Shakti Scheme: ಮೊದಲ ವಾರ 3 ಕೋಟಿಗೂ ಹೆಚ್ಚು ಮಹಿಳೆಯರಿಂದ ಉಚಿತ ಪ್ರಯಾಣ: ಟಿಕೆಟ್ ಮೌಲ್ಯವೆಷ್ಟು ಗೊತ್ತಾ? - ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳು
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇವೆಯ ಶಕ್ತಿ ಯೋಜನೆ (Free Bus Shakti Scheme) ಅಡಿ ಕಳೆದ ಒಂದು ವಾರದಲ್ಲಿ 3 ಕೋಟಿ 12 ಲಕ್ಷಕ್ಕೂ ಹೆಚ್ಚು ಜನ 70.28 ಕೋಟಿ ರೂ. ಮೌಲ್ಯದ ಟಿಕೆಟ್ನಲ್ಲಿ ಪ್ರಯಾಣಿಸಿದ್ದಾರೆ.
ಶಕ್ತಿ ಯೋಜನೆ
By
Published : Jun 19, 2023, 7:08 AM IST
ಬೆಂಗಳೂರು: ಶಕ್ತಿ ಯೋಜನೆಗೆ ಮಹಿಳೆಯರಿಂದ ಭರ್ಜರಿ ಸ್ಪಂದನೆ ಸಿಗುತ್ತಿದೆ. ವೀಕೆಂಡ್ನಲ್ಲಂತೂ ಸಾರಿಗೆ ಬಸ್ಗಳು ಮಹಿಳಾ ಪ್ರಯಾಣಿಕರಿಂದ ಕಿಕ್ಕಿರಿದು ತುಂಬುತ್ತಿದ್ದು, ಶನಿವಾರ 54,30,150 ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆಯಡಿ ಪ್ರಯಾಣ ಬೆಳೆಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಮಹಿಳೆಯರಿಗಾಗಿ ಬಸ್ ಪ್ರಯಾಣ ಉಚಿತವಾಗಿಸಿರುವ Shakti Schemeಗೆ ಉತ್ತಮ ಸ್ಪಂದನೆ ಸಿಗುತ್ತಿದೆ. ಮಹಿಳಾ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳಗೊಳ್ಳುತ್ತಿದೆ. ವೀಕೆಂಡ್ನಲ್ಲಂತೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪ್ರಯಾಣಿಕರು ಸರ್ಕಾರಿ ಬಸ್ಗಳಲ್ಲಿ ಪುಣ್ಯ ಕ್ಷೇತ್ರಗಳತ್ತ ಪಯಣ ಬೆಳೆಸಿದ್ದಾರೆ.
ಶನಿವಾರ ಬಹುತೇಕ ಎಲ್ಲಾ ಸರ್ಕಾರಿ ಬಸ್ಗಳು ಅದರಲ್ಲೂ ಧರ್ಮಸ್ಥಳ, ಚಾಂಮುಂಡೇಶ್ವರಿ ದೇವಾಲಯ ಸೇರಿ ರಾಜ್ಯದ ಪ್ರಸಿದ್ಧ ದೇವಾಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ. ಶನಿವಾರ ಮಧ್ಯರಾತ್ರಿಯಿಂದ ಮಧ್ಯರಾತ್ರಿವರೆಗೆ ನಾಲ್ಕು ರಸ್ತೆ ಸಾರಿಗೆ ನಿಗಮಗಳಲ್ಲಿ ಸಾಮಾನ್ಯ ಸಾರಿಗೆ ಬಸ್ಗಳಲ್ಲಿ ಬರೋಬ್ಬರಿ 54,30,150 ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದಾರೆ. ಶನಿವಾರ ಮಹಿಳೆಯರು ಉಚಿತವಾಗಿ ಪ್ರಯಾಣಿಸಿರುವ ಒಟ್ಟು ಟಿಕೆಟ್ ಮೌಲ್ಯ 12.88 ಕೋಟಿ ರೂ. ಆಗಿದೆ.
ಯಾವ ನಿಗಮಗಳಲ್ಲಿ ಎಷ್ಟು ಮಹಿಳೆಯರು ಪ್ರಯಾಣ?:ಶನಿವಾರ ಕೆಎಸ್ಆರ್ಟಿಸಿ ಬಸ್ನಲ್ಲಿ 15,47,020, ಬಿಎಂಟಿಸಿಯಲ್ಲಿ 18,09,833, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ನಲ್ಲಿ 13,36,125 ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ಗಳಲ್ಲಿ 7,37,172 ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣ ಬೆಳೆಸಿದ್ದಾರೆ.
ವಾರದಲ್ಲಿ ಶಕ್ತಿ ಪ್ರಯಾಣ ಮೌಲ್ಯ 70.28 ಕೋಟಿ ರೂ:ಜೂನ್ 11 ರಂದು ಆರಂಭಗೊಂಡ ಶಕ್ತಿ ಯೋಜನೆಯಡಿ ಜೂ.17ರ ವರೆಗೆ ಬರೋಬ್ಬರಿ 3,12,21,241 ಮಹಿಳೆಯರು ಪ್ರಯಾಣಿಸಿದ್ದಾರೆ. ಆ ಮೂಲಕ ಬರೋಬ್ಬರಿ 70.28 ಕೋಟಿ ರೂ. ಮೌಲ್ಯದ ಉಚಿತ ಟಿಕೆಟ್ನಲ್ಲಿ ಪ್ರಯಾಣಿಸಿದ್ದಾರೆ.
ಯಾವ ದಿನ ಎಷ್ಟು ಮಹಿಳೆಯರಿಂದ ಉಚಿತ ಪ್ರಯಾಣ ಮತ್ತು ಟಿಕೆಟ್ ಮೌಲ್ಯದ ಮಾಹಿತಿ:ಶಕ್ತಿ ಯೋಜನೆಯ ಮೊದಲ ದಿನ ಜೂನ್ 11ರಂದು 5,71,023 ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದರು. ಅಂದಿನ ಉಚಿತ ಟಿಕೆಟ್ ಪ್ರಯಾಣ ಮೌಲ್ಯ 1.40 ಕೋಟಿ ರೂ. ಆಗಿತ್ತು. ಜೂನ್ 12ರಂದು 41,34,726 ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದು, ಉಚಿತ ಪ್ರಯಾಣದ ಮೌಲ್ಯ 8.83 ಕೋಟಿ ರೂ. ಆಗಿತ್ತು. ಜೂನ್ 13ರಂದು 51,52,769 ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದು, ಮೌಲ್ಯ 10.82 ಕೋಟಿ ರೂ., ಜೂನ್ 14ರಂದು 50,17,174 ಮಹಿಳಾ ಪ್ರಯಾಣಿಕರು 11.51 ಕೋಟಿ ರೂ. ಮೌಲ್ಯದಷ್ಟು ಉಚಿತ ಟಿಕೆಟ್ನಲ್ಲಿ ಪ್ರಯಾಣಿಸಿದ್ದಾರೆ. ಜೂನ್ 15ರಂದು 54,05,629 ಮಹಿಳಾ ಪ್ರಯಾಣಿಕರ ಪ್ರಯಾಣ ಮೌಲ್ಯ 12.37 ಕೋಟಿ ರೂ., ಜೂ. 16ರಂದು 55,09,770 ಮಹಿಳಾ ಪ್ರಯಾಣಿಕರು ಪಯಣಿಸಿದ್ದು, ಪ್ರಯಾಣ ಮೌಲ್ಯ 12.45 ಕೋಟಿ ರೂ., ಜೂನ್ 17ರಂದು 54,30,150 ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣ ಮಾಡಿದ್ದು, ಪ್ರಯಾಣ ಮೌಲ್ಯ 12.88 ಕೋಟಿ ರೂ. ಆಗಿದೆ.