ಬೆಂಗಳೂರು:ಹಿರಿಯ ಕಾಂಗ್ರೆಸ್ ನಾಯಕರ ಅನುಪಸ್ಥಿತಿಯಲ್ಲಿ ಇಂದು ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯ 36ನೇ ಸಂಸ್ಥಾಪನಾ ದಿನ ಕಾರ್ಯಕ್ರಮ ನಡೆಯಿತು.
ಕೆಪಿಸಿಸಿ ಕಚೇರಿ ಆವರಣದಲ್ಲಿ ಇಂದು ನಡೆದ ಸಮಾರಂಭವನ್ನು ಮಾಜಿ ಸಚಿವೆ ರಾಣಿ ಸತೀಶ್ ಉದ್ಘಾಟಿಸಿದರು. ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಬಿ.ಪುಷ್ಪಾ ಅಮರನಾಥ್ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. ಸಮಾರಂಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಪ್ರಚಾರ ಸಮಿತಿ ಅಧ್ಯಕ್ಷ ಹೆಚ್.ಕೆ.ಪಾಟೀಲ್ ಪಾಲ್ಗೊಳ್ಳಬೇಕಿತ್ತು. ಆದರೆ ನಾನಾ ಕಾರಣ ನೀಡಿ ಸಮಾರಂಭದಲ್ಲಿ ಯಾರೊಬ್ಬರೂ ಪಾಲ್ಗೊಳ್ಳಲಿಲ್ಲ. ಗಣ್ಯರ ಅನುಪಸ್ಥಿತಿಯಲ್ಲಿಯೇ ಸಮಾರಂಭ ನೆರವೇರಿತು.
ಮಹಿಳಾ ಕಾಂಗ್ರೆಸ್ನ ಸಂಸ್ಥಾಪನಾ ದಿನ ಆಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವೆ ರಾಣಿ ಸತೀಶ್, ಮಹಿಳಾ ಕಾಂಗ್ರೆಸ್ನ ಗುಣಗಾನ ಮಾಡಿದರು. ಪಕ್ಷದ ಬಲ ಹೆಚ್ಚಿಸುವ ನಿಟ್ಟಿನಲ್ಲಿ ಮಹಿಳಾ ಕಾಂಗ್ರೆಸ್ ಪಾತ್ರ ಅತ್ಯಂತ ಪ್ರಮುಖವಾಗಿದೆ. ಇಂದು ಕಾಂಗ್ರೆಸ್ ಪಕ್ಷದಲ್ಲಿ ಮಹಿಳೆಯರಿಗೆ ಸಿಗುತ್ತಿರುವ ಗೌರವ, ಮನ್ನಣೆ ಬೇರೆಲ್ಲೂ ಸಿಗುತ್ತಿಲ್ಲ. ಇದರ ಸದ್ಬಳಕೆ ಮಾಡಿಕೊಳ್ಳಿ ಎಂದು ಅಭಿಪ್ರಾಯಪಟ್ಟರು.
ಇನ್ನು ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮಾತನಾಡಿ, ರಾಜ್ಯ ಅತ್ಯಂತ ಕಷ್ಟದಲ್ಲಿದೆ. ಕೇಂದ್ರ ಸರ್ಕಾರ ಕೂಡ ತಾರತಮ್ಯ ಧೋರಣೆಯನ್ನು ತೋರಿಸುತ್ತಿದೆ. ಇದನ್ನು ನಾನು ಖಂಡಿಸುತ್ತೇನೆ. ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಬೆಳೆಸುವ ವಿಚಾರಕ್ಕೆ ಕೇಂದ್ರ ಸರ್ಕಾರದಿಂದ ಸಹಕಾರ ಸಿಗುತ್ತಿಲ್ಲ ಎಂದರು.
ಅನೇಕ ಪರೀಕ್ಷೆಗಳು ಕೂಡ ಕನ್ನಡ ಮಾಧ್ಯಮದಲ್ಲಿ ಸಿಗದಿರುವುದು ಬೇಸರ ತರುತ್ತಿದ್ದು, ನಮ್ಮವರಿಗೆ ಅವಕಾಶ ತಪ್ಪುತ್ತಿದೆ. ಹಿಂದಿ ದಿವಸ್ ಆಚರಣೆ ಅಥವಾ ಬಳಕೆಯನ್ನು ನಾವು ವಿರೋಧಿಸುತ್ತಿಲ್ಲ. ಆದರೆ ಆಯಾ ರಾಜ್ಯದ ಮಾತೃ ಭಾಷೆಗೆ ಪ್ರಾಧಾನ್ಯ ನೀಡಬೇಕು ಎಂದು ಹೇಳಿದರು.