ಬೆಂಗಳೂರು:ರಾಜ್ಯ ಸರಕಾರಿ ನೌಕರರಿಗೆ ಶೇಕಡಾ ನಾಲ್ಕರಷ್ಟು ತುಟ್ಟಿ ಭತ್ಯೆ ಹೆಚ್ಚಳ ಮಾಡಿ ರಾಜ್ಯ ಸರಕಾರ ಆದೇಶ ಮಾಡಿದೆ. ಮೂಲ ವೇತನದ ಡಿಎ ಯನ್ನು ಶೇಕಡ 31 ರಿಂದ 35 ಕ್ಕೆ ಹೆಚ್ಚಳ ಮಾಡಿ ಹಣಕಾಸು ಇಲಾಖೆ ಇಂದೇ ಆದೇಶ ಹೊರಡಿಸಿದೆ. ಹೊಸದಾಗಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ಸರ್ಕಾರ ರಾಜ್ಯದ ಸರ್ಕಾರಿ ನೌಕರರು ಹಲವು ದಿನಗಳ ಬೇಡಿಕೆಯನ್ನು ಈಡೇರಿಸಿದ್ದು, ಇದೀಗ 2023 ಜನವರಿ 1 ರಿಂದ ಜಾರಿಗೆ ಬರುವಂತೆ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕಳೆದ ವಾರ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಸರ್ಕಾರ ರಚನೆ ಆಗಿ ಕೆಲವೇ ದಿನಗಳಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದೆ. ಕಳೆದ ಒಂದು ತಿಂಗಳಿನಿಂದ ನೌಕರರು ಎದುರು ನೋಡುತ್ತಿದ್ದ, ತುಟ್ಟಿ ಭತ್ಯೆ ಹೆಚ್ಚಳ ಮಾಡುವ ಕಡತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ 24 ರಂದೇ ಸಹಿ ಹಾಕಿದ್ದರು. ಕೇಂದ್ರ ಸರ್ಕಾರದಂತೆ ರಾಜ್ಯದಲ್ಲೂ ಶೇ 4 ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಮಾಡುವ ಕಡತವನ್ನು ಪರಿಶೀಲಿಸಿ ಸಿದ್ದರಾಮಯ್ಯ ಸಹಿ ಹಾಕಿದ್ದರು.