ಬೆಂಗಳೂರು:ರಾಜ್ಯ ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗಕ್ಕೆ ಮೂರು ಪ್ರತ್ಯೇಕ ದೂರುಗಳನ್ನು ಸಲ್ಲಿಕೆ ಮಾಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರು ಹಾಗೂ ರಾಜರಾಜೇಶ್ವರಿನಗರ ಮತ್ತು ಶಿರಾ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಪ್ರತ್ಯೇಕ ದೂರುಗಳನ್ನು ನೀಡಲಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹಾಗೂ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಅವರನ್ನು ಒಳಗೊಂಡ ನಿಯೋಗವು ಇಂದು ಶೇಷಾದ್ರಿ ರಸ್ತೆಯಲ್ಲಿರುವ ರಾಜ್ಯ ಚುನಾವಣಾ ಆಯೋಗದ ಕಚೇರಿಗೆ ತೆರಳಿ ಚುನಾವಣಾ ಆಯುಕ್ತರಿಗೆ ದೂರು ಸಲ್ಲಿಕೆ ಮಾಡಿದೆ.
ದೂರು ಸಲ್ಲಿಕೆ ನಂತರ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಪ್ರತ್ಯೇಕ ಮೂರು ದೂರುಗಳನ್ನು ಚುನಾವಣಾ ಆಯುಕ್ತರಿಗೆ ನೀಡಿದ್ದೇವೆ. ಶಿರಾದಲ್ಲಿ ಪ್ರಚಾರ ನಡೆಸಿದ ಸಂದರ್ಭ ಸಿಎಂ ಬಿ.ಎಸ್. ಯಡಿಯೂರಪ್ಪ ನಿನ್ನೆ ನೀಡಿದ ಆಮಿಷ ರೂಪದ ಹೇಳಿಕೆ ವಿರುದ್ಧ ದೂರು ಸಲ್ಲಿಸಿದ್ದೇವೆ. ಮತ್ತೊಂದು ದೂರು ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ನಾಯ್ಡು ಅಭ್ಯರ್ಥಿಗಳಿಗೆ ಹಣ ಹಂಚುವ ಗುರುತಿಗಾಗಿ ಮನೆಗಳಿಗೆ ಸ್ಟಿಕ್ಕರ್ ನೀಡುತ್ತಿರುವ ಕುರಿತು ದೂರು ಸಲ್ಲಿಸಿದ್ದೇವೆ.
ಸಚಿವರಾದ ಅಶೋಕ್, ಎಸ್ ಟಿ ಸೋಮಶೇಖರ್ ಗೋಪಾಲಯ್ಯ ಹಾಗೂ ನಾರಾಯಣಗೌಡ ಅವರು ನೀಡಿರುವ ವಿವಾದಾತ್ಮಕ ಹೇಳಿಕೆ ವಿರುದ್ಧ ದೂರು ನೀಡಿದ್ದೇವೆ. ಆಯುಕ್ತರಿಂದ ಬಗ್ಗೆ ತನಿಖೆ ನಡೆಸುವ ಭರವಸೆ ಸಿಕ್ಕಿದೆ ಎಂದರು.
ದೂರಿನ ಕುರಿತು ವಿವರಣೆ ನೀಡಿದ ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ವಿ.ಎಸ್ ಉಗ್ರಪ್ಪ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಸದಾನಂದಗೌಡ, ಡಿಸಿಎಂ ಗೋವಿಂದ ಕಾರಜೋಳ ಹಾಗೂ ಸಚಿವ ನಾರಾಯಣಗೌಡ ವಿರುದ್ಧ ಹಾಗೂ ಸಂಸದರಾದ ನಾರಾಯಣಸ್ವಾಮಿ, ಪ್ರತಾಪ್ ಸಿಂಹ ಹಾಗೂ ಬಿಜೆಪಿ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ, ಅಭ್ಯರ್ಥಿಯಾಗಿರುವ ರಾಜೇಶ್ ಗೌಡ ಇನ್ನಿತರರ ವಿರುದ್ಧ ದೂರು ದಾಖಲಿಸಿದ್ದೇವೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಿರಾ ವಿಧಾನಸಭಾ ಕ್ಷೇತ್ರದ ಮದಲೂರು ಎಂಬ ಗ್ರಾಮದಲ್ಲಿ ಭಾಷಣ ಮಾಡುತ್ತಿದ್ದ ಸಂದರ್ಭ ನನ್ನನ್ನು ನಂಬಿ ಅಭ್ಯರ್ಥಿಯನ್ನು ಗೆಲ್ಲಿಸಿ ಕೊಡಿ. ಮುಂದಿನ ಆರು ತಿಂಗಳಲ್ಲಿ ಮದಲೂರು ಕೆರೆಗೆ ಹೇಮಾವತಿ ನದಿ ನೀರನ್ನು ಹರಿಸುವ ಭರವಸೆ ನೀಡುತ್ತೇನೆ. ಮದಲೂರು ಕೆರೆ ಸೇರಿದಂತೆ 60 ಕೆರೆಗಳ ನೀರು ತುಂಬಿಸುವ ಆಶ್ವಾಸನೆಯನ್ನು ನೀಡಿದ್ದಾರೆ.
ಇದಲ್ಲದೆ ಮೊದಲು ಊರಿನಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ವಸತಿ ಸ್ಕೀಂ ಗಳ ಅಡಿ ಮನೆ ಕೇಳುತ್ತಿರುವ ಫಲಾನುಭವಿಗಳಿಗೆ 5 ಲಕ್ಷ ರೂ. ನೀಡುವ ಭರವಸೆ ಕೊಟ್ಟಿದ್ದಾರೆ. ಒಕ್ಕಲಿಗ ಸಮುದಾಯದ ಭಾಗವಾಗಿರುವ ಕುಂಚಿಟಿಗ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸಿ 2ಬಿ ನೋಡಿ ನಿಮಗೆ ಮೀಸಲಾತಿ ಸೌಲಭ್ಯ ಕಲ್ಪಿಸುತ್ತೇವೆ ಎಂಬ ಆಶ್ವಾಸನೆ ನೀಡಿದ್ದಾರೆ.