ಕರ್ನಾಟಕ

karnataka

ETV Bharat / state

ಈ ಸರ್ಕಾರ ಕನ್ನಡಿಗರ ಪಾಲಿಗೆ ಭ್ರಷ್ಟಾಚಾರದ ಬಕಾಸುರ: ಪ್ರಿಯಾಂಕ್ ಖರ್ಗೆ ವಾಗ್ದಾಳಿ - ಉಪಾಧ್ಯಕ್ಷ ರಮೇಶ್ ಬಾಬು ಜತೆ ಜಂಟಿ ಸುದ್ದಿಗೋಷ್ಠಿ

ಕಾರ್ಮಿಕ ಇಲಾಖೆಯ ಮೂಲಕ ಬಿಜೆಪಿ ಭಷ್ಟಾಚಾರ ಮಾಡುತ್ತಿದೆ ಎಂದು ಮತ್ತೆ ಸರ್ಕಾರದ ವಿರುದ್ಧ ಶಾಸಕ ಪ್ರಿಯಾಂಕ್​ ಖರ್ಗೆ ಶೇ 40ರ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.

Congress MLA Priyank Kharge
ಕಾಂಗ್ರೆಸ್​ ಶಾಸಕ ಪ್ರಿಯಾಂಕ್​ ಖರ್ಗೆ

By

Published : Mar 2, 2023, 7:47 PM IST

ಕಾಂಗ್ರೆಸ್​ ಶಾಸಕ ಪ್ರಿಯಾಂಕ್​ ಖರ್ಗೆ

ಬೆಂಗಳೂರು: ಮಹಾಭಾರತದಲ್ಲಿ ಬಕಾಸುರನಿಗೆ ಎಷ್ಟು ಕೊಟ್ಟರೂ ತಿನ್ನುತ್ತಿದ್ದನಂತೆ. ಅದೇ ರೀತಿ ಈ 40ರಷ್ಟು ಕಮಿಷನ್​​ ಸರ್ಕಾರ ಕನ್ನಡಿಗರ ಪಾಲಿಗೆ ಭ್ರಷ್ಟಾಚಾರದ ಬಕಾಸುರ ಆಗಿದೆ. ಇವರು ಜನರ ಹಣ ಹಾಗೂ ಜೀವನವನ್ನೇ ನುಂಗುತ್ತಿದೆ ಎಂದು ಕಾಂಗ್ರೆಸ್​ ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಕಾರ್ಮಿಕ ಇಲಾಖೆಯ ಟೆಂಡರ್ ದಾಖಲೆಯಲ್ಲಿ, 'ಯಾರು ಈ ಟೆಂಡರ್ ಪಡೆಯುತ್ತಾರೋ ಅವರೇ ಮೂರನೇ ವ್ಯಕ್ತಿ ನೇಮಿಸಿ ಸಮೀಕ್ಷೆ ಹಾಗೂ ಗುಣಮಟ್ಟದ ಪರೀಕ್ಷೆ ಮಾಡಿಸಿ, ಆ ಬಗ್ಗೆ ಸರ್ಕಾರಕ್ಕೆ ಪತ್ರ ನೀಡಬೇಕು' ಎಂದು ತಿಳಿಸಲಾಗಿದೆ. ಶಾಲಾ ಕಿಟ್​ಗಳನ್ನು ಕಾರ್ಮಿಕರ ಮಕ್ಕಳ ಪೈಕಿ 5ನೇ ತರಗತಿಯವರಿಗೆ ಮೊದಲು ನೀಡಿ, ನಂತರ ಉಳಿದರೆ 4, 3, 2, 1 ರಂತೆ ತರಗತಿ ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ಹೇಳಿದೆ. ಹಾಗಿದ್ದರೆ ಇದನ್ನು ಕೇವಲ 5ನೇ ತರಗತಿಗೆ ಎಂದು ಟೆಂಡರ್ ಕರೆಯಬಹುದಿತ್ತಲ್ಲವೇ?

ಶಿಕ್ಷಣ ಇಲಾಖೆ ಏನು ಮಾಡುತ್ತಿದೆ?: ಸಾಮಾನ್ಯವಾಗಿ ಸಮೀಕ್ಷೆ ಮಾಡಿ ನಂತರ ಎಷ್ಟು ಮಕ್ಕಳಿದ್ದಾರೆ ಎಂದು ಅಂಕಿ - ಅಂಶ ಪಡೆದು ಆ ನಂತರ ಟೆಂಡರ್ ಕರೆಯಬೇಕು. ಸಮೀಕ್ಷೆ ನಡೆಸದೇ ಅಂಕಿ ಅಂಶಗಳು ಇಲ್ಲದೇ ಸರ್ಕಾರ ಈ ಟೆಂಡರ್ ಕರೆದಿದೆ. ಇದರಿಂದಲೇ ಸರ್ಕಾರ ಆಡಳಿತ ನಡೆಸುತ್ತಿರುವ ವೈಖರಿ. ಕಾರ್ಮಿಕ ಇಲಾಖೆ ಶಾಲಾ ಮಕ್ಕಳಿಗೆ ಕಿಟ್ ನೀಡುವುದಾದರೆ, ಶಿಕ್ಷಣ ಇಲಾಖೆ ಏನು ಮಾಡುತ್ತಿದೆ? ಸರ್ಕಾರಕ್ಕೆ ಈವರೆಗೂ ಸರಿಯಾಗಿ ಶಾಲಾ ಮಕ್ಕಳಿಗೆ ಸಮವಸ್ತ್ರ, ಶೂ, ಸಾಕ್ಸ್ ನೀಡಲು ಆಗಿಲ್ಲ. ಇವು ಸ್ಕೂಲ್ ಕಿಟ್ ಅಲ್ಲ ಬಿಜೆಪಿ ಭ್ರಷ್ಟಾಚಾರದ ಟೂಲ್ ಕಿಟ್ ಆಗಿದೆ. ಕರ್ನಾಟಕ ಕಟ್ಟುತ್ತಿರುವ ಕಾರ್ಮಿಕರಿಗೆ ಇವರು ಅನ್ಯಾಯ ಮಾಡುತ್ತಿದ್ದಾರೆ. ಇವರು ಕಾರ್ಮಿಕರ ಪರವಾಗಿದ್ದರೆ ಈ ಕಿಟ್ ತರಿಸಿ ಮಾರುಕಟ್ಟೆಯಲ್ಲಿ ಈ ಉಪಕರಣಗಳ ಬೆಲೆ ಏನು ಎಂದು ಪರಿಶೀಲಿಸಿ.

ಇಲ್ಲಿ ಯಾವುದೇ ಉನ್ನತ ಮಟ್ಟದ ತನಿಖೆ ಅಗತ್ಯವೇ ಇಲ್ಲ. ಇಲ್ಲಿ ಉಪಕರಣಗಳ ಬೆಲೆ ದುಪ್ಪಟ್ಟಾಗಿದ್ದರೆ ನೀವು ರಾಜೀನಾಮೆ ನೀಡುತ್ತೀರಾ? ಕಾರ್ಮಿಕರಿಗೆ 10 ಭರವಸೆ ನೀಡಿದ್ದು ಒಂದಾದರೂ ಭರವಸೆ ಈಡೇರಿಸಿದ್ದೀರಾ? ಈ ಸರ್ಕಾರ ದುಡಿಯುವ ಕೈಯಿಂದ ಕಿತ್ತು ತಿನ್ನುತ್ತಿದ್ದಾರೆ. ಕಾರ್ಮಿಕರು, ಮಷಿನ್​, ಎಲೆಕ್ಟ್ರಿಷಿಯನ್ ಕಿಟ್​ಗಳಲ್ಲಿ ಹಗರಣ ಮಾಡುತ್ತಿದ್ದಾರೆ. ರಾಷ್ಟ್ರದಲ್ಲಿ ಕರ್ನಾಟಕ ಪ್ರಗತಿಪರ ರಾಜ್ಯವಾಗಿದ್ದರೆ ಅದಕ್ಕೆ ಕಾರ್ಮಿಕರು ಕಾರಣ. ಈ ಆಧಾರವನ್ನೇ ಬಿಜೆಪಿ ಭ್ರಷ್ಟಾಚಾರದ ಮೂಲಕ ಅಲುಗಾಡಿಸುವ ಪ್ರಯತ್ನ ಮಾಡುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಗಂಭೀರ ಆರೋಪ ಮಾಡಿದರು.

ಪ್ರತಿ ಕಿಟ್​ ಬೆಲೆ 9 ಸಾವಿರ: ತಾಕತ್ತಿದ್ದರೆ ಈ ಪ್ರಕರಣವನ್ನು ನ್ಯಾಯಾಂಗ ತನಿಖೆ ಮಾಡಿಸಿ. ಅವರು ಎಲ್ಲಿ ಹೇಳುತ್ತಾರೋ ಅಲ್ಲಿ ಹೋಗಿ ನಾವು ಸಾಕ್ಷಿ ನೀಡುತ್ತೇವೆ. ನ್ಯಾಯಾಂಗ ತನಿಖೆ ನೀಡಲು ಆಗದಿದ್ದರೆ ಈ ಕಿಟ್ ತರಿಸಿ, ಇವುಗಳ ಮೌಲ್ಯ ಎಷ್ಟಿದೆ ಎಂದು ಅವರೇ ಪರಿಶೀಲನೆ ಮಾಡಲಿ. ಇಷ್ಟಾದರೂ ಇಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎಂದರೆ ರಾಜ್ಯವನ್ನು ದೇವರೆ ಕಾಪಾಡಬೇಕು. ಇವರು ಭ್ರಷ್ಟಾಚಾರದ ಬಕಾಸುರರಾಗಿದ್ದಾರೆ. ಎಷ್ಟು ತಿಂದರೂ ಇವರಿಗೆ ತೃಪ್ತಿಯಾಗುತ್ತಿಲ್ಲ. ನಾವು ಕಾರ್ಮಿಕರ ಪರವಾಗಿ ನಿಲ್ಲುತ್ತೇವೆ. ಮುಂದಿನ ದಿನಗಳಲ್ಲಿ ಈ ವಿಚಾರವಾಗಿ ತನಿಖೆ ಮಾಡಿಸುತ್ತೇವೆ. ಪ್ರತಿ ಶಾಲಾ ಕಿಟ್​ಗೆ 9 ಸಾವಿರ ಬೆಲೆ ನಿಗದಿ ಮಾಡಿದ್ದಾರೆ. ಕಾರ್ಮಿಕ ಇಲಾಖೆಯವರು ನೋಟ್ ಬುಕ್, ಪೆನ್ ಸೆಟ್​ ನೀಡುತ್ತಿದ್ದರೆ, ಶಿಕ್ಷಣ ಸಚಿವರು ಏನು ಮಾಡುತ್ತಿದ್ದಾರೆ? ಅವರು ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯುತ್ತಿದ್ದಾರಾ? ಎಂದು ಮರು ಪ್ರಶ್ನೆ ಹಾಕಿದರು.

ಈ ಹಿಂದೆ 250 ಕೋಟಿ ಹಗರಣ ಬಯಲು ಮಾಡಿದ್ದೆವು - ರಮೇಶ್​ ಬಾಬು:ಸರ್ಕಾರದ ಭ್ರಷ್ಟಾಚಾರದ ಬಗ್ಗೆ ರಮೇಶ್ ಬಾಬು ಮಾತನಾಡಿ, ಇತ್ತೀಚೆಗೆ ಕಾಕಂಬಿಗೆ ಸಂಬಂಧಿಸಿದಂತೆ 250 ಕೋಟಿ ಹಗರಣವನ್ನು ಕಾಂಗ್ರೆಸ್ ದಾಖಲೆ ಸಮೇತವಾಗಿ ಸುದ್ದಿಗೋಷ್ಠಿ ಮಾಡಿತ್ತು. ಇಂದು ಕಾರ್ಮಿಕ ಇಲಾಖೆಯಲ್ಲಿ ಆಗಿರುವ 250 ಕೋಟಿ ಮೌಲ್ಯದ ಕಿಟ್​ಗಳ ಹಗರಣದ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಕಾರ್ಮಿಕರ ಇಲಾಖೆಯಲ್ಲಿ 7-8 ಸಾವಿರ ಕೋಟಿ ಅವ್ಯವಹಾರ ನಡೆದಿದ್ದು, ಅದರ ಮೊದಲ ಭಾಗ ಈ ಹಗರಣವಾಗಿದೆ. ಮುಖ್ಯಮಂತ್ರಿಗಳು ಹಾಗೂ ಮಂತ್ರಿಗಳು ದಾಖಲೆ ಕೇಳುತ್ತಾರೆ. ನಾವು ಇಂದು ದಾಖಲೆ ಸಮೇತ ಎಲ್ಲ ವಿಚಾರ ನಿಮ್ಮ ಮುಂದಿಡುತ್ತೇವೆ. ಕಾರ್ಮಿಕ ಇಲಾಖೆಯಿಂದ ಯಾವ ಕಿಟ್ ನೀಡಲಾಗುತ್ತಿದೆ. ಅವುಗಳ ಮೌಲ್ಯ ಏನು? ಇಲಾಖೆ ವತಿಯಿಂದ ಈ ಕಿಟ್​ಗಳಿಗೆ ಎಷ್ಟು ದರ ನಿಗದಿ ಮಾಡಿದ್ದಾರೆ ಎಂಬ ಸಂಪೂರ್ಣ ದಾಖಲೆ ನಿಮ್ಮ ಮುಂದೆ ಇಡಲಾಗುತ್ತಿದೆ ಎಂದು ಹೇಳಿದರು.

1996ರಲ್ಲಿ ಕರ್ನಾಟಕ ಕಟ್ಟಡ ಹಾಗೂ ಇತರ ಕಾರ್ಮಿಕರ ಕಾಯ್ದೆ ಜಾರಿ ಮಾಡಿದ್ದು, ಶೇ.1ರಷ್ಟು ಸುಂಕ ಸಂಗ್ರಹಿಸಲು ಆರಂಭಿಸಲಾಯಿತು. 2006ರಲ್ಲಿ ಇದಕ್ಕೆ ನಿಯಮಾವಳಿ ರೂಪಿಸಿ ಸುಂಕದ ರೂಪದಲ್ಲಿ ಸಂಗ್ರಹಿಸಿರುವ ಹಣವನ್ನು ಕಾರ್ಮಿಕರ ಕಲ್ಯಾಣಕ್ಕೆ ಹೇಗೆ ವಿನಿಯೋಗಿಸಬೇಕು ಎಂದು ಸರ್ಕಾರ ನಿಯಮಾವಳಿ ರೂಪಿಸಿತ್ತು. ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಸೆಸ್ ಅನ್ನು ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಕ್ಕೆ ಮಾತ್ರ ವಿನಿಯೋಗಿಸಬೇಕು. ರಾಜ್ಯ ಕಾರ್ಮಿಕ ಇಲಾಖೆಯಲ್ಲಿ ಸುಮಾರು 2,500 ಕೋಟಿ ವಾರ್ಷಿಕವಾಗಿ ಸೆಸ್ ಸಂಗ್ರಹವಾಗುತ್ತದೆ.

ಇನ್ನು ಈ ಇಲಾಖೆ ಇಟ್ಟಿರುವ ಠೇವಣಿಗೆ ಬಡ್ಡಿಯೇ ವಾರ್ಷಿಕ 350 ಕೋಟಿ ಸಿಗುತ್ತಿದೆ. 2020-21, 2021-22ರಲ್ಲಿ ಕಾರ್ಮಿಕರ ಉಪಯೋಗಕ್ಕಾಗಿ ಕಿಟ್ ವಿತರಣೆ ನೀಡುವ ಯೋಜನೆ ರೂಪಿಸುತ್ತಾರೆ. ಇದರ ಭಾಗವಾಗಿ 2.67,556 ಕಿಟ್ ನೀಡಿದ್ದಾರೆ. ರಾಜ್ಯದಲ್ಲಿ ಐದು ವಿಭಾಗವಾಗಿ ಮಾಡಿ ಕಿಟ್ ಹಂಚಿದ್ದಾರೆ. 2020-21ನೇ ಸಾಲಿನಲ್ಲಿ 6 ಕಿಟ್ ನೀಡಲು ನಿರ್ಧರಿಸುತ್ತಾರೆ. 5,625 ಬಾರ್ ಬೆಂಡಿಂಗ್ ಕಿಟ್, 5,600 ಕಾರ್ಪೆಂಟರಿ, 4,625 ಎಲೆಕ್ಟ್ರೀಷಿಯನ್, 8,605 ಪೇಂಟಿಂಗ್, 5,203 ಪ್ಲಂಬಿಂಗ್, 96,000 ಮೆಷನರಿ ಕಿಟ್ ನೀಡಲು ನಿರ್ಧರಿಸುತ್ತಾರೆ.

ಕಿಟ್​ಗಳಿಗಾಗಿ 250 ಕೋಟಿ ರೂ ವಿನಿಯೋಗ: ಒಟ್ಟು 49.94 ಕೋಟಿ ಹಣ ವಿನಿಯೋಗ ಮಾಡಿರುತ್ತಾರೆ. ನಂತರ 2021-22ನೇ ಸಾಲಿನಲ್ಲಿ ಈ ಐದು ವಿಭಾಗಗಳಲ್ಲಿ 2,67,556 ಟೂಲ್ ಕಿಟ್ ಖರೀದಿ ಮಾಡಿದ್ದು ಇದಕ್ಕೆ 133 ಕೋಟಿ ಹಣ ವಿನಿಯೋಗ ಮಾಡಿದೆ. ಇದಾದ ನಂತರ 2022-23ನೇ ಸಾಲಿನಲ್ಲಿ ನೊಂದಾಯಿತ ಕಾರ್ಮಿಕರ ಮಕ್ಕಳಿಗೆ 1-5ನೇ ಹಂತದ ಮಕ್ಕಳಿಗೆ ಒಂದು ಟೂಲ್ ಕಿಟ್ 6-8ನೇ ತರಗತಿ ಮಕ್ಕಳಿಗೆ ಮತ್ತೊಂದು ಕಿಟ್ ನೀಡಿದ್ದಾರೆ. 1-5ನೇ ತರಗತಿ ಮಕ್ಕಳಿಗೆ ನೀಡಿರುವ ಟೂಲ್ ಕಿಟ್​ನಲ್ಲಿ 35 ಸಾಮಗ್ರಿಗಳನ್ನು ನೀಡಿದ್ದು, ಒಂದೊಂದು ವಿಭಾಗದಲ್ಲೂ ಈ ಕಿಟ್ ಮೌಲ್ಯ ಬೇರೆ ಬೇರೆ ಇದೆ. 1-5ನೇ ತರಗತಿ ಮಕ್ಕಳ ಕಿಟ್​ಗೆ 38.47 ಕೋಟಿ ಹಣ ನೀಡಿದೆ. 6-8ನೇ ತರಗತಿ ಕಿಟ್​ಗೆ 27.80 ಕೋಟಿ ಹಣ ನೀಡಿದೆ. ಒಟ್ಟು 250 ಕೋಟಿ ಹಣವನ್ನು ಕಿಟ್​ಗಳಿಗೆ ವಿನಿಯೋಗಿಸಿದ್ದಾರೆ ಎಂದರು.

ಮಾರುಕಟ್ಟೆಯಲ್ಲಿ ಒಂದು ಪೆನ್ಸಿಲ್ ಬಾಕ್ಸ್ ಮೌಲ್ಯ 100 ರೂ. ಇದ್ದರೆ, ಇವರು 200 ರೂ. ಹಾಕಿದ್ದಾರೆ. ಇವರು ಶಾಲಾ ವಿದ್ಯಾರ್ಥಿಗಳಿಗೆ ನೀಡಿರುವ ಕಿಟ್ ಮೌಲ್ಯ 3,650 ರೂ. ಆಗಿದೆ. ಆದರೆ ಇವರು 7,300 ರಿಂದ 9,000ದ ವರೆಗೆ ದಾಖಲು ಮಾಡಿದ್ದಾರೆ. ಇನ್ನು ಉಳಿದ ಎಲೆಕ್ಟ್ರಿಟಿಷಿಯನ್ ಉಪಕರಣ 6,904 ರೂ. ನಿಗದಿ ಮಾಡಿದ್ದು, ಇದರಲ್ಲಿ ಇರುವ ವಸ್ತುಗಳ ಬೆಲೆ 2,960 ರೂ ಮೌಲ್ಯದ್ದಾಗಿದೆ. ಮಕ್ಕಳು ಹಾಗೂ ಕಾರ್ಮಿಕರಿಗೆ ನೀಡಿರುವ ಕಿಟ್​ಗಳಲ್ಲೂ ಇವರು ಅಕ್ರಮ ಮಾಡುತ್ತಿದ್ದಾರೆ. ಇದು ನಾಚಿಕೆಗೇಡಿನ ವಿಚಾರ. ದಾಖಲೆ ಕೇಳುವ ಸಿಎಂ ಬೊಮ್ಮಾಯಿ ಅವರು ಸಮಯಾವಕಾಶ ಕೊಟ್ಟರೆ ಈ ದಾಖಲೆಗಳನ್ನು ಅವರ ಕಚೇರಿ, ನಿವಾಸಕ್ಕೆ ಹೋಗಿ ನೀಡಲು ಸಿದ್ಧವಿದ್ದೇವೆ. ಈ ಕಿಟ್​ದರ ಎಷ್ಟಿದೆ, ಇಲ್ಲಿ ಕಮಿಷನ್ ಎಷ್ಟು ಪಡೆಯಲಾಗಿದೆ ಎಂದು ಅವರೇ ಪರಿಶೀಲಿಸಿ ಹೇಳಲಿ. ಮುಖ್ಯಮಂತ್ರಿಗಳಿಗೆ ಕಿಂಚಿತ್ತಾದರೂ ನೈತಿಕತೆ ಇದ್ದರೆ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಲಿ ಎಂದು ವಿವರಿಸಿದರು.
ಕಾರ್ಮಿಕ ಘಟಕದ ಅಧ್ಯಕ್ಷ ಪುಟ್ಟಸ್ವಾಮಿ ಉಪಸ್ಥಿತರಿದ್ದರು.

ಇದನ್ನೂ ಓದಿ:ಬಿಜೆಪಿಯದ್ದು ವಿಜಯ ಸಂಕಲ್ಪ ಯಾತ್ರೆಯಲ್ಲ, ಕ್ಷಮಾಪಣಾ ಯಾತ್ರೆ: ರಣದೀಪ್​ ಸುರ್ಜೇವಾಲಾ

ABOUT THE AUTHOR

...view details