ಬೆಂಗಳೂರು:ಎಫ್ಕೆಸಿಸಿಐ ಬರುವ ಏಪ್ರಿಲ್ ತಿಂಗಳಲ್ಲಿ ನಡೆಸುವ ಕೃಷಿ ಹಾಗೂ ಆಹಾರ ಪ್ರದರ್ಶನ ಮೇಳಕ್ಕೆ ರಾಜ್ಯ ಸರ್ಕಾರದಿಂದ 3 ಕೋಟಿ ರೂ. ನೀಡುವುದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.
ನಗರದ ಎಫ್ಕೆಸಿಸಿಐ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಉದ್ಯಮಿಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಉದ್ಯಮಕ್ಕೆ ರಾಜ್ಯ ಸರ್ಕಾರ ಸಾಕಷ್ಟು ಅನುಕೂಲ ಕಲ್ಪಿಸಿದೆ. ನಮ್ಮದು ಕೈಗಾರಿಕಾ ಸ್ನೇಹಿ ಸರ್ಕಾರ. ನಿಮ್ಮ ಸಲಹೆ ನಮ್ಮ ಪಾಲಿಸಿ ಜಾರಿಗೆ ತರುವಾಗ ಬಳಸಿಕೊಳ್ಳುತ್ತೇವೆ. ಮಹಿಳಾ ಉದ್ಯಮಕ್ಕೆ ಅಗತ್ಯ ಅನುಕೂಲ ಕಲ್ಪಿಸಲು ಸಿದ್ಧ ಎಂದರು.
ಶೇ. 14ರಷ್ಟು ಮಹಿಳಾ ಸಂಸ್ಥೆ
ಎಫ್ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ದನ ಮಾತನಾಡಿ, ಮಹಿಳೆಯರೇ ನಡೆಸುತ್ತಿರುವ ಉದ್ಯಮಗಳಲ್ಲಿ ಟಾಪ್ 50 ನಗರಗಳಲ್ಲಿ ಬೆಂಗಳೂರು 40ನೇ ಸ್ಥಾನ ಪಡೆದಿದೆ. 14ರಷ್ಟು ವ್ಯಾಪಾರ ಸಂಸ್ಥೆಗಳು ಮಹಿಳೆಯರಿಂದ ನಡೆಸಲ್ಪಡುತ್ತಿವೆ. ಪ್ರತ್ಯೇಕ ಸೆಲ್ ಸ್ಥಾಪಿಸಿ, ಪ್ರತ್ಯೇಕ ಟೆಕ್ ಪಾರ್ಕ್ ಅಗತ್ಯವಿದೆ. ಸಂಸ್ಥೆ 350 ಉದ್ಯಮ ಸಮಾವೇಶ ಮಾಡಿದ್ದು, ಸಾವಿರಾರು ಕೋಟಿ ಸರ್ಕಾರಕ್ಕೆ ಅನುದಾನ ಬರುವಂತೆ ಮಾಡಿದ್ದೇವೆ ಎಂದರು.
ಕೃಷಿ ಪ್ರದರ್ಶನ
ಏ. 22ರಿಂದ 26ರವರೆಗೆ ಕೃಷಿ ಪ್ರದರ್ಶನ ಹಮ್ಮಿಕೊಂಡಿದ್ದೇವೆ. 30 ದೇಶಗಳ ಪ್ರತಿನಿಧಿಗಳು ಬರಲು ಒಪ್ಪಿದ್ದಾರೆ. ಹಲವು ದೇಶದಲ್ಲಿ ರೋಡ್ ಶೋ ಮಾಡಲಿದ್ದೇವೆ. ಪ್ರದರ್ಶನ ಮೂಲಕ 1000 ಮಂದಿ ಕೃಷಿ ಆಂತ್ರುಪ್ರಿನರ್ಗಳನ್ನು ಸಿದ್ಧಪಡಿಸುತ್ತೇವೆ. ಕೃಷಿಗೆ ಉತ್ತೇಜನ ನೀಡಲು ಪ್ರಧಾನಿ ಹೊತ್ತ ಕನಸು ನನಸು ಮಾಡಲು ನಾವು ಮಂದಾಗಿದ್ದೇವೆ. 10 ಕೋಟಿ ರೂ. ವೆಚ್ಚವಾಗಲಿದೆ. ಇದರಲ್ಲಿ ಸರ್ಕಾರದಿಂದ 5 ಕೋಟಿ ರೂ. ಅನುದಾನ ನೀಡಬೇಕೆಂದು ಮನವಿ ಮಾಡಿದರು.ಸಮಾರಂಭದಲ್ಲಿ ಸಿಎಂ ಯಡಿಯೂರಪ್ಪ ಅವರು ಎಫ್ಕೆಸಿಸಿಐ ಸಿದ್ಧಪಡಿಸಿದ ಕೈಗಾರಿಕಾ ನೀತಿ ವರದಿಯನ್ನು ಬಿಡುಗಡೆ ಮಾಡಿದರು.