ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಶೇ.37 ರಷ್ಟು ಜನರು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವುದು ನ್ಯೂರಾ ಅಧ್ಯಯನದಿಂದ ಬಹಿರಂಗವಾಗಿದೆ. ಬೆಂಗಳೂರಿನ ಇಮೇಜಿಂಗ್ ಮತ್ತು ಹೆಲ್ತ್ ಕೇರ್ ಸಂಸ್ಥೆಯಾಗಿರುವ ನ್ಯೂರಾದಲ್ಲಿ ಆರೋಗ್ಯ ತಪಾಸಣೆಗೆ ಒಳಗಾದ 3,000 ಜನರಲ್ಲಿ ಶೇ. 37 ರಷ್ಟು ಜನರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವುದು ಪತ್ತೆಯಾಗಿದೆ.
ಮಹಿಳೆಯರು ಮತ್ತು ಪುರುಷರಲ್ಲಿ ಈ ಅಧಿಕ ರಕ್ತದೊತ್ತಡದ ಪ್ರಮಾಣ ಸಮವಾಗಿರುವುದು ಕಂಡು ಬಂದಿದೆ. ಫ್ಯುಜಿಫಿಲ್ಮ್ ಹೆಲ್ತ್ ಕೇರ್ ಮತ್ತು ಎಐ ಆಧಾರಿತ ಇಮೇಜಿಂಗ್ ಮತ್ತು ಪರಿಣತ ಆರೋಗ್ಯ ರಕ್ಷಣೆ ಸಂಸ್ಥೆಯಾಗಿರುವ ಡಾ.ಕುಟ್ಟೀಸ್ ಸಹಯೋಗದ ನ್ಯೂರಾದಲ್ಲಿ ಈ ಆರೋಗ್ಯ ತಪಾಸಣೆ ಕೈಗೊಳ್ಳಲಾಗಿತ್ತು.
ಈ ಬಗ್ಗೆ ಮಾತನಾಡಿದ ನ್ಯೂರಾದ ವೈದ್ಯಕೀಯ ನಿರ್ದೇಶಕ ಡಾ.ತೌಸಿಫ್ ಅಹ್ಮದ್, ಅಧಿಕ ರಕ್ತದೊತ್ತಡವು ರೋಗಲಕ್ಷಣಗಳನ್ನು ಹೆಚ್ಚಿಸುವ ಮೊದಲು ವರ್ಷಗಳವರೆಗೆ ಯಾವುದೇ ಮುನ್ಸೂಚನೆ ಇಲ್ಲದೇ ದೇಹದಲ್ಲಿ ಹಾನಿ ಉಂಟು ಮಾಡುತ್ತದೆ. ಅನಿಯಂತ್ರಿತ ಅಧಿಕ ರಕ್ತದೊತ್ತಡವು ಅಂಗವೈಕಲ್ಯ, ಕಳಪೆ ಗುಣಮಟ್ಟದ ಜೀವನ, ಮಾರಣಾಂತಿಕ ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಇದರ ಜೊತೆಗೆ ಮೆದುಳು, ಕಣ್ಣುಗಳು ಮತ್ತು ಮೂತ್ರಪಿಂಡಗಳಂತಹ ಇತರ ಪ್ರಮುಖ ಅಂಗಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತೆ ಅಂತ ತಿಳಿಸಿದ್ದಾರೆ.
ವರ್ಷಕ್ಕೊಮ್ಮೆ ತಪಾಸಣೆ: ಹೀಗಾಗಿ, ಕಾಲಕಾಲಕ್ಕೆ ನಿಯಮಿತವಾಗಿ ರಕ್ತದೊತ್ತಡ ಪರೀಕ್ಷೆ ಮತ್ತು ನಿಗಾ ವಹಿಸುವುದು ಮುಖ್ಯವಾಗಿದೆ. ಒಂದು ವೇಳೆ, ಅಧಿಕ ರಕ್ತದೊತ್ತಡ ಸಾಮಾನ್ಯಕ್ಕಿಂತ ಅಧಿಕವಾಗಿದ್ದರೆ ಅಥವಾ ಕುಟುಂಬದಲ್ಲಿ ಯಾರಿಗಾದರೂ ಅಧಿಕ ರಕ್ತದೊತ್ತಡವಿದ್ದರೆ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ. 18 ವರ್ಷಕ್ಕಿಂತ ಮೇಲ್ಪಟ್ಟವರೆಲ್ಲರೂ ಅಧಿಕ ರಕ್ತದೊತ್ತಡದ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಯುಎಸ್ಪಿಎಸ್ಟಿಎಫ್ ಶಿಫಾರಸು ಮಾಡಿದೆ. 90/60 ಎಂಎಂಎಚ್ಜಿಯಿಂದ 120/80 ಎಂಎಂಎಚ್ಜಿವರೆಗೆ ರಕ್ತದೊತ್ತಡವಿದ್ದರೆ ಅದು ಆರೋಗ್ಯದ ಲಕ್ಷಣವಾಗಿದೆ. ಇದನ್ನು ಪ್ರತಿ ಐದು ವರ್ಷಗಳಿಗೊಮ್ಮೆ ತಪಾಸಣೆ ಮಾಡಿಸಿಕೊಳ್ಳಬೇಕು. ಒಂದು ವೇಳೆ, 120/80 ಎಂಎಂಎಚ್ಜಿ ಮತ್ತು 139/89ಎಂಎಂಎಚ್ಜಿ ಮಧ್ಯೆ ಇದ್ದರೆ ಪ್ರತಿ ವರ್ಷ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.