ಬೆಂಗಳೂರು : ಇಂದು ನಡೆದ ರಾಷ್ಟ್ರೀಯ ಮೆಗಾ ಲೋಕ್ ಅದಾಲತ್ನಲ್ಲಿ ಮೂರೂವರೆ ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ತಿಳಿಸಿದರು.
ಸಂಜೆ ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಈ ಕುರಿತಂತೆ ಮಾಹಿತಿ ಹಂಚಿಕೊಂಡ ಅವರು, ಮಾರ್ಚ್ 12ರಂದು ನಡೆಸಿದ ರಾಷ್ಟ್ರೀಯ ಲೋಕ್ ಅದಾಲತ್ನಲ್ಲಿ 3,52,588 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದೇವೆ. ಇವುಗಳಲ್ಲಿ 3.35 ಲಕ್ಷ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇದ್ದಂತಹವು. ಉಳಿದ 17 ಸಾವಿರ ಪ್ರಕರಣಗಳು ವ್ಯಾಜ್ಯ ಪೂರ್ವ ಪ್ರಕರಣಗಳು ಎಂದು ತಿಳಿಸಿದರು.
ರಾಜ್ಯವ್ಯಾಪಿ ನಡೆದ ಲೋಕ ಅದಾಲತ್ನಲ್ಲಿ ಹೈಕೋರ್ಟ್ ನ 11 ಪೀಠಗಳು ಹಾಗೂ 978 ಜಿಲ್ಲಾ ನ್ಯಾಯಪೀಠಗಳು ಕಾರ್ಯನಿರ್ವಹಿಸಿವೆ. ವಿಡಿಯೋ ಕಾನ್ಫರೆನ್ಸ್ ಮೂಲಕವೂ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇದೇ ಮೊದಲ ಬಾರಿಗೆ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೇರಾ)ಕ್ಕೆ ಸಂಬಂಧಿಸಿದ 183 ಪ್ರಕರಣಗಳನ್ನು ಕೂಡ ಇತ್ಯರ್ಥಪಡಿಸಲಾಗಿದೆ. ಹಾಗೆಯೇ, ಮೊದಲ ಬಾರಿಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಪ್ರಾಧಿಕಾರದ 5,582 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.
ವೈವಾಹಿಕ ಜೀವನ ಪುನಾರಂಭ :ಕಾನೂನು ಸೇವಾ ಪ್ರಾಧಿಕಾರ ಲೋಕ ಅದಾಲತ್ನಲ್ಲಿ ವೈವಾಹಿಕ ಪ್ರಕರಣಗಳನ್ನು ಸಾಧ್ಯವಾದಷ್ಟು ರಾಜಿ ಮೂಲಕ ಇತ್ಯರ್ಥಪಡಿಸಲು ಯೋಜಿಸಲಾಗಿತ್ತು. ಅದರಂತೆ 90ಕ್ಕೂ ಹೆಚ್ಚು ಪ್ರಕರಣಗಳಲ್ಲಿ ದಂಪತಿ ತಮ್ಮ ವೈಮನಸ್ಸು ಬಿಟ್ಟು ಒಂದಾಗಿ ಮತ್ತೆ ಹೊಸ ಜೀವನ ಆರಂಭಿಸಿದ್ದಾರೆ. ಮೈಸೂರಿನಲ್ಲಿ 32 ಹಾಗೂ ಬೆಂಗಳೂರಿನಲ್ಲಿ 29 ದಂಪತಿಗಳು ಮೆಗಾ ಲೋಕ್ ಅದಾಲತ್ನ ರಾಜಿ ಸಂಧಾನದಲ್ಲಿ ಒಂದಾಗಿದ್ದಾರೆ ಎಂದು ಮಾಹಿತಿ ನೀಡಿದರು.