರಿ ಕನಸು ಬರೆದ ಕಥೆಯನ್ನು ಇಟ್ಟುಕೊಂಡು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಸುಮಾರು 20 ಮಂದಿ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.
ಇನ್ನು ವಷಿಷ್ಠ ಸಿಂಹ ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ್ದಾರೆ. ಮಾನ್ವಿತಾ ಕಾಮತ್ ವಸಿಷ್ಠಗೆ ಜೊತೆಯಾಗಿದ್ದಾರೆ. ಸತ್ಯ ಹೆಗ್ಡೆ ಹಾಗೂ ಎ.ವಿ. ಕೃಷ್ಣಕುಮಾರ್ ಚಿತ್ರಕ್ಕೆ ಛಾಯಾಗ್ರಹಣ ಒದಗಿಸಿದ್ದಾರೆ. ಶ್ರೀಕಾಂತ್ ಸಂಕಲನ, ಮೋಹನ್ ನೃತ್ಯ, ರವಿವರ್ಮ ಹಾಗೂ ಡಿಫರೆಂಟ್ ಡ್ಯಾನಿ ಸಾಹಸ ಈ ಚಿತ್ರಕ್ಕಿದೆ. ಚಿತ್ರವನ್ನು ನಾಗತಿಹಳ್ಳಿ ಚಂದ್ರಶೇಖರ್ ವಿತರಣೆ ಮಾಡುತ್ತಿರುವುದು ವಿಶೇಷ. ಸುಮಲತಾ ಅಂಬರೀಶ್, ಅನಂತ್ ನಾಗ್, ಪ್ರಕಾಶ್ ಬೆಳವಾಡಿ, ಸಾಧು ಕೋಕಿಲ, ಗೋಪಾಲ ಕುಲಕರ್ಣಿ, ಶಿವಮಣಿ, ಸಿರಿ ಹಂಪಾಪುರ, ಮಿಚಿಲ್ ಆಸ್ಟಿನ್, ಲೇಕ್ಸ್ ಲಮ್ಪ್ರೆ ಹಾಗೂ ಇತರರು ತಾರಾಗಣದಲ್ಲಿದ್ದಾರೆ.
ಖಾಕಿ
ಇದೊಂದು ಸಾಹಸಭರಿತ ಸಿನಿಮಾ ಅಷ್ಟೇ ಅಲ್ಲದೆ ಸಾಮಾಜಿಕ ಕಳಕಳಿಯುಳ್ಳ ಚಿತ್ರ. ತರುಣ್ ಟಾಕೀಸ್ ಅಡಿ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ನಿರ್ಮಾಣ ಮಾಡಿರುವ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಹಾಗೂ ತಾನ್ಯಾ ಹೊಪ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ನವೀನ್ ರೆಡ್ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ, ಋತ್ವಿಕ್ ಮುರಳೀಧರ್ ಸಂಗೀತ, ಬಾಲ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ವಿನೋದ್ ಸಾಹಸ, ಭೂಷಣ್, ಧನು ನೃತ್ಯ ಸಂಯೋಜನೆ ಮಾಡಿದ್ದಾರೆ. ದೇವ್ ಗಿಲ್, ಶಿವಮಣಿ, ಶಶಿ, ಸುಧಾ ಬೆಳವಾಡಿ, ನವ್ಯಾ ಹಾಗೂ ಇತರರು ತಾರಾಗಣದಲ್ಲಿದ್ದಾರೆ.
ನಾವೆಲ್ರೂ ಹಾಫ್ ಬಾಯಿಲ್ಡ್
ಅನುಗ್ರಹ ಸಿನಿಮಾಸ್ ಬ್ಯಾನರ್ ಅಡಿ ಕೆ. ಅಮೀರ್ ಅಹ್ಮದ್ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಯುವಕರು ದಾರಿ ತಪ್ಪಿ ಮಾಡಿಕೊಳ್ಳುವ ಎಡವಟ್ಟನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಇದು ಹಳ್ಳಿ ಸೊಗಡಿನ ನಾಲ್ವರು ಹುಡುಗರ ಕಥೆ. ಸುನಿಲ್ ಕುಮಾರ್, ಹಂಪೇಶ್ ಅರಸೂರ್, ಮಂಜು ಬದ್ರಿ ಹಾಗೂ ದೀಪಕ್ ಈ ಸಿನಿಮಾದಲ್ಲಿ ಅಭಿನಯಿಸಿದ್ದು, ಈ ಹೊಸ ಪ್ರತಿಭೆಗಳ ಚಿತ್ರಕ್ಕೆ, ಹಾಸ್ಯ ನಟ ತಬಲಾ ನಾಣಿ ಡೈಲಾಗ್ ಬರೆದಿರುವುದು ವಿಶೇಷ. ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಬಿ. ಶಿವರಾಜ್ ವೆಂಕಟಾಚ್ಚ ಚಿತ್ರಕ್ಕೆ ಕಥೆ ಬರೆದು ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ವಿಜೇತ್ ಕೃಷ್ಣ ಸಂಗೀತ, ಕುಶೇಂದ್ರ ರೆಡ್ಡಿ ಛಾಯಾಗ್ರಹಣ, ನಾಗೇಂದ್ರ ಕೆ. ಉಜ್ಜಣಿ, ಶ್ರೀಧರ್ ವೈ.ಎಸ್. ಸಂಕಲನ, ಪ್ರೇಮ್ ರಕ್ಷಿತ್ ನೃತ್ಯ ನಿರ್ದೇಶನವಿದೆ.