ಬೆಂಗಳೂರು: ಕಾಳಸಂತೆಯಲ್ಲಿ ರೆಮ್ಡೆಸಿವಿರ್ ಇಂಜೆಕ್ಷನ್ ಮಾರಾಟ ಆರೋಪ ಪ್ರಕರಣ ಸಂಬಂಧ ಅನಗತ್ಯವಾಗಿ ಠಾಣೆಗೆ ಕರೆಯಿಸಿ ಹಲ್ಲೆ ಮಾಡಿದ ಆರೋಪ ಸಂಬಂಧ ಸಂಜಯ್ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕಾತ್ಯಾಯಿನಿ ಸೇರಿ ಮೂವರನ್ನು ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶಿಸಿದ್ದಾರೆ.
ಖಾಸಗಿ ಆಸ್ಪತ್ರೆ ವೈದ್ಯ ನಾಗರಾಜ್ ಎಂಬುವರನ್ನು ಠಾಣೆಗೆ ಕರೆಯಿಸಿ ವಿಚಾರಣೆ ನೆಪದಲ್ಲಿ ಅನಗತ್ಯವಾಗಿ ಠಾಣೆಯಲ್ಲಿ ಇರಿಸಿ ಲಾಠಿಯಿಂದ ಸಂಜಯನಗರ ಪೊಲೀಸರು ಥಳಿಸಿದ್ದರು. ಈ ವೇಳೆ ಹಣಕ್ಕೆ ಡಿಮ್ಯಾಂಡ್ ಆರೋಪ ಕೇಳಿಬಂದಿತ್ತು. ಇದಕ್ಕೆ ಪುಷ್ಟಿ ಎಂಬಂತೆ ಹಲ್ಲೆ ಮಾಡಿ ಹಣ ಕೇಳಿದ್ದರು ಎಂದು ಆಪಾದಿಸಿದ ವಿಡಿಯೋ, ಹಿರಿಯ ಅಧಿಕಾರಿಗಳ ಗಮನಕ್ಕೂ ಹೋಗಿತ್ತು.
ಆರೋಪ ಕೇಳಿಬಂದ ಬೆನ್ನಲ್ಲೇ ಇನ್ಸ್ಪೆಕ್ಟರ್ ಕಾತ್ಯಾಯಿನಿ ಸೇರಿ ಮೂವರನ್ನು ತಮ್ಮ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ತಾಕೀತು ಮಾಡಿದ್ದರು. ಆರೋಪದ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಎಸಿಪಿ ರೀನಾ ಸುವರ್ಣಗೆ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಸೂಚಿಸಿದ್ದರು.