ಬೆಂಗಳೂರು:ಜಿಕೆವಿಕೆ ಆವರಣದಲ್ಲಿ 45ನೇ ಕೃಷಿ ಮೇಳ-2019ಕ್ಕೆ ಅದ್ಧೂರಿ ಚಾಲನೆ ದೊರೆತಿದೆ. ಕೃಷಿ ಮೇಳಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಿದರು. ಈ ವೇಳೆ ನೂತನ ತಳಿಗಳು ಹಾಗೂ ತಾಂತ್ರಿಕತೆಗಳನ್ನು ಬಿಡುಗಡೆ ಮಾಡಲಾಯಿತು. ಕೃಷಿ ಮನೆ, ಜೋಳದ ಮನೆಗಳ ಮೂಲಕ ಕೃಷಿ ಮೇಳ ಆಕರ್ಷಿಸುತ್ತಿದೆ.
ಇನ್ನು, ಮೂವರು ಸಾಧಕ ರೈತರಿಗೆ ಪ್ರಶಸ್ತಿ ನೀಡಲಾಯಿತು. ಡಾ.ಎಂ.ಹೆಚ್. ಮರೀಗೌಡ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ, ಡಾ.ಆರ್ ದ್ವಾರಕೀನಾಥ್ ಅತ್ಯುತ್ತಮ ರೈತ ಪ್ರಶಸ್ತಿ, ಡಾ.ಆರ್.ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಹೆಸರಿನ ಪ್ರಶಸ್ತಿಯನ್ನು ರೈತರಾದ ಜಿ.ರಮೇಶ್, ಹೆಚ್.ಕೆ. ಕುಮಾರಸ್ವಾಮಿ , ಡಾ.ಸವಿತಾ ಎಸ್ ಅವರಿಗೆ ಪುರಸ್ಕರಿಸಲಾಯಿತು.
ಅದ್ಧೂರಿಯಾಗಿ ಉದ್ಘಾಟನೆಗೊಂಡ ಕೃಷಿಮೇಳ ಈ ವೇಳೆ ಮಾತನಾಡಿದ ಡಿಸಿಎಂ ಲಕ್ಣ್ಮಣ ಸವದಿ, ಯಡಿಯೂರಪ್ಪ ಅವರು ರೈತರಿಗಾಗಿ ಪ್ರತ್ಯೇಕ ಕೃಷಿ ಬಜೆಟ್ ಮಾಡಿದ್ರು. ಹಾಲಿಗೆ ಪ್ರೋತ್ಸಾಹ ಧನವನ್ನು ನೀಡಲು ಆರಂಭ ಮಾಡಿದ್ದು ಯಡಿಯೂರಪ್ಪ. ಇದರಿಂದ ಕರ್ನಾಟಕ ರಾಜ್ಯ ಹಾಲು ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿದೆ ಎಂದರು.
ಹನಿ ನೀರಾವರಿ ಬಳಸಲು ಕೇಂದ್ರ ಸರ್ಕಾರ ಹೆಚ್ಚು ಒತ್ತು ನೀಡಿದೆ. ಅತಿವೃಷ್ಟಿಯಿಂದಾಗಿ ಸಾಕಷ್ಟು ಹಾನಿಯಾಗಿದೆ. ಇದಕ್ಕೆ ಸಿಎಂ ಸಮರ್ಥವಾಗಿ ನಿಭಾಯಿಸಿ ಬರ ಪರಿಹಾರ ನೀಡುತ್ತಿದ್ದಾರೆ. ಎನ್ಡಿಆರ್ಎಫ್ ಸೂಚನೆಗೂ ಮೀರಿ ಹೆಚ್ಚುವರಿ ಧನ ಪರಿಹಾರ ನೀಡಿದ್ದಾರೆ. ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ನೀಡುತ್ತಿದ್ದಾರೆ ಎಂದರು.
ಆಹಾರ ಕೃಷಿಗಳಲ್ಲಿ ರಸಗೊಬ್ಬರ, ಕ್ರಿಮಿನಾಶಕ ಬಳಸುವುದರಿಂದ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀಳುತ್ತಿದೆ. ಕೃಷಿ ಇಲಾಖೆಯ ಹಿರಿಯ ಕಿರಿಯ ಅಧಿಕಾರಿಗಳು ಈ ಬಗ್ಗೆ ಚಿಂತನೆ ಮಾಡಬೇಕು. ಆದಾಯ ದ್ವಿಗುಣ ಮಾಡುವುದರ ಜೊತೆಗೆ ಆರೋಗ್ಯವನ್ನು ಕಾಪಾಡಬೇಕಿದೆ. ಎಲ್ಲಿ ನೋಡಿದರೂ ಕ್ಯಾನ್ಸರ್, ಬಿಪಿ, ಶುಗರ್ ಬರುತ್ತಿದೆ. ಆದರೆ ಕೃಷಿ ಇಲಾಖೆ ಇದಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದರು.
ಇನ್ನು ಮಾಜಿ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ವಿದೇಶದಿಂದ ಹಾಲಿನ ಆಮದು ಚಿಂತನೆಯನ್ನು ವಿರೋಧಿಸಬೇಕಿದೆ. ಈ ಭಾಗದಲ್ಲಿ ಹಾಲು ಉತ್ಪಾದನೆ ರೈತ ಕುಟುಂಬಗಳನ್ನು ಸಾಕುತ್ತಿದೆ. ಬೆಳೆಯ ಅನಿಶ್ಚಿತತೆಯ ನಡುವೆ ರೈತರು ಬದುಕಿದ್ದಾರೆ ಎಂದರೆ ಹೈನುಗಾರಿಕೆ ಕಾರಣ. ಹೈನುಗಾರಿಕೆ ಕಾಮಧೇನುವಾಗಿ ಸಾಕಿದೆ. ಆದ್ರೆ ಕೇಂದ್ರ ಈಗ ಅಂತರಾಷ್ಟ್ರೀಯ ಒಪ್ಪಂದ ಮಾಡಿ ವಿದೇಶದಿಂದ ಹಾಲು ಉತ್ಪಾದನೆಯನ್ನು ಆಮದು ಮಾಡಿಕೊಳ್ಳುವ ಸುದ್ದಿ ಕೇಳಿಬಂದಿದೆ. ಇದು ರೈತ ಸಮುದಾಯದಲ್ಲಿ ಕಳವಳಕಾರಿ ವಿಚಾರವಾಗಿದೆ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಕೇಂದ್ರ ಸರ್ಕಾರದ ಮೇಲೆ ತಮ್ಮ ಪ್ರಭಾವ ಬೀರಿ, ಹೊರದೇಶದ ಹಾಲು ಆಮದಾಗದಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದರು.
ಸಿಎಂ ಯಡಿಯೂರಪ್ಪ ಮಾತನಾಡಿ, ಹಾಲು ಆಮದು ಮಾಡದಂತೆ ಮನವಿ ಮಾಡಿ ಪ್ರಧಾನಿಗಳಿಗೆ ಪತ್ರ ಬರೆಯಲಾಗಿದೆ. ರಾಜ್ಯದ 28 ಸಂಸದರೂ ಭೇಟಿ ಮಾಡಿ ಮನವಿ ಮಾಡಲಿದ್ದಾರೆ ಎಂದರು.
ಕೃಷಿಯಲ್ಲಿ ಆಮೂಲಾಗ್ರ ಬದಲಾವಣೆಗೆ ಸರ್ಕಾರ ಬದ್ಧವಾಗಿದೆ. ರೈತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ, ಜಮೀನಿಗೆ ನೀರು ಸಿಗುವಂತಾಗಬೇಕು. ನೀರಾವರಿ ಸೌಕರ್ಯ ನಮ್ಮಲ್ಲಿ ಶೇ.35 ಕ್ಕಿಂತ ಕಡಿಮೆ. ಒಣ ಬೇಸಾಯವೇ ನಮ್ಮಲ್ಲಿ ಹೆಚ್ಚು. ಇತ್ತೀಚಿನ ವೈಪರೀತ್ಯಗಳು ಕೃಷಿಕರನ್ನು ಕಂಗಾಲಾಗಿ ಮಾಡಿವೆ. ಯುವಕರು ಕೃಷಿಯಿಂದ ವಿಮುಖರಾಗ್ತಿದ್ದಾರೆ. ರೈತರ ಸಂಕಷ್ಟಗಳಿಗೆ ಕೇಂದ್ರ ಸ್ಪಂದಿಸಿದೆ. ಕೃಷಿ ಸಮ್ಮಾನ್ ಯೋಜನೆಯಡಿ ಕೃಷಿಕರಿಗೆ ಆರ್ಥಿಕ ನೆರವು ಸಿಗ್ತಿದೆ ಎಂದು ಸಿಎಂ ಹೇಳಿದರು.
ಈ ಯೋಜನೆಗೆ ಕೈ ಜೋಡಿಸಿದ ರಾಜ್ಯ ಸರ್ಕಾರ...
ನೆರೆ, ಬರ ಪರಿಸ್ಥಿತಿಗಳನ್ನು ನಾವು ಎದುರಿಸ್ತಿದ್ದೇವೆ. ಪರಿಹಾರ ಕಾರ್ಯಗಳನ್ನು ಸರ್ಕಾರ ನಿರಂತರವಾಗಿ ಮಾಡ್ತಿದೆ. ಸ್ವಾತಂತ್ರ್ಯ ನಂತರ ಮನೆ ಕಟ್ಟಲು ಐದು ಲಕ್ಷ ಕೊಡ್ತಿರೋದು ನಾವೇ ಮೊದಲು. ಈ ಹಿಂದೆ ಮನೆ ನಾಶವಾದ್ರೆ 90 ಸಾವಿರ ಇತ್ತು. ಇತ್ತೀಚೆಗೂ ಮಳೆ ಬಂದು ಮತ್ತೆ ಸಂಕಷ್ಟ ಎದುರಾಗಿದೆ. ಆಯಾ ಜಿಲ್ಲಾಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಹಾಗೂ ಕೃಷಿ ಸಚಿವ ಲಕ್ಷ್ಮಣ ಸವದಿ, ಮಾಜಿ ಸಚಿವ ಕೃಷ್ಣ ಬೈರೇಗೌಡ, ಜಿಕೆವಿಕೆ ಕುಲಪತಿ ಎಸ್ ರಾಜೇಂದ್ರ ಪ್ರಸಾದ್ ಭಾಗಿಯಾಗಿದ್ದರು.