ಕರ್ನಾಟಕ

karnataka

ETV Bharat / state

ಆರ್​ಬಿಐ ಬ್ಯಾಂಕ್​ ಹೆಸರಿನಲ್ಲಿ 40 ಲಕ್ಷ ರೂ. ದೋಖಾ : ಬೆಂಗಳೂರಲ್ಲಿ 8 ಮಂದಿ‌ ಆರೋಪಿಗಳ ಬಂಧನ - ಸಿಸಿಬಿ ಜಂಟಿ‌ ಪೊಲೀಸ್ ಆಯುಕ್ತ ಎಸ್ ಡಿ ಶರಣಪ್ಪ‌

ಪ್ರತಿಷ್ಠಿತ ಬ್ಯಾಂಕ್​ ಹೆಸರಿನಲ್ಲಿ ಲಕ್ಷಾಂತ ರೂ ವಂಚಿಸಿದ ಗ್ಯಾಂಗ್​ಅನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Arrest of the accused
ಆರೋಪಿಗಳ ಬಂಧನ

By

Published : Mar 23, 2023, 8:09 PM IST

ಲಕ್ಷಾಂತ ರೂ ವಂಚಿಸಿದ ಗ್ಯಾಂಗ್​ಅನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿ

ಬೆಂಗಳೂರು :ಅತಿ ಆಸೆ ಗತಿ ಕೇಡು ಅನ್ನೋ ಮಾತಿದೆ‌. ಇದಕ್ಕೆ‌ ಪೂರಕವೆಂಬಂತೆ ಜನರ ಬಂಡವಾಳವನ್ನು ಎನ್ ಕ್ಯಾಶ್ ಮಾಡಿಕೊಂಡು ಕೋಟ್ಯಂತರ ರೂಪಾಯಿ ನೀಡುವುದಾಗಿ ಆಸೆ ತೋರಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಘಟನೆ ನಡೆದಿದೆ. ಈ ಪ್ರಕರಣದಲ್ಲಿ 8 ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಆಶೋಕ್ ಕುಮಾರ್, ರಮೇಶ್ ಕುಮಾರ್, ಮಂಜುನಾಥ್, ರಾಜ್ ಕುಮಾರ್, ಗಂಗರಾಜು, ಕುಮಾರೇಶ್, ಮೂರ್ತಿ ನಾಯಕ್, ಸಿದ್ದರಾಜು ನಾಯಕ್ ಬಂಧಿತ ಆರೋಪಿಗಳಾಗಿದ್ದು, ಇವರಿಂದ 11.50 ಲಕ್ಷ ನಗದು, ಬ್ಯಾಂಕಿನಲ್ಲಿದ್ದ 16 ಲಕ್ಷಕ್ಕಿಂತ ಹೆಚ್ಚು ಹಣ ವಶಕ್ಕೆ ಪಡೆದುಕೊಳ್ಳಲಾಗಿದೆ.

ವಂಚನೆ ಮಾಡಿದ್ದು ಹೇಗೆ? :ಭಾರತದಲ್ಲಿ ಬ್ಯಾಂಕುಗಳ ಬ್ಯಾಂಕು ಎಂದೇ ಕರೆಯುವ ಆರ್​ಬಿಐ ಬ್ಯಾಂಕ್​ನ ಲಾಂಛನದ ಕಾಗದಪತ್ರ, ಸೀಲ್ ಹಾಗೂ ಸಿಗ್ನೇಚರ್​ಗಳನ್ನು ನಕಲಿಯಾಗಿ ಸೃಷ್ಟಿಸಿಕೊಂಡು ವ್ಯವಹಾರ ಸಂಬಂಧವಾಗಿ ವಿದೇಶದಿಂದ 75 ಸಾವಿರ ಕೋಟಿ‌ ರೂಪಾಯಿ‌ ವರ್ಗಾವಣೆಯಾಗಿದೆ ಎಂದು ಅರೋಪಿಗಳು ಬಿಂಬಿಸಿಕೊಂಡಿದ್ದರು. ಬಳಿಕ ಟ್ರಾನ್ಸ್​ಫರ್ ಆದ ಹಣವನ್ನು ಬಿಡಿಸಿಕೊಳ್ಳಬೇಕಾದರೆ ಮುಂಗಡವಾಗಿ 150 ಕೋಟಿ ಪಾವತಿಸಬೇಕಿದೆ. 20 ಲಕ್ಷ ಹಣ ಕಟ್ಟಿದರೆ ಏಳೂವರೆ ಕೋಟಿ ಕಮೀಷನ್ ಪಾವತಿಸುವುದಾಗಿ ಆಮಿಷವೊಡ್ಡಿದ್ದರು.

ಆರೋಪಿಗಳ ಬಂಧನ

ಇನ್ನು ಮುಂದುವರೆದಂತೆ ದೂರುದಾರರನ್ನು‌ ನಂಬಿಸಲು ದೆಹಲಿ ಹಾಗೂ ಮುಂಬೈನಲ್ಲಿರುವ ಆರ್​ಬಿಐ ಬ್ಯಾಂಕ್ ಬಳಿ ಕರೆದುಕೊಂಡು ಹೋಗಿ ಪೋಟೊ ತೆಗೆಸಿಕೊಂಡಿದ್ದರು. ಅಲ್ಲದೆ‌ ನಕಲಿ‌ ಆರ್​ಬಿಐ ಅಧಿಕಾರಿಯನ್ನು ಕೂಡ ಸೃಷ್ಟಿಸಿ ಯಾಮಾರಿಸಿದ್ದರು. ಹಣದ ಆಸೆ ಜೋತು ಬಿದ್ದ ವ್ಯಕ್ತಿಯೊಬ್ಬರು ಬರೋಬ್ಬರಿ ಸುಮಾರು 40 ಲಕ್ಷ ರೂಪಾಯಿ ಪಾವತಿಸಿದ್ದರು‌. ಇತ್ತ ಹಣ ಜಮೆಯಾಗುತ್ತಿದ್ದಂತೆ ಆರೋಪಿಗಳು ಎಸ್ಕೇಪ್ ಆಗಿದ್ದರು.‌

ಈ ಸಂಬಂಧ ವಂಚನೆಗೆ ಒಳಗಾದ ವ್ಯಕ್ತಿ ನೀಡಿದ ದೂರಿನ ಮೇರೆಗೆ ಆರ್.ಆರ್.ನಗರ‌ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು‌‌‌. ಬಳಿಕ ಸಿಸಿಬಿ ವಿಶೇಷ ದಳಕ್ಕೆ ಪ್ರಕರಣ ಹಸ್ತಾಂತರವಾಗಿ ತನಿಖೆ ನಡೆಸಿದ ಸಿಸಿಬಿ ಪೊಲೀಸರು 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ವಂಚನೆ ಪ್ರಕರಣದಲ್ಲಿ‌ ಇನ್ನೂ‌ ಕೆಲವರು ಭಾಗಿಯಾಗಿ ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಬಲೆ ಬೀಸಲಾಗಿದೆ. ಇನ್ನು ಬಂಧಿತ ಅರೋಪಿಗಳ ತನಿಖೆ ವೇಳೆ ಇದೆ ಬ್ಯಾಂಕ್‌ ಹೆಸರಿನಲ್ಲಿ ಹತ್ತಾರು ಜನರಿಗೆ ವಂಚನೆ ಎಸಗಿರುವುದು ಕಂಡುಬಂದಿದೆ ಎಂದು ಸಿಸಿಬಿ ಜಂಟಿ‌ ಪೊಲೀಸ್ ಆಯುಕ್ತ ಎಸ್.ಡಿ. ಶರಣಪ್ಪ‌ ತಿಳಿಸಿದರು.

ಆರ್​ಬಿಐ ಬ್ಯಾಂಕ್​ನ ಲಾಂಛನದ ಕಾಗದಪತ್ರ, ಸೀಲ್ ಹಾಗೂ ಸಿಗ್ನೇಚರ್​ ನಕಲಿ

ಕಾರು ಅಡ್ಡಗಟ್ಟಿ 97 ಲಕ್ಷ ಎಗರಿಸಿದ ಆರೋಪಿಗಳ ಬಂಧನ :ಸಿನಿಮೀಯ ಶೈಲಿಯಲ್ಲಿ ಕ್ಯಾಶ್ ಮ್ಯಾನೇಜ್ಮೆಂಟ್ ಸರ್ವಿಸಸ್ ವ್ಯಾನ್ ಅಡ್ಡಗಟ್ಟಿ 97ಲಕ್ಷ ರೂ ದೋಚಿದ್ದ ಎಂಟು ಜನ ಆರೋಪಿಗಳನ್ನು ಮಹದೇವಪುರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹದೇವಪುರದ ಸಿಂಗಯ್ಯನಪಾಳ್ಯದಲ್ಲಿ ಕೆಲ‌ ದಿನಗಳ ಹಿಂದೆ ಹಣ ಸಂಗ್ರಹಿಸುವ ಸಿಎಂಎಸ್ ಕಾರಿನಲ್ಲಿ ನಾಲ್ವರು ಸಿಬ್ಬಂದಿ 97 ಲಕ್ಷ ರೂಪಾಯಿ ತೆಗೆದುಕೊಂಡು ಬರುವಾಗ ಸಂದರ್ಭದಲ್ಲಿ ಅಡ್ಡಗಟ್ಟಿದ 12 ಮಂದಿ ದರೋಡೆಕೋರರು ಹಣವಿರುವ ಕಾರಿಗೆ ಮತ್ತೊಂದು ಕಾರಿನಿಂದ ಡಿಕ್ಕಿ ಹೊಡೆದು ಗಲಾಟೆ ಮಾಡಿದ್ದಾರೆ. ಬಳಿಕ ಕಾರಿನ ಗಾಜುಗಳನ್ನು ಹೊಡೆದು ಹಾಕಿ ಪೆಪ್ಪರ್ ಸ್ಪ್ರೇ ಹಾಕಿ ಕಾರಿನಲ್ಲಿದ್ದ ಹಣ ಎಗರಿಸಿ ಸ್ಥಳದಿಂದ ಪರಾರಿಯಾಗಿದ್ದರು.

ಈ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರು ದಾಖಲಿಸಿಕೊಂಡಿದ ಪೊಲೀಸರು ಇದೀಗಾ ಕೇರಳ ಮೂಲದ ಗ್ಯಾಂಗ್​ಯೊಂದನ್ನು ಬಂಧಿಸಿದ್ದಾರೆ. ಬಂಧಿತರಿಂದ 37 ಲಕ್ಷ ನಗದು, 45 ಗ್ರಾಂ ಚಿನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ. ಬಂಧಿತ ಆರೋಪಿಗಳಾದ ಮೊಹಮ್ಮದ್ ಶಫಿ ಮತ್ತು ಶರತ್ ಹಾಗೂ ಅತುಲ್ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಕೇಂದ್ರ ತನಿಖಾ ತಂಡಗಳ ವಿಚಾರಣೆಗೆ ಒಳಗಾಗಿದ್ದರು. ಕೇರಳ ಮತ್ತು ರಾಜ್ಯದ ಹಲವು ಕಡೆಗಳಲ್ಲಿ ದೊಂಬಿ, ಕೊಲೆಯತ್ನ, ಸುಲಿಗೆ, ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು.ಆರೋಪಿಗಳಿಂದ ನಾಲ್ಕು ಕಾರುಗಳು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ :ಪಿಎಸ್​​ಐ, ಹೆಡ್​ಕಾನ್ಸ್​ಟೇಬಲ್​ರಿಂದಲೇ ಆರೋಪಿ ಅಪಹರಿಸಿ ಹಣಕ್ಕೆ ಬೇಡಿಕೆ ಆರೋಪ: ಪೊಲೀಸಪ್ಪ ಸೇರಿ ಮೂವರ ಬಂಧನ​

ABOUT THE AUTHOR

...view details