ಬೆಂಗಳೂರು:ಕೊರೋನಾದಿಂದ ಇಡೀ ದೇಶ ಲಾಕ್‌ಡೌನ್‌ನಲ್ಲಿದ್ದ ಸಂರ್ಭದಲ್ಲಿ ಕೇವಲ 3 ದಿನಗಳಲ್ಲಿ ಟೆಂಡರ್ ಕರೆದು 5 ಕೋಟಿ ರೂ. ಚರಂಡಿ ದುರಸ್ತಿಗೆ ಕಾರ್ಯಾದೇಶ ನೀಡಿ ಹಣ ಬಿಡುಗಡೆ ಮಾಡಿರುವ ಕಾರ್ಯನಿರ್ವಾಹಕ ಎಂಜಿನಿಯರ್ ವಿರುದ್ಧ ತನಿಖೆ ನಡೆಸಲು ಅನುಮತಿ ನಿರಾಕರಿಸಿರುವ ಸಂಬಂಧ ದಾಖಲೆಗಳನ್ನು ಸಲ್ಲಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಮಧ್ಯಂತರ ಆದೇಶ ನೀಡಿದೆ.
ಹೇಮಾವತಿ ಎಡದಂಡೆ ನಾಲೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಕೆ. ಶ್ರೀನಿವಾಸ್ ಅವರ ವಿರುದ್ಧ ತನಿಖೆಗೆ ಅನುಮತಿ ನಿರಾಕರಿಸಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ಖಾಸಗಿ ದೂರು ದಾಖಲಿಸಿದ್ದ ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆಯ ನಾಗೇಗೌಡ ಎಂಬುವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಈ ಪ್ರಕರಣದಲ್ಲಿ ಆರೋಪಿ ವಿರುದ್ಧದ ತನಿಖೆಗೆ ಅನುಮತಿ ನಿರಾಕರಿಸಿರುವ ಅಧಿಕಾರಿಗೆ ಸೇರಿದ ಯಾವುದೇ ಹಣ ವೆಚ್ಚವಾಗಿಲ್ಲ. ಬದಲಾಗಿ ಸಾರ್ವಜನಿಕ ತೆರಿಗೆ ಹಣ ವೆಚ್ಚ ಮಾಡಲಾಗಿದೆ. ಹೀಗಾಗಿ ತನಿಖೆಗೆ ಅನುಮತಿ ನಿರಾಕರಿಸಿರುವ ಸಂಬಂಧದ ಸಂಪೂರ್ಣ ದಾಖಲೆಗಳನ್ನು ಸಲ್ಲಿಸಬೇಕು ಎಂದು ಮಧ್ಯಂತರ ಆದೇಶ ನೀಡಿದ್ದಾರೆ.
ದಾಖಲೆಗಳನ್ನು ಪರಿಶೀಲಿಸಿ ನ್ಯಾಯಪೀಠ, 2020ರ ಮಾರ್ಚ್ 24ರಿಂದ ಇಡೀ ದೇಶವು ಸಂಪೂರ್ಣ ಲಾಕ್‌ಡೌನ್‌ನಲ್ಲಿತ್ತು. ದೇಶದಲ್ಲಿ ಯಾವುದೇ ಕಾಮಗಾರಿಗಳನ್ನೂ ಕೈಗೆತ್ತಿಕೊಳ್ಳುವುದಕ್ಕೆ ಸಾಧ್ಯವಾಗಿರಲಿಲ್ಲ. ಈ ನಡುವೆ ಮೂರು ದಿನಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಸುಮಾರು 5.02 ಕೋಟಿ ರೂ.ಗಳ ಬಿಲ್ ಸಲ್ಲಿಸಿದ್ದು, ಕಾರ್ಯಪಾಲಕ ಎಂಜಿನಿಯರ್ ಅವರಿಂದ ಅನುಮೋದನೆ ಪಡೆದು ಬಿಲ್‌ಗಳನ್ನು ಮಂಜೂರು ಮಾಡಿಕೊಂಡಿದ್ದಾರೆ. ಜೊತೆಗೆ, ಆದರೂ ಸಕ್ಷಮ ಪ್ರಾಧಿಕಾರ ಅನುಮತಿ ನೀಡದಿರುವುದು ಆಘಾತಕಾರಿ ಬೆಳವಣಿಗೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.