ಬೆಂಗಳೂರು :ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯಲ್ಲಿ ಅನುಷ್ಠಾನಗೊಂಡ ಮಹಿಳೆಯರ ಉಚಿತ ಬಸ್ ಪ್ರಯಾಣದ 'ಶಕ್ತಿ ಯೋಜನೆ'ಯಡಿಯಲ್ಲಿ 43 ಕೋಟಿಗಿಂತ ಹೆಚ್ಚು ಮಹಿಳೆಯರು ಉಚಿತ ಪ್ರಯಾಣಿಸಿ 1,000 ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆಸಿದ್ದಾರೆ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತಿಳಿಸಿದೆ. ಯೋಜನೆ ಜಾರಿಯಾದಾಗಿನಿಂದ ಈವರೆಗೂ 4 ಸಾರಿಗೆ ನಿಗಮಗಳಲ್ಲಿ 43,61,49,219 ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿ 1013.94 ಕೋಟಿ ಮೊತ್ತದ ಟಿಕೆಟ್ ಪಡೆದಿದ್ದಾರೆ ಎಂದು ಮಾಹಿತಿ ಒದಗಿಸಿದೆ.
ಕೆಎಸ್‌ಆರ್‌ಟಿಸಿಯಲ್ಲಿ 13,26,08,022 ಮಹಿಳೆಯರು ಪ್ರಯಾಣಿಸಿದ್ದು, 384,17,94,855 ರೂ. ಮೊತ್ತದ ಟಿಕೆಟ್ ಪಡೆದಿದ್ದಾರೆ. ಬಿಎಂಟಿಸಿಯಲ್ಲಿ 14,43,67,198 ಮಹಿಳೆಯರು ಪ್ರಯಾಣಿಸಿದ್ದು, 184,26,15,492 ಟಿಕೆಟ್ ವಹಿವಾಟು ನಡೆಸಿದ್ದಾರೆ. ಉಳಿದಂತೆ, ವಾಯುವ್ಯ ಕರ್ನಾಟಕ ಸಾರಿಗೆ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ ಕ್ರಮವಾಗಿ 10,07,26,888 ಹಾಗೂ 5,84,47,111 ಮಹಿಳೆಯರು ಪ್ರಯಾಣಿಸಿದ್ದು, 252,98,78,590 ಹಾಗೂ 192,51,36,803 ರೂ. ಮೊತ್ತದ ಟಿಕೆಟ್ ನೀಡಲಾಗಿದೆ.
ಜುಲೈ ತಿಂಗಳಿನಲ್ಲಿ 19 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, ಸುಮಾರು 450 ಕೋಟಿ ರೂ. ಗೂ ಹೆಚ್ಚು ಟಿಕೆಟ್ ಖರ್ಚಾಗಿತ್ತು. ಯೋಜನೆ ಜಾರಿಯಾದ ಜೂನ್ ತಿಂಗಳಿನಲ್ಲಿ 10 ಕೋಟಿ ಮಹಿಳೆಯರು ಪ್ರಯಾಣಿಸಿದ್ದು 250 ಕೋಟಿ ವಹಿವಾಟು ನಡೆದಿದೆ.