ಬೆಂಗಳೂರು:ವಿದ್ಯುತ್ ಕಂಬಕ್ಕೆ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದು ಕಂಬ ನೆಲಕ್ಕೆ ಬಿದ್ದು ಉಂಟಾದ ಶಾರ್ಟ್ ಸಕ್ಯೂರ್ಟ್ನಿಂದ ಗೋದಾಮಿನಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಚಪ್ಪಲಿಗಳು ಬೆಂಕಿಗೆ ಆಹುತಿಯಾಗಿವೆ. ಮೈಸೂರು ರಸ್ತೆಯಲ್ಲಿರುವ ಎಎಸ್ಆರ್ ಮಾರ್ಕೆಟಿಂಗ್ ಹಾಗೂ ಯೂನಿಕಾರ್ನ್ ಮಾರ್ಕೆಟಿಂಗ್ ಗೋದಾಮಿನಲ್ಲಿದ್ದ 5 ಕೋಟಿ ಹೆಚ್ಚು ಮೌಲ್ಯದ ವಿವಿಧ ಕಂಪನಿಗಳ ಪಾದರಕ್ಷೆಗಳು ಸುಟ್ಟಿವೆ.
ನಿನ್ನೆ ರಾತ್ರಿ ಸುಮಾರು 11 ಗಂಟೆಗೆ ಘಟನೆ ನಡೆದಿದ್ದು, 12ಕ್ಕೂ ಹೆಚ್ಚು ಅಗ್ನಿಶಾಮಕ ವಾಹನದಲ್ಲಿ ಬೆಂಕಿ ಆರಿಸುವ ಪ್ರಯತ್ನ ನಡೆದಿತ್ತಾದರೂ ಅಷ್ಷೊತ್ತಿಗಾಗಲೇ ಬೆಂಕಿ ವ್ಯಾಪಿಸಿ ಆನಾಹುತ ನಡೆದಿತ್ತು. ನಗರದ ವಿವಿಧ ಚಪ್ಪಲಿ ಅಂಗಡಿಗಳಿಗೆ ಇದೇ ಗೋಡೌನ್ನಿಂದ ಪಾದರಕ್ಷೆಗಳು ಸರಬರಾಜು ಮಾಡಲಾಗುತ್ತಿತ್ತು. ಶ್ರೀನಿವಾಸ್ ಎಂಬುವವರ ಮಾಲಿಕತ್ವದ ಯೂನಿಕಾರ್ನ್ ಮಾರ್ಕೆಟಿಂಗ್ ಎಂಬ ಗೋಡಾನ್ ಇದಾಗಿದ್ದು, ನಿನ್ನೆ ರಾತ್ರಿ 11 ಗಂಟೆಯ ಸಂದರ್ಭದಲ್ಲಿ ಹೊತ್ತಿಕೊಂಡ ಬೆಂಕಿಯನ್ನು ಆರಿಸಲು ಅಗ್ನಿಶಾಮಕ ಸಿಬ್ಬಂದಿ ಸುಮಾರು ಮೂರು ತಾಸು ಹರಸಾಹಸ ಪಡಬೇಕಾಯಿತು.
ಗೋಡೌನ್ ಒಳಗೇ ಶಾರ್ಟ್ ಸರ್ಕ್ಯೂಟ್ ಆಗಿರಬಹುದು ಎಂದೇ ಅಂದಾಜಿಸಲಾಗಿತ್ತು. ಶಾರ್ಟ್ ಸರ್ಕ್ಯೂಟ್ ಆಗಿರುವುದು ನಿಜ, ಆದರೆ ಅದಕ್ಕೆ ಕಾರಣ ಕ್ಯಾಂಟರ್ ಚಾಲಕ ಎಂದು ತನಿಖೆಯಿಂದ ಗೊತ್ತಾಗಿದೆ. ಗೋಡೌನ್ನ ಹೊರ ಭಾಗದಲ್ಲಿದ್ದ ಲೈಟ್ ಕಂಬಕ್ಕೆ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದಿದೆ. ಈ ವೇಳೆ ಲೈಟ್ ಕಂಬವೇ ತುಂಡಾಗಿ ಬಿದ್ದಿತ್ತು. ಈ ವೇಳೆ ವಿದ್ಯುತ್ ಸಪ್ಲೈ ಪಡೆದಿದ್ದ ಗೋಡೌನ್ ಒಳಗೆ ಶಾರ್ಟ್ ಸರ್ಕ್ಯೂಟ್ನಿಂದ ಕಿಡಿ ಹತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.