ಬೆಂಗಳೂರು : ಹಣದ ಆಮಿಷ ತೋರಿಸಿ ಬಾಲಕಿಯನ್ನು ಪುಸಲಾಯಿಸಿ 14ರ ಅಪ್ತಾಪ್ತೆಯನ್ನು ಬಾಲ್ಯವಿವಾಹ ಮಾಡಿಕೊಂಡಿರುವ ಆರೋಪದಡಿ 45 ವರ್ಷದ ವ್ಯಕ್ತಿಯೊಬ್ಬನನ್ನು ಯಲಹಂಕ ಉಪನಗರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಗುರುಪ್ರಸಾದ್ (45) ಬಂಧಿತ ಆರೋಪಿ. ಯಲಹಂಕ ನ್ಯೂಟೌನ್ ಬಳಿಯ ಚಿಕ್ಕಬೆಟ್ಟಹಳ್ಳಿ ವಾಸವಾಗಿದ್ದ ಗುರುಪ್ರಸಾದ್ ಜೆಸಿಬಿ ಮಾಲೀಕನಾಗಿದ್ದ. ಆರ್ಥಿಕವಾಗಿ ಸದೃಢವಾಗಿದ್ದ. ಕೌಟುಂಬಿಕ ಕಾರಣಕ್ಕಾಗಿ 20 ವರ್ಷಗಳ ಹಿಂದೆಯೇ ಪತ್ನಿಯಿಂದ ದೂರವಾಗಿದ್ದ. ಈತನಿಗೆ 17 ವರ್ಷದ ಮಗನಿದ್ದಾನೆ. ತಾನು ವಾಸಮಾಡುತ್ತಿದ್ದ ಏರಿಯಾದಲ್ಲಿ ಬಾಲಕಿ ಕುಟುಂಬ ವಾಸವಾಗಿತ್ತು.
ಆರ್ಥಿಕವಾಗಿ ಹಿಂದುಳಿದಿದ್ದ ಬಾಲಕಿಯ ಪೋಷಕರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಕುಟುಂಬದ ಅಸಹಾಯಕತೆ ಬಂಡವಾಳ ಮಾಡಿಕೊಂಡ ಗುರುಪ್ರಸಾದ್ ಪೋಷಕರ ಬಳಿ ಮಗಳನ್ನು ವಿವಾಹವಾಗುವುದಾಗಿ ಹೇಳಿದ್ದಾನೆ. ಆರ್ಥಿಕವಾಗಿ ಹಣದ ಸಹಾಯ ಮಾಡುವುದಾಗಿ ನಂಬಿಸಿದ್ದಾನೆ. ಆರಂಭದಲ್ಲಿ ವಿವಾಹಕ್ಕೆ ಒಪ್ಪದ ಪೋಷಕರು ಕಾಲಕ್ರಮೇಣ ಆರೋಪಿಯ ಮನವಿ ಪುರಸ್ಕರಿಸಿದ್ದಾರೆ.
ಅಪ್ರಾಪ್ತೆ ಮೇಲೆ ಒತ್ತಡ ಹೇರಿ ಇದೇ ತಿಂಗಳು 7ರಂದು ದೇವಸ್ಥಾನವೊಂದರಲ್ಲಿ ಬಾಲ್ಯವಿವಾಹವಾಗಿದ್ದಾನೆ. ಇತ್ತೀಚೆಗೆ ಇಷ್ಟವಿಲ್ಲದ ಮದುವೆ ಬಗ್ಗೆ ಬಾಲಕಿ ಪರಿಚಯಸ್ಥರ ಬಳಿ ನೋವು ತೋಡಿಕೊಂಡಿದ್ದಳು. ಈ ಸಂಬಂಧ ಶಂಕರ್ ನಾಗ್ ಎಂಬುವರು ನೀಡಿದ ದೂರಿನ ಮೇರೆಗೆ ಬಾಲ್ಯವಿವಾಹವಾಗಿದ್ದ ಗುರುಪ್ರಸಾದ್ ನನ್ನು ಬಂಧಿಸಿದರೆ ವಿವಾಹಕ್ಕೆ ಸಹಕರಿಸಿದ ಬಾಲಕಿ ಪೋಷಕರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಅಪ್ರಾಪ್ತ ಮಗಳಿಗೆ ಎರಡೆರಡು ಬಾರಿ ಬಾಲ್ಯವಿವಾಹ ಮಾಡಿಸಿದ್ಲು ಹೆತ್ತಮ್ಮ!