ಬೆಂಗಳೂರು: ಹಣ ಪಡೆದು ಕೋವಿಡ್ ಟೆಸ್ಟ್ ನಕಲಿ ವರದಿ ಹಾಗೂ ಅಕ್ರಮವಾಗಿ ರೆಮ್ಡಿಸಿವಿರ್ ಇಂಜೆಕ್ಷನ್ ಮಾರಾಟ ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿ ನಾಲ್ವರನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.
ಚಾಮರಾಜಪೇಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಪ್ರಜ್ವಲಾ, ಶೇಖರ್, ಸಿಬ್ಬಂದಿಯಾದ ಸಾಯಿ ಕಿರಣ್ ಹಾಗೂ ಮೋಹನ್ ಬಂಧಿತರು. ಇನ್ನಿಬ್ಬರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ನಗರ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.
ನಕಲಿ ನೆಗೆಟಿವ್ ರಿಪೋರ್ಟ್, ರೆಮ್ಡಿಸಿವರ್ ಮಾರಾಟ ಪ್ರಕರಣ ಸಂಬಂಧ ಡಿಸಿಪಿ ಪ್ರತಿಕ್ರಿಯೆ ನಕಲಿ ರಿಪೋರ್ಟ್ ನೀಡಿ ಹಣ ಪಡೆಯುತ್ತಿದ್ದ ಇಬ್ಬರು ಅರೆಸ್ಟ್ ಚಾಮರಾಜಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವ್ಯಾಬ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಕಿರಣ್ ಹಾಗೂ ಮೋಹನ್ ಎಂಬುವರು ಜನರಿಂದ ಆಧಾರ್ ಕಾರ್ಡ್ ಹಾಗೂ 500 ರೂಪಾಯಿ ಪಡೆದು ನಕಲಿ ಆರ್ಟಿಸಿಪಿಆರ್ ವರದಿ ನೀಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಹೊರ ರಾಜ್ಯದ ಪ್ರಯಾಣಿಕರಿಗೆ ಕೊರೊನಾ ನಕಲಿ ವರದಿ ಕಡ್ಡಾಯವಾಗಿರುವ ಹಿನ್ನೆಲೆ ಪ್ರಯಾಣಿಕರು ಸಹ ಹಣ ನೀಡಿ ನಕಲಿ ವರದಿ ನೀಡಿ ಪ್ರಯಾಣ ಬೆಳೆಸುತ್ತಿದ್ದರು. ಇದುವರೆಗೂ 23 ಮಂದಿಗೆ ಫೇಕ್ ರಿಪೋರ್ಟ್ ನೀಡಿರುವುದಾಗಿ ತಿಳಿದು ಬಂದಿದೆ.
ರೆಮ್ಡಿಸಿವರ್ ಅಕ್ರಮ ಮಾರಾಟ: ಇಬ್ಬರ ಬಂಧನ
ಮತ್ತೊಂದು ಪ್ರಕರಣದಲ್ಲಿ ಕಾಳಸಂತೆಯಲ್ಲಿ ರೆಮ್ಡಿಸಿವರ್ ಇಂಜೆಕ್ಷನ್ ಮಾರಾಟ ಮಾಡುತ್ತಿದ್ದ ವೈದ್ಯರಾದ ಪ್ರಜ್ವಲಾ ಹಾಗೂ ಶೇಖರ್ ಎಂಬುವರನ್ನು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಚಾಮರಾಜಪೇಟೆ ಬಿಬಿಎಂಪಿ ಅರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ವೈದ್ಯೆ ಆಸ್ಪತ್ರೆಗೆ ಬರುವ ರೆಮ್ಡಿಸಿವಿರ್ ಔಷಧವನ್ನು ಅಕ್ರಮವಾಗಿ ಬೇರೆ ರೋಗಿಗಳಿಗೆ ಹಣಕ್ಕಾಗಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಶಿವಮೊಗ್ಗ ಮೂಲದ ವೈದ್ಯಕೀಯ ಸಿಬ್ಬಂದಿಯಿಂದ ರೆಮ್ಡಿಸಿವಿರ್ ಪಡೆದಿರುವ ಮಾಹಿತಿ ಹಿನ್ನೆಲೆ ಆತನಿಗಾಗಿ ಹುಡುಕಾಟ ಮುಂದುವರೆದಿದ್ದು, ಸದ್ಯ ಆರೋಪಿಗಳಿಂದ 11 ರೆಮ್ಡಿಸಿವಿರ್ ವಶಕ್ಕೆ ಪಡೆದುಕೊಂಡು ವಿಚಾರಣೆ ಮುಂದುವರೆಸಿರುವುದಾಗಿ ಡಿಸಿಪಿ ತಿಳಿಸಿದ್ದಾರೆ.