ಬೆಂಗಳೂರು: ಕೊರೊನಾ ಹಿನ್ನೆಲೆ ಶಾಲಾ ಮಕ್ಕಳಿಗೆ ನೀಡುತ್ತಿದ್ದ ಮಧ್ಯಾಹ್ನ ಬಿಸಿಯೂಟದ ಬದಲು ಆಹಾರ ಪದಾರ್ಥ ವಿತರಣೆ ಮಾಡಲಾಗುತ್ತಿತ್ತು. 58 ದಿನಗಳವರೆಗೆ ಆಹಾರ ಪದಾರ್ಥ ವಿತರಿಸಲಾಗಿತ್ತು. ಬಳಿಕ ಜೂನ್-ಜುಲೈ ತಿಂಗಳ ಆಹಾರ ಪದಾರ್ಥ ವಿತರಣೆಗೆ ಬ್ರೇಕ್ ಹಾಕಲಾಗಿತ್ತು. ಇದೀಗ ಸರ್ಕಾರ ಜೂನ್ ನಿಂದ ಅಕ್ಟೋಬರ್ ವರೆಗೆ (5 ತಿಂಗಳ ಅವಧಿವರೆಗೆ) ಸಂಬಂಧಿಸಿದಂತೆ ಮಧ್ಯಾಹ್ನ ಉಪಹಾರ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ 449 ಕೋಟಿ ರೂಗಳ ಅನುದಾನ ಬಿಡುಗಡೆ ಮಾಡಲಾಗಿದೆ.
ಈ ಅವಧಿಯ ಆಹಾರ ಧಾನ್ಯಗಳನ್ನು ವಿತರಿಸಲು ಇಲಾಖೆಯು ತುರ್ತು ಕ್ರಮವಹಿಸಲಿದೆ. ಸಚಿವ ಸುರೇಶ್ ಕುಮಾರ್ ಅವರು ಆರ್ಥಿಕ ಇಲಾಖೆಯ ಅಧಿಕಾರಿಗಳಿಗೆ ತುರ್ತು ಕ್ರಮಕ್ಕೆ ನಿರ್ದೇಶನ ನೀಡಿದರು. ಆಹಾರ ಭದ್ರತಾ ಭತ್ಯೆಯ ರೂಪದಲ್ಲಿ 1 ರಿಂದ 10ನೇ ತರಗತಿಗಳ ಅರ್ಹ ಮಕ್ಕಳಿಗೆ ವಿತರಿಸಬೇಕಾದ ಆಹಾರ ಧಾನ್ಯಗಳ ಮತ್ತು ತೊಗರಿಬೇಳೆಯ ಪ್ರಮಾಣದ ಬಗ್ಗೆ ಹಾಗೂ ಕೋವಿಡ್-19 ವೈರಾಗಳು ಸೋಂಕಿನ ಹಿನ್ನೆಲೆಯಲ್ಲಿ ಸದರಿ ಆಹಾರ ಸಾಮಗ್ರಿಗಳ ಮಕ್ಕಳಿಗೆ ವಿತರಣೆ ಮಾಡಲು ಶಾಲಾ ಹಂತದಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಮತ್ತು ಇತರೆ ಅಗತ್ಯ ಅಂಶಗಳನ್ನು ಒಳಗೊಂಡ ಒಂದು ಸಮಗ್ರವಾದ ಮಾರ್ಗಸೂಚಿಯನ್ನು ಆಯುಕ್ತರು ಹೊರಡಿಸುವಂತೆ ಸೂಚಿಸಿದೆ.