ಕರ್ನಾಟಕ

karnataka

ETV Bharat / state

ತೆರಿಗೆ ರೂಪದಲ್ಲಿ ಬರುವ ಶೇ.40ರಷ್ಟು ಹಣವನ್ನು ಮೂಲಸೌಕರ್ಯ ಅಭಿವೃದ್ಧಿಗೆ ಮೀಸಲಿಡಬೇಕು: ಕಾಸಿಯಾ ಅಧ್ಯಕ್ಷ ಶಶಿಧರ ಶೆಟ್ಟಿ - Lack of basic industrial infrastructure

ಪಂಚಾಯತ್​ ವ್ಯಾಪ್ತಿಯೊಳಗೆ ಕೈಗಾರಿಕಾ ಮೂಲಸೌಕರ್ಯಗಳ ಕೊರತೆ ಇದ್ದು, ಸಮಸ್ಯೆ ಪರಿಹರಿಸಲು ತೆರಿಗೆ ರೂಪದಲ್ಲಿ ಬರುವ ಶೇ.40ರಷ್ಟು ಹಣವನ್ನು ಮೀಸಲಿಡಬೇಕೆಂದು ಕರ್ನಾಟಕ ಸಣ್ಣ ಪ್ರಮಾಣದ ಕೈಗಾರಿಕೆಗಳ ಸಂಘದ (ಕಾಸಿಯಾ) ಅಧ್ಯಕ್ಷ ಸಿ.ಎ.ಶಶಿಧರ ಶೆಟ್ಟಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

shashidhar shetty
ಕಾಸಿಯಾ ಅಧ್ಯಕ್ಷ ಶಶಿಧರ ಶೆಟ್ಟಿ

By

Published : Jul 30, 2023, 8:48 AM IST

ಬೆಂಗಳೂರು : ಉದ್ಯಮಿಗಳು ಸಾಕಷ್ಟು ಪ್ರಮಾಣದಲ್ಲಿ ಆಸ್ತಿ ತೆರಿಗೆ ಪಾವತಿಸಿದರೂ ಈ ಪ್ರದೇಶಗಳಲ್ಲಿ ಮತ್ತು ಪಂಚಾಯಿತಿ ವ್ಯಾಪ್ತಿಯೊಳಗೆ ಮೂಲಭೂತ ಕೈಗಾರಿಕಾ ಮೂಲಸೌಕರ್ಯಗಳ ಕೊರತೆ ಇದ್ದು, ಈ ಸಮಸ್ಯೆಗೆ ಶಾಶ್ವತ ಪರಿಹಾರೋಪಾಯ ಕಂಡುಕೊಳ್ಳಲು ಇಲ್ಲಿ ತೆರಿಗೆ ರೂಪದಲ್ಲಿ ಬರುವ ಶೇ.40ರಷ್ಟು ಹಣವನ್ನು ಅಲ್ಲಿನ ಮೂಲಸೌಕರ್ಯಾಭಿವೃದ್ಧಿಗೆ ಮೀಸಲಿಡಬೇಕು ಎಂದು ಸಚಿವರಲ್ಲಿ ಕಾಸಿಯಾ ಅಧ್ಯಕ್ಷ ಸಿ.ಎ.ಶಶಿಧರ ಶೆಟ್ಟಿ ವಿನಂತಿಸಿದ್ದಾರೆ.

ಕೇಂದ್ರ ಸರ್ಕಾರದ ಎಂಎಸ್‍ಎಂಇ -ಸಿಡಿಪಿ ಯೋಜನೆಯಡಿ ಕೈಗಾರಿಕಾ ಮೂಲಭೂತ ಸೌಕರ್ಯಗಳಿಗೆ ಹಣಕಾಸಿನ ಹಂಚಿಕೆ ಇರುತ್ತದೆ. ಕೈಗಾರಿಕಾ ಕ್ಲಸ್ಟರ್​ಗಳಿಗೆ ಅನುದಾನದ ಅವಕಾಶವಿರುತ್ತದೆ. ಆದ್ದರಿಂದ ಕ್ಲಸ್ಟರ್ ಆಧಾರಿತ ನಿವೇಶನ ಹಂಚಿಕೆ ಮಾಡಿದಲ್ಲಿ ಕೇಂದ್ರ ಮತ್ತ ರಾಜ್ಯ ಸರ್ಕಾರಗಳ ಅನುದಾನ ಬಳಸಿಕೊಂಡು ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಿದಾಗ ನಿವೇಶನಗಳ ಬೆಲೆ ಗಣನೀಯವಾಗಿ ಕಡಿಮೆಯಾಗುವುದರಿಂದ ವಸತಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕೆಗಳನ್ನು ಸ್ಥಳಾಂತರಿಸಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ತಾವು ಗಮನಹರಿಸಿದಲ್ಲಿ ಕೈಗಾರಿಕೆಗಳಿಗೆ ಬಹಳ ಉಪಯೋಗವಾಗುವುದಲ್ಲದೇ ತಮಗೂ ಹಾಗೂ ಸರ್ಕಾರಕ್ಕೂ ಒಳ್ಳೆಯ ಹೆಸರು ಬರುತ್ತದೆ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ :ಬಜೆಟ್ ಸಣ್ಣ ಕೈಗಾರಿಕೆಗಳಿಗೆ ನಿರಾಶಾದಾಯಕ : ಕಾಸಿಯಾ ಅಧ್ಯಕ್ಷ ನರಸಿಂಹಮೂರ್ತಿ

ನೂತನ ಕೈಗಾರಿಕಾ ವಸಾಹತುಗಳ ಸ್ಥಾಪನೆ, ಮಹಾನಗರ ಪಾಲಿಕೆ/ಸ್ಥಳೀಯ ಸಂಸ್ಥೆಗಳ ವತಿಯಿಂದ ಆಸ್ತಿ ತೆರಿಗೆ ವಸೂಲಾತಿಯಲ್ಲಿ ಬದಲಾವಣೆ ಮಾಡಿ ರಿಯಾಯಿತಿ ನೀಡಬೇಕು. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಸಮಸ್ಯೆಗಳ ಪರಿಹಾರ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ್ದೇವೆ ಎಂದರು.

ಕೈಗಾರಿಕಾ ಪ್ರದೇಶಗಳಲ್ಲಿ ರಸ್ತೆಗಳು ತೀವ್ರ ಹದಗೆಟ್ಟಿದ್ದು, ಸರಕು ಮತ್ತು ಸಾಮಗ್ರಿಗಳ ಸಾಗಣೆಗೂ ಕೂಡ ತೊಂದರೆಯಾಗುತ್ತಿದೆ. ಬೀದಿದೀಪಗಳ ಸಮಸ್ಯೆಯಿಂದ ರಾತ್ರಿ ವೇಳೆ ಮಹಿಳಾ ಉದ್ಯೋಗಿಗಳು ಓಡಾಡಲು ಭಯ ಪಡುತ್ತಿದ್ದಾರೆ. ಇದನ್ನು ಸರಿಪಡಿಸಬೇಕು ಎಂದು ಮನವಿ ಮಾಡಿದ್ದೇವೆ. ಇದಲ್ಲದೆ, ನಮ್ಮ ಕಾಸಿಯಾ ಕಾರ್ಯಚಟುವಟಿಕೆಗಳನ್ನು ರಾಜ್ಯದ ಎಲ್ಲ ಪ್ರದೇಶಗಳಿಗೂ ವಿಸ್ತರಿಸಲು ವಾರ್ಷಿಕ 5 ಕೋಟಿ ರೂ. ಅನುದಾನ ನೀಡಬೇಕು. ಕೈಗಾರಿಕಾ ಅದಾಲತ್, ವಿದ್ಯುತ್ ದರ ಏರಿಕೆಯನ್ನು ಮುಂದೂಡುವುದು ಮತ್ತು ವಿದ್ಯುತ್ ಮೇಲೆ ವಿಧಿಸುತ್ತಿರುವ ತೆರಿಗೆ ಕಡಿತಗೊಳಿಸಬೇಕು ಹಾಗೂ ಎಂಎಸ್‍ಎಂಇಗಳಿಗೆ ಸಹಾಯಧನ ಸೇರಿದಂತೆ ಹಲವು ವಿಷಯಗಳನ್ನು ಸಚಿವರ ಜತೆ ಚರ್ಚಿಸಲಾಯಿತು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ :ಎಂಎಸ್ಎಂಇಗಳಿಗೆ ಆರ್ಥಿಕ ಪ್ಯಾಕೇಜ್ ನಿರಾಶಾದಾಯಕ: ಕಾಸಿಯಾ ಅಧ್ಯಕ್ಷ ಕೆ.ಬಿ. ಅರಸಪ್ಪ

ಕೆಐಎಡಿಬಿ ಮತ್ತು ಕೆಎಸ್‍ಐಡಿಸಿ ನಿರ್ವಹಿಸುತ್ತಿರುವ ಕೈಗಾರಿಕಾ ಪ್ರದೇಶಗಳು, ವಸಾಹತುಗಳು ಮೂಲಸೌಕರ್ಯಗಳ ಕೊರತೆಯಿಂದ ಬಹಳಷ್ಟು ಬಳಲುತ್ತಿರುವುದರಿಂದ ಉದ್ಯಮಿಗಳಿಗೆ ಅನಾನುಕೂಲವಾಗುತ್ತಿದ್ದು, ಇದನ್ನು ಪರಿಹರಿಸಬೇಕು ಎಂದು ಸಣ್ಣ ಕೈಗಾರಿಕೆಗಳ ಸಚಿವ ಶರಣಬಸಪ್ಪ ದರ್ಶನಾಪುರ ಅವರನ್ನು ಭೇಟಿ ಮಾಡಿದ ಕಾಸಿಯಾ ನಿಯೋಗ ಒತ್ತಾಯಿಸಿದೆ. ಉಪಾಧ್ಯಕ್ಷ ಎಂ.ಜಿ. ರಾಜಗೋಪಾಲ, ಪ್ರಧಾನ ಕಾರ್ಯದರ್ಶಿ ಎಸ್.ನಾಗರಾಜು, ಜಂಟಿ ಕಾರ್ಯದರ್ಶಿ ಶ್ರೇಯಸ್ ಕುಮಾರ್ ಜೈನ್, ಖಜಾಂಚಿ ಮಲ್ಲೇಶಗೌಡ ಸೇರಿದಂತೆ ಹಲವು ಪದಾಧಿಕಾರಿಗಳು ನಿಯೋಗದಲ್ಲಿದ್ದರು.

ABOUT THE AUTHOR

...view details