ಬೆಂಗಳೂರು :ಕಾಂಗ್ರೆಸ್ ಸದಸ್ಯರ ಸಭಾತ್ಯಾಗದ ನಡುವೆಯೇ ವಿತ್ತೀಯ ಕೊರತೆ ಶೇ.3 ರಿಂದ ಶೇ.5ಕ್ಕೆ ಹೆಚ್ಚಿಸಿ 33 ಸಾವಿರ ಕೋಟಿ ರೂ. ಸಾಲ ಪಡೆಯಲು ಅವಕಾಶ ನೀಡುವ ಕರ್ನಾಟಕ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕಕ್ಕೆ ಸದನ ಧ್ವನಿ ಮತದ ಮೂಲಕ ಅಂಗೀಕರಿಸಿತು.
ವಿಧೇಯಕವನ್ನು ಮುಖ್ಯಮಂತ್ರಿಗಳ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ವಿಧಾನಸಭೆಯಲ್ಲಿ ಮಂಡಿಸಿದರು. ಈ ವಿಷಯದ ಮೇಲೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕ ಕೃಷ್ಣಬೈರೇಗೌಡ ಮತ್ತಿತರರು ಸೇರಿ ಮತ್ತಿತರು ಸುದೀರ್ಘ ಚರ್ಚೆ ನಡೆಸುವ ಮೂಲಕ ವಿಧೇಯಕಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತು.
ಇದಕ್ಕೂ ಮುನ್ನ ಕೊರೊನಾ ಸಂಕಷ್ಟ ಕಾಲದಲ್ಲಿ ವಿತ್ತೀಯ ಕೊರತೆಯ ಶೇ.3ರಷ್ಟು ಸಾಲ ಪಡೆಯುವ ಪ್ರಮಾಣವನ್ನು ಶೇ. 5ಕ್ಕೆ ಏರಿಸಿ 33 ಸಾವಿರ ಕೋಟಿ ರೂ. ಸಾಲ ಪಡೆಯಲು ಅವಕಾಶ ನೀಡುವ ಕರ್ನಾಟಕ ಆರ್ಥಿಕ ಹೊಣೆಗಾರಿಕೆ ತಿದ್ದುಪಡಿ ವಿಧೇಯಕವನ್ನು ಸರ್ಕಾರ ಮಂಡಿಸಿತು.
ಸಾಲ ಪಡೆಯುವುದಕ್ಕೆ ನಮ್ಮ ವಿರೋಧವಿದೆ. ಇದರಿಂದ ರಾಜ್ಯದ ಆರ್ಥಿಕ ಸ್ಥಿತಿ ಹಾಳಾಗಿ ಹೋಗುತ್ತದೆ. ರಾಜ್ಯ ಸಾಲದ ಸುಳಿಗೆ ಸಿಲುಕುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆರೋಪಿಸಿದರು. ಸಾಲ ಪಡೆಯುವುದಕ್ಕೆ ನಮ್ಮ ವಿರೋಧ ವ್ಯಕ್ತಪಡಿಸಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.
ಕಾಂಗ್ರೆಸ್ ಸದಸ್ಯರ ಸಭಾತ್ಯಾಗದ ನಂತರ 33 ಸಾವಿರ ಕೋಟಿ ರೂ.ಗಳ ಸಾಲ ಪಡೆಯಲು ಅವಕಾಶ ನೀಡುವ ಕರ್ನಾಟಕ ಅರ್ಥಿಕ ಹೊಣೆಗಾರಿಕೆ ತಿದ್ದುಪಡಿ ವಿಧೇಯಕವನ್ನು ಸದನ ಧ್ವನಿಮತದಿಂದ ಅಂಗೀಕರಿಸಿತು. ಇದಕ್ಕೂ ಮೊದಲು ವಿಧೇಯಕದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಿದ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಅವರು, ನಮಗೂ ಸಾಲ ಪಡೆಯುವ ಆಸೆ ಇರಲಿಲ್ಲ.
ಸಾಲ ಪಡೆಯುವ ಚಟವೂ ನಮಗಿಲ್ಲ. ಆದರೆ, ಏನೂ ಮಾಡಲು ಸಾಧ್ಯವಿಲ್ಲ. ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗಿದೆ. ಇದು ನಮ್ಮಿಂದ ಆದ ತಪ್ಪಲ್ಲ. ಹಾಗಾಗಿ, ಅನಿವಾರ್ಯವಾಗಿ ಸಾಲ ಪಡೆಯುತ್ತಿದ್ದೇವೆ ಎಂದು ವಿಧೇಯಕ ಮಂಡನೆ ಸಮರ್ಥಿಸಿಕೊಂಡರು. ಇದು ಒಂದು ವರ್ಷದ ಅವಧಿಗೆ ಸೀಮಿತವಾಗಿ ಸಾಲ ಪಡೆಯುತ್ತಿದ್ದೇವೆ. ಈ ಸಾಲವನ್ನು ಸಂಪೂರ್ಣ ಅಭಿವೃದ್ಧಿ ಕಾರ್ಯಗಳಿಗೆ ಬಳಸುತ್ತಿಲ್ಲ. ಕೆಲ ಅಗತ್ಯ ವೆಚ್ಚಗಳಿಗೆ ಬಳಸುತ್ತೇವೆ. ಮುಂದಿನ 10 ವರ್ಷದಲ್ಲಿ ಈ ಸಾಲ ತೀರಿಸುವ ಷರತ್ತಿನ ಮೇಲೆ ಸಾಲ ಪಡೆಯಲಾಗುತ್ತಿದೆ ಎಂದು ಹೇಳಿದರು.
ರಾಜ್ಯ ಹಿಂದೆ ಸುಭಿಕ್ಷವಾಗಿದ್ದಾಗಲೆಲ್ಲ ಸಾಲ ಪಡೆದಿದ್ದಾರೆ. ಈಗ ನಿಜವಾಗಲೂ ಕಷ್ಟದಲ್ಲಿದ್ದೇವೆ. ಸಾಲ ಪಡೆಯುವ ಅನಿವಾರ್ಯತೆ ಇದೆ. ನಾವೇನೂ ಖುಷಿಯಿಂದ ಸಾಲ ಪಡೆಯುತ್ತಿಲ್ಲ. ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಮತ್ತು ಖರ್ಚು, ವೆಚ್ಚ ಸರಿದೂಗಿಸಲು ಸಾಲ ಪಡೆಯಲೇಬೇಕು. ಹಾಗಾಗಿ, ಅನಿವಾರ್ಯವಾಗಿ ವಿತ್ತೀಯ ಕೊರತೆ ಆಧಾರದ ಮೇಲೆ ಸಾಲ ಪಡೆಯುವ ಪ್ರಮಾಣವನ್ನು ಶೇ.5ಕ್ಕೆ ಹೆಚ್ಚಿಸುವ ವಿಧೇಯಕ ಮಂಡಿಸಿದ್ದೇವೆ.
ಕೇಂದ್ರ ಸರ್ಕಾರವೂ ಸಹ ವಿತ್ತೀಯ ಕೊರತೆಯ ಮಿತಿಯೊಳಗೆ ಶೇ.5ರಷ್ಟು ಸಾಲ ಪಡೆಯಲು ಅವಕಾಶ ನೀಡಿದೆ. ಇಂಥ ಕೊರೊನಾ ಸಂಕಷ್ಟ ಕಾಲದಲ್ಲೂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಆರ್ಥಿಕ ಪರಿಸ್ಥಿತಿಯನ್ನ ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ಹೇಳಿದರು.
ಜಿಎಸ್‌ಟಿ ಪಾಲಿನ ಹಣ ಬಿಡುವುದಿಲ್ಲ :ಕೇಂದ್ರ ಸರ್ಕಾರದಿಂದ ಬರಬೇಕಾದ ಜಿಎಸ್‌ಟಿ ಪಾಲಿನ ಹಣವನ್ನು ನಾವು ಬಿಡುವ ಪ್ರಶ್ನೆಯೇ ಇಲ್ಲ. 11 ಸಾವಿರ ಕೋಟಿ ರೂ.ಗಳ ಜಿಎಸ್‌ಟಿ ಪರಿಹಾರ ಪಡೆದೆ ಪಡೆಯುತ್ತೇವೆ. ಜೊತೆಗೆ ಐದು ಸಾವಿರ ಕೋಟಿ ರೂ.ಗಳ ಜಿಎಸ್‌ಟಿ ಪರಿಹಾರ ಪಡೆದೆ ಪಡೆಯುತ್ತೇವೆ. ಕೇಂದ್ರದ ಯಾವುದೇ ದಾಕ್ಷಿಣ್ಯಕ್ಕೊಳಗಾಗಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜ್ಯಕ್ಕೆ ಅನ್ಯಾಯವಾಗಿದೆ. ಅನುದಾನ ನೀಡಿ ಎಂದು ತುಮಕೂರಿನಲ್ಲಿ ಬಹಿರಂಗವಾಗಿ ಕೇಳಿದ್ದರು.
ದೇಶದ ಇತಿಹಾಸದಲ್ಲಿ ಯಾವೊಬ್ಬ ಮುಖ್ಯಮಂತ್ರಿಯೂ ಈ ರೀತಿ ಪ್ರಧಾನಿಯವರನ್ನು ಧೈರ್ಯವಾಗಿ ಬಹಿರಂಗ ಸಭೆಯಲ್ಲಿ ಅನುದಾನ ಕೇಳಿದ್ದ ಉದಾಹರಣೆ ಉಲ್ಲೇಖವೇ ಇಲ್ಲ. ಕೊರೊನಾದಿಂದ ಸಾಲ ಪಡೆಯುವ ಸ್ಥಿತಿ ಸೃಷ್ಟಿಯಾಗಿದೆ. ವಿರೋಧ ಪಕ್ಷದ ನಾಯಕರು ಹೇಳಿದಂತೆ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುತ್ತೇವೆ. ಮಸೂದೆಯನ್ನು ಅಂಗೀಕರಿಸಿ ಎಂದು ಮನವಿ ಮಾಡಿದರು.
ಅಧಿಕಾರಿಗಳ ಸವಲತ್ತು ಕಡಿಮೆ ಮಾಡಿ :ಬಳಿಕ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು, ನೀವು ಸಾಲ ಮಾಡುತ್ತಿರುವುದು ಸರಿಯಲ್ಲ. ಅದಕ್ಕೆ ನಮ್ಮ ವಿರೋಧ ಇದೆ. ರಾಜ್ಯ ಸರ್ಕಾರ ಸಾಲದ ಸುಳಿಗೆ ಸಿಲುಕುತ್ತದೆ. ಆರ್ಥಿಕ ಸ್ಥಿತಿ ಅಧೋಗತಿಗೆ ಇಳಿಯುತ್ತದೆ. ಸಾಲ ಪಡೆಯುವುದನ್ನು ಶೇ. 3.5ಕ್ಕೆ ಮಿತಿಗೊಳಿಸಿ. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ. ಅಧಿಕಾರಿಗಳ ಸವಲತ್ತುಗಳನ್ನು ಕಡಿಮೆ ಮಾಡಿ, ಸಂಬಳ ಸಾರಿಗೆಗಳನ್ನು ಕಡಿತಗೊಳಿಸಿ ಎಂದು ಹೇಳಿ, ಸಾಲ ಮಾಡುವ ಸರ್ಕಾರದ ತೀರ್ಮಾನಕ್ಕೆ ತಮ್ಮ ವಿರೋಧವಿದೆ. ಅದನ್ನು ಪ್ರತಿಭಟಿಸಿ ಸಭಾತ್ಯಾಗ ಮಾಡುತ್ತಿದ್ದೇವೆ ಎಂದು ಸದನದಿಂದ ಹೊರ ನಡೆದರು.