ಬೆಂಗಳೂರು: ಗೋವಿಂದಪುರ ಪೊಲೀಸರು ಕಳೆದ ಮೂರು ವರ್ಷದಿಂದ ತನಿಖೆ ಮಾಡುತ್ತಿದ್ದ ಎಟಿಎಂ ಕಳ್ಳತನ ಕೇಸ್ ಬಗ್ಗೆ ಈಗ ಸುಳಿವು ಸಿಕ್ಕಿದೆ. ಕಳ್ಳತನ ಪ್ರಕರಣ ಬೆನ್ನು ಹತ್ತಿ ಹೋದ ಪೊಲೀಸರಿಗೆ ತನಿಖೆ ವೇಳೆ ಕೊಲೆ ಪ್ರಕರಣ ಕೂಡ ಬಯಲಿಗೆ ಬಂದಿದೆ.
ಮಂಡ್ಯ ಮೂಲದ ಪ್ರಸನ್ನ, ಕುಮಾರ, ಮಧು, ಮಹೇಶ್ ಎಂಬುವರು ಹಣ ದೋಚಿದ ಆರೋಪಿಗಳು. ಇವರಿಗೆ ಅಬ್ದುಲ್ ಸಹಾಯ ಮಾಡಿದ್ದ. ಇವರು 2018 ರಲ್ಲಿ ಕೆಜಿ ಹಳ್ಳಿ ಬಳಿಯ ಐಸಿಐಸಿಐ ಬ್ಯಾಂಕ್ ಎಟಿಎಂಗೆ ಸಿಬ್ಬಂದಿ ಹಣ ತುಂಬಲು ಬಂದಿದ್ದ ವೇಳೆ ತಮ್ಮ ಕೈಚಳಕ ತೋರಿಸಿದ್ದರು. ಹಣ ತುಂಬಲು ಗನ್ ಮ್ಯಾನ್ ಹಾಗೂ ಕಸ್ಟೋಡಿಯನ್ ಎಟಿಎಂ ಒಳಗೆ ಹೋಗಿದ್ದರು. ಈ ವೇಳೆ ಡ್ರೈವರ್ ಅಬ್ದುಲ್ ಶಾಹಿದ್ನನ್ನು ಪುಸಲಾಯಿಸಿ ತಮ್ಮ ಕಾರಿನ ಒಳಗೆ ಕೂರಿಸಿಕೊಂಡಿದ್ದರು. ವಾಹನದಲ್ಲಿದ್ದ ಹಣ ದೋಚಿ, ಅದ್ರಲ್ಲಿ ಅಬ್ದುಲ್‌ಗೂ ಶೇರ್ ಕೊಡುವುದಾಗಿ ನಂಬಿಸಿದ್ರು.
ಮಾಧ್ಯಮಗಳೊಂದಿಗೆ ಮಾತನಾಡಿದ ಪೂರ್ವ ವಿಭಾದ ಡಿಸಿಪಿ ಶರಣಪ್ಪ ಎಟಿಎಂಗೆ ಹಾಕಬೇಕಿದ್ದ 75 ಲಕ್ಷ ರೂ. ಹಣವನ್ನು ಎರಡು ಬಾಕ್ಸ್ ಸಮೇತ ದೋಚಿದ್ದರು. ಹಣ ದೋಚಿದ ಬಳಿಕ ಕುಣಿಗಲ್ನಲ್ಲಿ ಐವರು ಸೇರಿ ಬಾಕ್ಸ್ ಒಡೆದು ಹಣ ಹಂಚಿಕೊಂಡು,ಕೆಆರ್ ಪೇಟೆಯ ಮನೆಯೊಂದರಲ್ಲಿ ಹಣ ಇಟ್ಟು ಮಂಗಳೂರು ಕಡೆ ಐವರು ಹೊರಟಿದ್ದರು. ಈ ವೇಳೆ ದಾರಿ ಮಧ್ಯೆ ತಾನು ವಾಪಸ್ಸು ಹೋಗುತ್ತೇನೆ ಹಣ ಬೇಡ ಎಂದು ಅಬ್ದುಲ್ ಶಾಹಿದ್ ಹೇಳಿದ್ದ. ಈ ವಿಚಾರಕ್ಕೆ ಐವರ ನಡುವೆ ಗಲಾಟೆ ನಡೆದಿತ್ತು.
ಹಣ ಬೇಡ ನನ್ನನ್ನು ಬಿಟ್ಟುಬಿಡಿ ಎಂದ ಶಾಹಿದ್ನನ್ನು ನಾಲ್ವರು ಸೇರಿ ಕೊಲೆ ಮಾಡಿ, ಸಕಲೇಶಪುರ ಬಳಿಯ ಅರಣ್ಯ ಪ್ರದೇಶದಲ್ಲಿ ಹೆಣ ಬಿಸಾಕಿ ಎಸ್ಕೇಪ್ ಆಗಿದ್ದರು. ಬಳಿಕ ವಾಪಸ್ಸು ಕೆಆರ್ ಪೇಟೆಗೆ ಬಂದು ಅಡಗಿಸಿ ಇಟ್ಟಿದ್ದ ಹಣ ತೆಗೆದುಕೊಂಡು ಆರೋಪಿಗಳು ಬೇರೆ ಬೇರೆಯಾಗಿದ್ದರು.
ಕೊಲೆ ನಡೆದ 15 ದಿನಗಳ ಬಳಿಕ ಸಕಲೇಶಪುರ ರೂರಲ್ ಪೊಲೀಸರಿಗೆ ಶಾಹಿದ್ ಶವ ಸಿಕ್ಕಿತ್ತು. ಆದರೆ ಮೃತನ ಗುರುತು ಪತ್ತೆಯಾಗಿರಲಿಲ್ಲ. ಹೀಗಾಗಿ ಕಳೆದ ಮೂರು ವರ್ಷಗಳಿಂದ ಈ ಕೇಸ್ ಹಾಗೆ ಉಳಿದಿತ್ತು. ಕೆಜಿ ಹಳ್ಳಿಯಲ್ಲಿ ದಾಖಲಾಗಿದ್ದ ಕೇಸ್ ಗೋವಿಂದಪುರ ಠಾಣೆಗೆ ವರ್ಗಾವಣೆ ಆಗಿತ್ತು.
ಇತ್ತ ಕೇಸ್ ಕೈಗೆತ್ತುಕೊಂಡಿದ್ದ ಇನ್ಸ್ಪೆಕ್ಟರ್ ಪ್ರಕಾಶ್ ತನಿಖೆ ಮತ್ತೊಮ್ಮೆ ನಡೆಸಿದ್ದರು. ಪೊಲೀಸರು ಎಟಿಎಂ ಬಳಿ ಸಿಕ್ಕ ಒಂದು ಸಿಸಿಟಿವಿ ದೃಶ್ಯದ ಬೆನ್ನು ಹತ್ತಿದ ಪೊಲೀಸರು, ತನಿಖೆಯಲ್ಲಿ ಮೊದಲಿಗೆ ಮಂಡ್ಯದಲ್ಲಿ ಪ್ರಸನ್ನ ಎಂಬಾತನನ್ನು ವಶಕ್ಕೆ ಪಡೆದಿದ್ದರು. ಈತನ ವಿಚಾರಣೆ ನಡೆಸಿದಾಗ ಕಳ್ಳತನ ಜೊತೆಗೆ ಕೊಲೆ ಮಾಡಿದ್ದು ಕೂಡ ಬಾಯಿ ಬಿಟ್ಟಿದ್ದ. ಆರೋಪಿ ಪ್ರಸನ್ನ ಹೇಳಿಕೆಯನ್ನ ಆಧರಿಸಿ ಇನ್ನುಳಿದ ಮೂವರು ಆರೋಪಿಗಳನ್ನ ಗೋವಿಂದಪುರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇನ್ನು ಅರೋಪಿಗಳಿಂದ ಹಣ ಮತ್ತು ಚಿನ್ನ ವಶಕ್ಕೆ ಪಡೆದುಕೊಂಡಿದ್ದಾರೆ.