ಬೆಂಗಳೂರು :ಕೊರೊನಾ ನಿಯಂತ್ರಣಕ್ಕಾಗಿ ಇದೀಗ ಸರ್ಕಾರ ನಾಲ್ಕು ರಾಜ್ಯ ಮಟ್ಟದ ಸಮಿತಿ ರಚಿಸಿದೆ. ಜೊತೆಗೆ 14 ಜಿಲ್ಲಾ ಮಟ್ಟದ ಕಾರ್ಯತಂಡವನ್ನು ರಚಿಸಿ ಆದೇಶಿಸಿದೆ.
ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ನೇತೃತ್ವದಲ್ಲಿ ಕೋವಿಡ್ ಕೇರ್ ಸೆಂಟರ್, ಕೋವಿಡ್- 19 ಹೆಲ್ತ್ ಸೆಂಟರ್, ಪ್ರತ್ಯೇಕ ಕೋವಿಡ್ -19 ಆಸ್ಪತ್ರೆಗಳ ಲಭ್ಯತೆ ಮತ್ತು ಮಾನವ ಸಂಪನ್ಮೂಲಗಳ ನಿಯೋಜನೆಗಾಗಿ ರಾಜ್ಯ ಸಮಿತಿ ರಚಿಲಾಗಿದೆ.
ಅದೇ ರೀತಿ ಸಂಪರ್ಕ ಪತ್ತೆ, ಐಎಲ್ಐ, ಸಾರಿ ಪ್ರಕರಣ ಪತ್ತೆಗಾಗಿ ರಾಜ್ಯ ಮಟ್ಟದ ಸಮಿತಿ ರಚಿಸಲಾಗಿದೆ. ಸ್ಯಾಂಪಲ್ ಸಂಗ್ರಹ, ಟೆಸ್ಟಿಂಗ್, ಲ್ಯಾಬ್ ಬಳಕೆಗಾಗಿ ಸಮಿತಿಯನ್ನು ರಚಿಸಲಾಗಿದೆ. ನಾಲ್ಕನೆಯದಾಗಿ ವಾರ್ಡ್ ಮಟ್ಟದ, ಗ್ರಾಮ ಮಟ್ಟದ ವಿಪತ್ತು ನಿರ್ವಹಣಾ ಸಮಿತಿ, ಕೋವಿಡ್ ಕಾರ್ಯಪಡೆಯನ್ನು ಒಳಗೊಂಡ ಸಮುದಾಯ ಭಾಗೀದಾರಿಕೆಗಾಗಿ ಸಮಿತಿ ರಚಿಸಲಾಗಿದೆ.
ಜಿಲ್ಲಾ ಮಟ್ಟದ ಕಾರ್ಯತಂಡದ ರಚನೆ :ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಕೋವಿಡ್-19 ನಿಯಂತ್ರಣಕ್ಕಾಗಿ ಸುರಕ್ಷತಾ ಕ್ರಮಗಳ ಕುರಿತು ಕಾರ್ಯನಿರ್ವಹಿಸುವುದಕ್ಕಾಗಿ 14 ಜಿಲ್ಲಾ ಮಟ್ಟದ ಕಾರ್ಯತಂಡವನ್ನು ರಚಿಸಿದೆ.
ಜಿಲ್ಲಾ ಕಾರ್ಯತಂಡದ ವಿವರ :
- ಕೊರೊನಾ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್, ಪ್ರತ್ಯೇಕ ಕೋವಿಡ್ ಹೆಲ್ತ್ ಸೆಂಟರ್ಗೆ ಕಳುಹಿಸಲು ಕಾರ್ಯತಂಡ
- ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕಾರ್ಯತಂಡ
- ಪ್ರತ್ಯೇಕ ಕೋವಿಡ್ ಹೆಲ್ತ್ ಸೆಂಟರ್ಗಳಲ್ಲಿ ಅಗತ್ಯ ನಿರ್ವಹಣೆ, ಸೌಕರ್ಯ ಹೆಚ್ಚಿಸಲು ಕಾರ್ಯತಂಡ
- ಸಂಪರ್ಕ ಪತ್ತೆ ಹಚ್ಚುವ ಸಲುವಾಗಿ ಕಾರ್ಯತಂಡ
- ಕೋವಿಡ್ -19 ಸಂಬಂಧ ಆರೋಗ್ಯ ಪರೀಕ್ಷೆಗಾಗಿ ಕಾರ್ಯತಂಡ
- ಕಂಟೇನ್ಮೆಂಟ್ ವಲಯಗಳ ನಿರ್ವಹಣೆಗಾಗಿ ಕಾರ್ಯತಂಡ
- ಎಲ್ಲಾ ಕಂಟೇನ್ಮೆಂಟ್ಗಳ ಮೇಲೆ ನಿಗಾ ವಹಿಸಲು ಕಾರ್ಯತಂಡ
- ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಂಬಂಧ ಕಾರ್ಯತಂಡ
- ಖಾಸಗಿ, ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಹಾಗೂ ಜ್ವರ ಚಿಕಿತ್ಸಾಲಯಗಳ ಉಸ್ತುವಾರಿಗಾಗಿ ಕಾರ್ಯತಂಡ
- ಜಿಲ್ಲಾ ನಿಯಂತ್ರಣ ಕೊಠಡಿ ನಿರ್ವಹಣೆಗಾಗಿ ಕಾರ್ಯತಂಡ
- ಮೃತ ದೇಹದ ನಿರ್ವಹಣೆಗಾಗಿ ಕಾರ್ಯತಂಡ
- ರಸ್ತೆ ಮತ್ತು ರೈಲಿನ ಮೂಲಕ ಬರುವ ಅಂತರ್ರಾಜ್ಯ ಪ್ರಯಾಣಿಕರ ನಿರ್ವಹಣೆಗಾಗಿ ಕಾರ್ಯತಂಡ
- ವಿಮಾನ, ನೌಕಾಯಾನ ಮೂಲಕ ಪ್ರಯಾಣಿಸುವ ಅಂತರ್ರಾಜ್ಯ ಪ್ರಯಾಣಿಕರ ನಿರ್ವಹಣೆಗಾಗಿ ಕಾರ್ಯತಂಡ
- ಮಾತೃ ಮತ್ತು ಮಗುವಿನ ಆರೋಗ್ಯ ಸೇವಾ ಕಾರ್ಯಕ್ರಮಕ್ಕಾಗಿ ಕಾರ್ಯತಂಡ