ಬೆಂಗಳೂರು: ಕೃಷಿ ಮಾರಾಟ ಮಂಡಳಿಗೆ 48 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಸದ್ಯ ಪ್ರಕರಣದ ತನಿಖೆ ನಡೆಸಿ 1,400 ಪುಟಗಳ ಸುದೀರ್ಘ ಚಾರ್ಜ್ಶೀಟ್ಅನ್ನು ನ್ಯಾಯಕ್ಕೆ ಸಲ್ಲಿಸಿದ್ದಾರೆ. ಇದರಲ್ಲಿ ಮೋಸ ಮಾಡಿದ ಬ್ಯಾಂಕ್ ಉದ್ಯೋಗಿಗಳನ್ನ ಆರೋಪಿಗಳನ್ನಾಗಿ ಉಲ್ಲೇಖಿಸಿದ್ದಾರೆ.
ಫಿಕ್ಸೆಡ್ ಡೆಪಾಸಿಟ್ ಹಣ ಇಡಲು ಸಿಂಡಿಕೇಟ್ ಬ್ಯಾಂಕಿಗೆ ಕೃಷಿ ಮಾರಾಟ ಮಂಡಳಿ ಕೊಟೇಶನ್ ಕೇಳಿತ್ತು. ಈ ವೇಳೆ ಹೆಚ್ಚು ಬಡ್ಡಿ ನೀಡುವುದಾಗಿ ಉತ್ತರಹಳ್ಳಿಯ ಸಿಂಡಿಕೇಟ್ ಬ್ಯಾಂಕ್ ಶಾಖೆ ಆಫರ್ ನೀಡಿತ್ತು. ಹೀಗಾಗಿ 100 ಕೋಟಿ ಹಣವನ್ನು ಬೆಂಗಳೂರು ಕೃಷಿ ಮಾರಾಟ ಮಂಡಳಿ ಡೆಪಾಸಿಟ್ ಮಾಡಿತ್ತು. ಆದರೆ ಸ್ವಲ್ಪ ದಿನಗಳ ಬಳಿಕ ಡೆಪಾಸಿಟ್ ಬಗ್ಗೆ ಕೃಷಿ ಮಾರಾಟ ಮಂಡಳಿ ವಿಚಾರಿಸಿದಾಗ 100 ಕೋಟಿಯ ಬದಲು 50 ಕೋಟಿ ರೂ. ಮಾತ್ರ ಡೆಪಾಸಿಟ್ ಇರುವುದು ಬಯಲಾಗಿತ್ತು. ಹೀಗಾಗಿ ಕೃಷಿ ಮಾರಾಟ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಕರಿಗೌಡ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ದೂರು ನೀಡಿದ್ದರು.