ಬೆಂಗಳೂರು: ಶಿವಾನಂದ ಸರ್ಕಲ್ ಮೇಲ್ಸೇತುವೆ ಕಾಮಗಾರಿಯನ್ನು ಇಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ, ಅಧಿಕಾರಿಗಳ ಜೊತೆ ಪರಿಶೀಲನೆ ನಡೆಸಿದರು.
ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಮೇಲ್ಸೇತುವೆ ಕಾಮಗಾರಿಗೆ ಈಗ ಚುರುಕು ನೀಡಲಾಗಿದೆ. ಜಲಮಂಡಳಿ ಕಾಮಗಾರಿಯೂ ನಡೆಯುತ್ತಿದ್ದು, 3 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಆಡಳಿತಾಧಿಕಾರಿ ಗೌರವ್ ಗುಪ್ತಾ ತಿಳಿಸಿದ್ದಾರೆ.
ಶಿವಾನಂದ ಸರ್ಕಲ್ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ಮಾಡಿದ ಬಿಬಿಎಂಪಿ ಆಡಳಿತಾಧಿಕಾರಿ.. ಶಿವಾನಂದ ವೃತ್ತದ ಬಳಿ 493 ಮೀಟರ್ ಉದ್ದದ ಮೇಲುಸೇತುವೆಯನ್ನು ಕೈಗೆತ್ತಿಕೊಂಡಿದ್ದು, ಅದಕ್ಕೆ 16 ಪಿಲ್ಲರ್ಗಳು ಬರಲಿವೆ. ಅದರಲ್ಲಿ ಈಗಾಗಲೇ 9 ಪಿಲ್ಲರ್‌ಗಳ ಕಾಮಗಾರಿ ಪೂರ್ಣಗೊಂಡಿದ್ದು, 6 ಪಿಲ್ಲರ್‌ಗಳ ಕಾಮಗಾರಿ ಪ್ರಗತಿಯಲ್ಲಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗ ಜಲಮಂಡಳಿಯಿಂದ 450 ಎಂ.ಎಂನ ನೀರಿನ ಪೈಪ್ ಲೈನ್ನ್ನು ಈಗಾಗಲೇ ಬೇರೆಡೆ ಸ್ಥಳಾಂತರಿಸಿದ್ದು, ಅದರಡಿ 700 ಎಂ.ಎಂನ ನೀರಿನ ಪೈಪ್ ಲೈನ್ ಇರುವುದರಿಂದ ಒಂದು ಪಿಲ್ಲರ್ ಕಾಮಗಾರಿ ಬಾಕಿಯಿದೆ. ಈ ಪೈಕಿ 7 ದಿನಗಳ ಕಾಲ ಸಂಚಾರಿ ಪೊಲೀಸ್ ಇಲಾಖೆಯಿಂದ ಮಾರ್ಗ ಬದಲಾವಣೆಗೆ ಅನುಮತಿ ಪಡೆದು ತ್ವರಿತವಾಗಿ ನೀರಿನ ಪೈಪ್ ಲೈನ್ ಬೇರೆಡೆ ಸ್ಥಳಾಂತರಿಸಿ ಪಿಲ್ಲರ್ ಕಾಮಗಾರಿ ಪೂರ್ಣಗೊಳಿಸುವಂತೆ ಗೌರವ್ ಗುಪ್ತಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಿವಾನಂದ ರೈಲ್ವೆ ಹಳಿ ಬಳಿ ಸುಮಾರು 579 ಚದರ ಮೀಟರ್ ರಸ್ತೆ ವಿಸ್ತರಣೆ ಪ್ರಕ್ರಿಯೆ ಇದ್ದು, 7 ಆಸ್ತಿಗಳು ಬರಲಿವೆ. ಈ ಸಂಬಂಧ ಆಸ್ತಿ ಮಾಲೀಕರಿಗೆ ಟಿಡಿಆರ್ ನೀಡಿ ಕೂಡಲೇ ರಸ್ತೆ ವಿಸ್ತರಣೆ ಮಾಡುವಂತೆ ಸೂಚನೆ ನೀಡಿದರು. ಇನ್ನು ಮೇಲ್ಸೇತುವೆ ಕಾಮಗಾರಿ ಮಾರ್ಗದಲ್ಲಿ ಬರುವ ಕೆಲ ಮರಗಳನ್ನು ಬೇರೆಡೆ ಸ್ಥಳಾಂತರ ಮಾಡಬೇಕಿದ್ದು, ಈ ಪೈಕಿ ಈಗಾಗಲೇ ಟ್ರೀ ಕಮಿಟಿ ಜೊತೆ ಮರಗಳನ್ನು ಸ್ಥಳಾಂತರಿಸುವ ಬಗ್ಗೆ ಸಭೆ ನಡೆಸಿ ಅನುಮತಿ ಪಡೆಯಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಆಡಳಿತಾಧಿಕಾರಿ ಕೂಡಲೇ ಮರ ಸ್ಥಳಾಂತರ ಮಾಡುವ ಕೆಲಸ ಕೈಗೊಳ್ಳುವಂತೆ ಅರಣ್ಯ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಿವಾನಂದ ವೃತ್ತದ ಮೇಲ್ಸೇತುವೆ ಕಾಮಗಾರಿಯನ್ನು 3 ತಿಂಗಳಲ್ಲಿ ಪೂರ್ಣಗೊಳಿಸಿ ಸಾರ್ವಜನಿಕ ಓಡಾಟಕ್ಕೆ ಅನುವು ಮಾಡಿಕೊಡಬೇಕು. ಜೊತೆಗೆ ಶಿವಾನಂದ ವೃತ್ತದ ಬಳಿಯ ರೈಲ್ವೆ ಹಳಿ ಬಳಿ ಸುಗಮ ವಾಹನ ಸಂಚಾರಕ್ಕೆ ಹೆಚ್ಚುವರಿ ಬಾಕ್ಸ್ ಅಳವಡಿಸಲು ರೈಲ್ವೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಕ್ರಮಕೈಗೊಳ್ಳುವಂತೆ ಗೌರವ್ ಗುಪ್ತಾ ಸೂಚನೆ ನೀಡಿದರು.