ಬೆಂಗಳೂರು: ಹಳೇ ವೈಷಮ್ಯ ಹಿನ್ನೆಲೆ ಎದುರಾಳಿ ಗುಂಪಿನ ರೌಡಿಶೀಟರ್ ಕೊಲೆಗೆ ಸಂಚು ರೂಪಿಸಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮಾರತ್ ಹಳ್ಳಿ ಠಾಣೆ ವ್ಯಾಪ್ತಿಯ ರೌಡಿಶೀಟರ್ ಸೋಮ, ಮಧು, ಸುಮಂತ್ ಹಾಗೂ ಮುನಿಮಲ್ಲಪ್ಪ ಬಂಧಿತ ಆರೋಪಿಗಳು. ಬಂಧಿತ ಗ್ಯಾಂಗ್ನ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದ ರೌಡಿಶೀಟರ್ ರೋಹಿತ್ ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿ ಹೊರ ಬಂದಿದ್ದ. ವರ್ತೂರು ಕೆರೆ ಕೊಡಿ ಬಳಿ ರೋಹಿತ್ ಬರುತ್ತಾನೆ ಎಂದು ಅರಿತ ಈ ಆರೋಪಿಗಳು ಮಾರಕಾಸ್ತ್ರ ಹಿಡಿದು ಕೊಲೆಗೆ ಸಂಚು ರೂಪಿಸಿದ್ದರು. ಈ ಮಾಹಿತಿ ಅರಿತ ಸಿಸಿಬಿ ಅಪರಾಧ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಮಾರತ್ ಹಳ್ಳಿ ಠಾಣೆಯ ರೌಡಿಶೀಟರ್ ಸೋಮನ ವಿರುದ್ಧ ಕೊಲೆ, ಕೊಲೆ ಯತ್ನ, ಬೆದರಿಕೆ ಸೇರಿದಂತೆ ಕೆಲ ಪ್ರಕರಣಗಳು ದಾಖಲಾಗಿವೆ. ಸಹಚರ ಮಧು ವರ್ತೂರು ಠಾಣೆಯ ರೌಡಿ ಪಟ್ಟಿಯಲ್ಲಿದ್ದ. ಗ್ಯಾಂಗ್ ವಿರೋಧಿಯಾಗಿದ್ದ ರೋಹಿತ್ ಮಾರತ್ ಹಳ್ಳಿ ಠಾಣೆಯಲ್ಲಿ ರೌಡಿ ಲಿಸ್ಟ್ನಲ್ಲಿದ್ದ. ಹಲವು ವರ್ಷಗಳಿಂದ ಸೋಮ ಹಾಗೂ ರೋಹಿತ್ ಗ್ಯಾಂಗ್ ನಡುವೆ ಕತ್ತಿ ಮಸೆಯುತಿತ್ತು. ಏರಿಯಾದಲ್ಲಿ ತಮ್ಮ ಪ್ರಭಾವ ಬೆಳೆಸಲು ಇಬ್ಬರ ನಡುವೆ ಆಗಾಗ ಗಲಾಟೆಯಾಗುತಿತ್ತು.
ಇದನ್ನೂ ಓದಿ:ಬಿಟ್‌ಕಾಯಿನ್ ಮೂಲಕ ಡ್ರಗ್ಸ್ ಖರೀದಿಸಿ, ಬೆಂಗಳೂರಿನಲ್ಲಿ ಮಾರಾಟ: ನೈಜೀರಿಯಾ ಪ್ರಜೆ ಸೇರಿ 6 ಮಂದಿ ಅರೆಸ್ಟ್
ಕೆಲ ತಿಂಗಳ ಹಿಂದೆ ಸೋಮನನ್ನು ಕೊಲೆ ಮಾಡಲು ರೋಹಿತ್ ಮಂಗಳೂರಿನಿಂದ ಹುಡುಗರನ್ನು ಕರೆಯಿಸಿಕೊಂಡಿದ್ದ. ಈತನ ಕೊಲೆ ಸಂಚನ್ನು ಸಿಸಿಬಿ ಪೊಲೀಸರು ವಿಫಲಗೊಳಿಸಿದ್ದರು. ಕೃತ್ಯದಲ್ಲಿ ಭಾಗಿಯಾಗಿದ್ದವರೆಲ್ಲರನ್ನು ಜೈಲಿಗಟ್ಟಿದ್ದರು. ಇದೀಗ ಜಾಮೀನಿನ ಮೇರೆಗೆ ಹೊರ ಬಂದಿದ್ದ ರೋಹಿತ್ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಸೋಮನ ಗ್ಯಾಂಗ್ ಸಿಕ್ಕಿಹಾಕಿಕೊಂಡಿದೆ.