ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಹೇಳಿಕೆ ಬೆಂಗಳೂರು:ವಾಯು ಮಾಲಿನ್ಯ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಹಸಿರು ಪಟಾಕಿಗಳನ್ನು ಹೊರತುಪಡಿಸಿ ಬೇರೆ ಪಟಾಕಿಗಳಿಗೆ ಸುಪ್ರೀಂ ಕೋರ್ಟ್ ನಿಷೇಧ ವಿಧಿಸಿ ಆದೇಶಿಸಿದೆ. ಇದರ ಬೆನ್ನಲ್ಲೇ ದೀಪಾವಳಿ ಹಬ್ಬ ಸಹ ಸಮೀಪಿಸುತ್ತಿದ್ದು, ಕಾಳಸಂತೆಯಲ್ಲಿ ಪಟಾಕಿ ಮಳಿಗೆ, ಗೋದಾಮಗಳು ತಲೆ ಎತ್ತದಂತೆ ನಗರ ಪೊಲೀಸ್ ಇಲಾಖೆ ಹಾಗೂ ಬಿಬಿಎಂಪಿ ಕಟ್ಟೆಚ್ಚರ ವಹಿಸಿವೆ. ಪಟಾಕಿ ಮಾರಾಟಕ್ಕಾಗಿ ನಿರ್ದಿಷ್ಟ ಜಾಗಗಳನ್ನು ಗುರುತು ಮಾಡಲಾಗಿದ್ದು, ಕಟ್ಟುನಿಟ್ಟಿನ ನಿಯಮ ವಿಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದರು.
ಸೇವಾಸಿಂಧು ಪೋರ್ಟಲ್ ಮೂಲಕ ಅವಕಾಶ:ನಗರದಲ್ಲಿ ಪಟಾಕಿಗಳ ಮಾರಾಟಕ್ಕೆ ತಾತ್ಕಾಲಿಕ ಮಳಿಗೆಗಳಿಗೆ ಪೊಲೀಸ್ ಇಲಾಖೆ ಮಾತ್ರವೇ ಅಧಿಕೃತ ಪರವಾನಗಿ ನೀಡಬಹುದಾಗಿದ್ದು, ಮಳಿಗೆಗಳನ್ನು ತೆರೆಯಲು 5 ಸಾವಿರ ರೂ ಡೆಪಾಸಿಟ್ ಇರಿಸಿ, ಅಪ್ಲಿಕೇಶನ್ ಸಲ್ಲಿಸಲು ಸೇವಾಸಿಂಧು ಪೋರ್ಟಲ್ ಮೂಲಕ ಅವಕಾಶ ಕಲ್ಪಿಸಲಾಗಿತ್ತು. ಅಲ್ಲದೆ ಬಿಬಿಎಂಪಿಯಿಂದ ನಗರದಾದ್ಯಂತ ತಾತ್ಕಾಲಿಕವಾಗಿ ಪಟಾಕಿ ಮಳಿಗೆಗಳಿಗೆ ಅವಕಾಶ ನೀಡಬಹುದಾದ ಸರ್ಕಾರಿ ಮೈದಾನಗಳ ಪಟ್ಟಿ ಪಡೆದುಕೊಂಡು ಅಗ್ನಿಶಾಮಕ ಇಲಾಖೆಯಿಂದ ಕ್ಲಿಯರೆನ್ಸ್ ಪಡೆಯಲಾಗಿದೆ.
320 ಮಳಿಗೆ ತೆರೆಯಲು ಅವಕಾಶ: 62 ಮೈದಾನಗಳಲ್ಲಿ ತಾತ್ಕಾಲಿಕ ಮಳಿಗೆ ತೆರೆಯಲು ಅವಕಾಶ ನೀಡಲು ನಿರ್ಧರಿಸಲಾಗಿದ್ದು, 912 ಅಪ್ಲಿಕೇಶನ್‌ಗಳು ಬಂದಿವೆ. ಆ ಪೈಕಿ 320 ಮಳಿಗೆಗಳನ್ನು ತೆರೆಯಲು ಅವಕಾಶವಿದ್ದು, ಸದ್ಯ 263 ಅಪ್ಲಿಕೇಷನ್‌ಗಳಿಗೆ ಅನುಮತಿ ನೀಡಲಾಗಿದೆ. ಕಳೆದ ವರ್ಷ 65 ಮೈದಾನಗಳಲ್ಲಿ 438 ಮಳಿಗೆಗಳನ್ನು ತೆರೆಯಲು ಅವಕಾಶವಿತ್ತು. ಸ್ವೀಕರಿಸಿದ್ದ 517 ಅಪ್ಲಿಕೇಶನ್‌ಗಳ ಪೈಕಿ 244 ಅಪ್ಲಿಕೇಶನ್‌ಗಳಿಗೆ ಅನುಮತಿ ನೀಡಲಾಗಿತ್ತು ಎಂದು ಪೊಲೀಸ್ ಆಯುಕ್ತರು ಹೇಳಿದರು.
ಮೇಲ್ವಿಚಾರಣೆಗೆ ವಿಶೇಷ ತಂಡ: ಅತ್ತಿಬೆಲೆಯ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ್ದ ಅಗ್ನಿ ದುರಂತದ ಬಳಿಕ ಮತ್ತಷ್ಟು ಎಚ್ಚೆತ್ತಿರುವ ಪೊಲೀಸ್ ಇಲಾಖೆ ಈ ಬಾರಿ ಅನಧಿಕೃತ ಪಟಾಕಿ ಮಳಿಗೆಗಳು, ಗೋದಾಮುಗಳ ವಿರುದ್ಧ ಕಾರ್ಯಾಚರಣೆ ಕೈಗೊಳ್ಳಲು ಎಸಿಪಿ ದರ್ಜೆಯ ಅಧಿಕಾರಿ ನೇತೃತ್ವದ ವಿಶೇಷ ತಂಡಗಳನ್ನು ರಚಿಸಲಾಗಿದೆ. ತಂಡದಲ್ಲಿ ಅಗ್ನಿಶಾಮಕ ದಳ, ಬಿಬಿಎಂಪಿ, ವಿದ್ಯುತ್ ಇಲಾಖೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರತಿನಿಧಿಗಳು ಇರಲಿದ್ದು, ಅನುಮತಿ ಪಡೆಯಲಾದ ಮಳಿಗೆಗಳಲ್ಲಿ ನಿಯಮಗಳ ಪಾಲನೆಯಾಗುತ್ತಿದೆಯಾ? ಎಂಬುದರ ಕುರಿತು ಹಾಗೂ ಅನಧಿಕೃತ ಪಟಾಕಿ ಮಳಿಗೆಗಳ ಕುರಿತು ಪರಿಶೀಲನೆ ಕಾರ್ಯ ನಡೆಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.
ಇದನ್ನೂ ಓದಿ:ಸುರಕ್ಷತಾ ಕ್ರಮ ಅನುಸರಿಸದೆ ಪಟಾಕಿ ಮಳಿಗೆಗೆ ಅನುಮತಿ: ಹೈಕೋರ್ಟ್ ಅಸಮಾಧಾನ