ಬೆಂಗಳೂರು: ಜೆಜೆ ನಗರದ ಹೆರಿಗೆ ಆಸ್ಪತ್ರೆಯಲ್ಲಿ 30 ಹಾಸಿಗೆ ಸಾಮರ್ಥ್ಯವಿದೆ. 30 ಹಾಸಿಗೆಗಳಿಗೂ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ. ಆಕ್ಸಿಜನ್ ಸೌಲಭ್ಯ ಬೇಕಿರುವ ಸೋಂಕಿತರಿಗೆ ಆರೈಕೆ ಮಾಡಲಾಗುವುದು ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.
ಆಸ್ಪತ್ರೆ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಪಾಲಿಕೆಯ 12 ಹೆರಿಗೆ ಆಸ್ಪತ್ರೆಗಳನ್ನು ಸ್ಥಿರೀಕರಣ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ.
ಸದರಿ ಕೇಂದ್ರಗಳಲ್ಲಿ 254 ಹಾಸಿಗೆಗಳ ಸಾಮರ್ಥ್ಯವಿದೆ. ಒಟ್ಟು 254 ಹಾಸಿಗೆಳ ಪೈಕಿ 240 ಹಾಸಿಗೆಗಳನ್ನು ಆಕ್ಸಿಜನ್ ಬೆಡ್‌ಗಳನ್ನಾಗಿ ಪರಿವರ್ತಿಸಲಾಗುತ್ತಿದೆ.
ಎಲ್ಲಾ ಹೆರಿಗೆ ಆಸ್ಪತ್ರೆಗಳಲ್ಲಿ ನುರಿತ ತಜ್ಞರು, ವೈದ್ಯರನ್ನು ನಿಯೋಜನೆ ಮಾಡಲಾಗಿದ್ದು, ಕೋವಿಡ್ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಿ ಕಾಲಕಾಲಕ್ಕೆ ಔಷಧಗಳನ್ನು ನೀಡಲಾಗುವುದು.
ರಾಜ್ಯ ಸರ್ಕಾರದಿಂದ 15 ಲಕ್ಷ ಆಂಟಿಜೆನ್ ಟೆಸ್ಟ್ ಕಿಟ್ಗಳನ್ನು ನೀಡಲಾಗುತ್ತಿದ್ದು, ತ್ವರಿತವಾಗಿ ಟೆಸ್ಟ್ ಮಾಡಿ ಕೋವಿಡ್ ಪತ್ತೆ ಹಚ್ಚಬಹುದಾಗಿದೆ. ಇದರಿಂದ ನಗರದಲ್ಲಿ ಸೋಂಕಿನ ಪ್ರಮಾಣ ಇಳಿಸಬಹುದಾಗಿದೆ ಎಂದರು.