ಬೆಂಗಳೂರು:ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್(ಐಐಎಸ್ಸಿ)ನಿಂದ ಸುಮಾರು 425 ಕೋಟಿ ರೂ. ದೇಣಿಗೆ ಸಂಗ್ರಹವಾಗಿದ್ದು, 800 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಲಿದೆ. ಸಂಶೋಧನೆ, ಶಿಕ್ಷಣ, ವಿಜ್ಞಾನ ಮತ್ತು ಇಂಜಿನಿಯರಿಂಗ್ಗೆ ಒತ್ತು ನೀಡುವ ಭಾರತದ ಮುಂಚೂಣಿ ಸಂಸ್ಥೆ ಐಐಎಸ್ಸಿ ತನ್ನ ಬೆಂಗಳೂರು ಕ್ಯಾಂಪಸ್‌ನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೊಂದಿಗೆ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಸ್ಕೂಲ್ ಪ್ರಾರಂಭಿಸಲು ಮುಂದಾಗಿದೆ.
ಆಸ್ಪತ್ರೆಯಲ್ಲಿ ಹಾಗೂ ಐಐಎಸ್ಸಿಯ ವಿಜ್ಞಾನ ಮತ್ತು ಇಂಜಿನಿಯರಿಂಗ್ ಪ್ರಯೋಗಾಲಯಗಳಲ್ಲಿ ವಿದ್ಯಾರ್ಥಿಗಳು ಏಕಕಾಲಕ್ಕೆ ತರಬೇತಿ ಪಡೆಯಲಿದ್ದಾರೆ. ಇದು ಮಲ್ಟಿ ಆಸ್ಪತ್ರೆಯಾಗಿದ್ದು, ಶೈಕ್ಷಣಿಕ ಕಾರ್ಯಕ್ರಮದ ಕ್ಲಿನಿಕಲ್ ತರಬೇತಿ ಮತ್ತು ಸಂಶೋಧನಾ ಚಟುವಟಿಕೆಗಳನ್ನು ಪೂರೈಸಬಹುದು.
ಇದಕ್ಕಾಗಿ ದಾನಿಗಳಾದ ಸುಸ್ಮಿತಾ ಮತ್ತು ಸುಬ್ರತೊ ಬಾಗ್ಚಿ, ರಾಧಾ ಹಾಗೂ ಎನ್‌ಎಸ್ ಪಾರ್ಥ ಸಾರಥಿ ದಂಪತಿಗಳು ಒಟ್ಟಾಗಿ 425 ಕೋಟಿ ರೂ.ಗಳನ್ನು (60ಮಿಲಿಯನ್ ಡಾಲರ್) ದೇಣಿಗೆ ನೀಡಿದ್ದಾರೆ. ಐಐಎಸ್ಸಿ ಸ್ಥಾಪನೆಯಾದ ನಂತರ ಇದೊಂದೆ ದೊಡ್ಡ ಮೊತ್ತದ ಖಾಸಗಿ ದೇಣಿಗೆಯಾಗಿದೆ. ಈ ಆಸ್ಪತ್ರೆಯನ್ನು ಬಾಗ್ಚಿ - ಪಾರ್ಥಸಾರಥಿ ಆಸ್ಪತ್ರೆ ಎಂದು ಕರೆಯಲಾಗುತ್ತದೆ.
ಈ ಕುರಿತು ಐಐಎಸ್ಸಿ ನಿರ್ದೇಶಕ ಪ್ರೊ.ಗೋವಿಂದನ್ ರಂಗರಾಜನ್ ಮಾತನಾಡಿದ್ದು, ಸುಸ್ಮಿತಾ ಮತ್ತು ಸುಬ್ರತೊ ಬಾಗ್ಚಿ ಹಾಗೂ ರಾಧಾ ಮತ್ತು ಎನ್ಎಸ್ ಪಾರ್ಥಸಾರಥಿ ಅವರ ಉದಾತ್ತ ನಡೆಗೆ ಅತ್ಯಂತ ಅಭಾರಿಯಾಗಿದ್ದೇವೆ. ಆಸ್ಪತ್ರೆಯ ಕಾಮಗಾರಿಯೂ ಮುಂದಿನ ಜೂನ್ನಲ್ಲಿ ಆರಂಭವಾಗಿ 2024ಕ್ಕೆ ಮುಕ್ತಾಯವಾಗಲಿದೆ. ಸುಮಾರು 15 ಎಕರೆಯಲ್ಲಿ ಬೆಂಗಳೂರು ಕ್ಯಾಂಪಸ್‌ನಲ್ಲಿ ನಿರ್ಮಾಣ ವಾಗಲಿದೆ. ಇನ್ನು ಐಐಎಸ್ಸಿ ಪ್ರಮುಖ ಆಕರ್ಷಣೆಯ ಹಸಿರು ಪರಿಸರದೊಂದಿಗೆ ಕೂಡಿಕೊಂಡಿದ್ದು, ಇದಕ್ಕೆ ಧಕ್ಕೆಯಾಗದಂತೆ ನಿರ್ಮಾಣ ಮಾಡಲಾಗುವುದು ಎಂದರು.