ಬೆಂಗಳೂರು: ಕಡಿಮೆ ಅವಧಿಯಲ್ಲಿ ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ತಮ್ಮ ಸೂಪರ್ ವೈಸರ್ನನ್ನೇ ಕೊಂದು ನಂತರ ಶವವನ್ನು ತುರಹಳ್ಳಿ ಅರಣ್ಯ ಪ್ರದೇಶದ ಬಳಿ ಚರಂಡಿಗೆ ಬಿಸಾಡಿ ಬೆಂಕಿ ಹಾಕಿ ಸುಟ್ಟು ಹಾಕಿದ್ದ ಆರೋಪದಡಿ ನಾಲ್ವರು ಆರೋಪಿಗಳನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ.
ತುರಹಳ್ಳಿ ಕಿರು ಅರಣ್ಯ ಪ್ರದೇಶದ ಅರಣ್ಯ ರಕ್ಷಕ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ನಾಗರಾಜ್ ಸಹಚರರಾದ ಅರುಣ್ ರಾಥೋಡ್, ಮಂಜು, ಪರಶುರಾಮ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ರಾಜ್ಕುಮಾರ್ ಅಲಿಯಾಸ್ ಅಮಿತ್ ಕೊಲೆಯಾಗಿದ್ದ ವ್ಯಕ್ತಿ. ಕಳೆದ ತಿಂಗಳು 28ರಂದು ತುರಹಳ್ಳಿಯ ಅರಣ್ಯ ಪ್ರದೇಶದ ಚರಂಡಿವೊಂದರಲ್ಲಿ ಅಪರಿಚಿತ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅರಣ್ಯ ರಕ್ಷಕ ನೀಡಿದ ಮಾಹಿತಿ ಮೇರೆಗೆ ತಲಘಟ್ಟಪುರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.
ವ್ಯಕ್ತಿಯ ಚಹರೆ ಪತ್ತೆಗಾಗಿ ರೇಖಾಚಿತ್ರ
ಅಪರಿಚಿತರ ಶವದ ಗುರುತಿಗಾಗಿ ಬನಶಂಕರಿ ಠಾಣೆಯ ಪಿಎಸ್ಐ, ಹವ್ಯಾಸಿ ಚಿತ್ರ ಕಲಾವಿದ ಮಂಜುನಾಥ್ ವ್ಯಕ್ತಿಯ ಮುಖಭಾವ ಹೋಲುವ ರೇಖಾಚಿತ್ರ ಬಿಡಿಸಿದ್ದರು. ಇದೇ ಮಾಹಿತಿ ಆಧರಿಸಿ ಅಮಿತ್ ಕೊಲೆಯಾಗಿರುವ ವ್ಯಕ್ತಿಯೆಂದು ಪೊಲೀಸರು ಗುರುತಿಸಿದ್ದರು.
ಈತ ರಿಯಲ್ ಎಸ್ಟೇಟ್ ಉದ್ಯಮಿ ಶಶಿಕುಮಾರ್ ಎಂಬುವವರ ಬಳಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದ. ಹಾಗೆಯೇ, ಅಮಿತ್ ಅಧೀನದಲ್ಲಿ ಆರೋಪಿ ನಾಗರಾಜ್ ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಕೆಲಸ ಮಾಡುತ್ತಿದ್ದ. ಮಾಲೀಕ ಶಶಿಕುಮಾರ್ ಮೂವರಿಗಾಗಿ ಉಳಿದುಕೊಳ್ಳಲು ಪ್ರತ್ಯೇಕ ಮನೆ ಮಾಡಿಕೊಟ್ಟಿದ್ದರು. ಅಮಿತ್ ಕೆಲಸ ಮೆಚ್ಚಿ ಮಾಲೀಕ ಸಿಫ್ಟ್ ಕಾರನ್ನೂ ನೀಡಿದ್ದ. ಆದರೆ, ತನ್ನ ಜೊತೆಗೆ ಕೆಲಸಕ್ಕಿದ್ದ ನಾಗರಾಜ್ ಹಾಗೂ ಜೊತೆಯಲ್ಲಿದ್ದ ಹುಡುಗನಿಗೆ ಅಮಿತ್ ವೇತನ ಮಾತ್ರ ಪಾವತಿಸಲಿರಲಿಲ್ಲ.