ಕರ್ನಾಟಕ

karnataka

ETV Bharat / state

ನಕಲಿ ಚಿನ್ನ ಅಡವಿಟ್ಟು ವಂಚಿಸುತ್ತಿದ್ದ ಮೂವರು ಆರೋಪಿಗಳು ಅರೆಸ್ಟ್ - ಗಿರವಿ ಅಂಗಡಿ ಮಾಲೀಕನಿಗೆ ವಂಚನೆ

ವಿಶ್ವಾಸದ ಸೋಗಿನಲ್ಲಿ ಗಿರವಿ ಅಂಗಡಿಗೆ ಹೋಗಿ ನಕಲಿ ಚಿನ್ನ ಅಡವಿಟ್ಟು ಹಂತ-ಹಂತವಾಗಿ ಲಕ್ಷಾಂತರ ರೂಪಾಯಿ ಪಡೆದು ವಂಚನೆ ಮಾಡುತ್ತಿದ್ದ ಗ್ಯಾಂಗ್​ ಅನ್ನು ಪೊಲೀಸರು ಬಂಧಿಸಿದ್ದಾರೆ.

3 are accused for pledging rold gold
ನಕಲಿ ಚಿನ್ನ ಅಡವಿಟ್ಟು ವಂಚಿಸುತಿದ್ದವರ ಬಂಧನ

By

Published : Jun 20, 2020, 11:10 PM IST

ಬೆಂಗಳೂರು:ನಕಲಿ ಚಿನ್ನ ಅಡವಿಟ್ಟು ಮಾಲೀಕನಿಗೆ ವಂಚಿಸಿದ್ದ ಮೂವರು ಆರೋಪಿಗಳನ್ನು ವೈಯಾಲಿಕಾವಲ್ ಪೊಲೀಸರು ಬಂಧಿಸಿದ್ದಾರೆ.

ಶೇಖರ್, ಗಿರೀಶ್ ಹಾಗೂ ಕೃಷ್ಣ ಬಂಧಿತ ವಂಚಕರು. ಕೃತ್ಯದಲ್ಲಿ ಭಾಗಿಯಾಗಿದ್ದ ಮಹಿಳೆ ಸೇರಿದಂತೆ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ನಗರದ ನಿವಾಸಿಗಳಾಗಿದ್ದ ಆರೋಪಿಗಳು ಆಭರಣದಂಗಡಿಯ ಮಾಲೀಕನಿಗೆ ಮೋಸ ಮಾಡುವ ಉದ್ದೇಶದಿಂದಲೇ ನಕಲಿ ಚಿನ್ನ ಅಡವಿಟ್ಟು ಲಕ್ಷಾಂತರ ರೂಪಾಯಿ ದೋಖಾ ಮಾಡಿದ್ದಾರೆ.

ವೈಯಾಲಿಕಾವಲ್ ಠಾಣಾ ವ್ಯಾಪ್ತಿಯಲ್ಲಿರುವ ಭವರ್ ಲಾಲ್ ಪಾನ್ ಬ್ರೋಕರ್ ಅಂಗಡಿ ಮಾಲೀಕ ಪ್ರಕಾಶ್ ಚಾಂದ್ ಹಲವು ವರ್ಷಗಳಿಂದ ಗಿರವಿ ಅಂಗಡಿ ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಗ್ರಾಹಕರಿಂದ ಅಡವಿಡುವ ಚಿನ್ನದ ನೈಜತೆ‌ ಪರಿಶೀಲಿಸಿ ಮಾರುಕಟ್ಟೆ ದರಕ್ಕಿಂತ ಶೇ.50 ರಿಂದ 60ರಷ್ಟು ನಗದು ನೀಡಿ ಚಿನ್ನವನ್ನು ಅಡಮಾನ ಇಟ್ಟುಕೊಳ್ಳುತ್ತಿದ್ದರು. ಅದೇ ರೀತಿ ಗ್ರಾಹಕರ ಸೋಗಿನಲ್ಲಿ ಆರೋಪಿಗಳು ತಮ್ಮ ಬಗ್ಗೆ ವಿಶ್ವಾಸ ಹಾಗೂ ನಂಬಿಕೆ ಬರಲು ಮೊದಲು ಅಸಲಿ ಚಿನ್ನ ಗಿರವಿ ಇಟ್ಟು ಹಣ ಪಡೆದುಕೊಳ್ಳುತ್ತಿದ್ದರು. ಕೆಲ ದಿನಗಳ ಬಳಿಕ ಹಣ ಕಟ್ಟಿ ಆಭರಣ ಬಿಡಿಸಿಕೊಳ್ಳುತ್ತಿದ್ದರು.

ಕಾಲ ಕ್ರಮೇಣ ಆರೋಪಿಗಳ ಸಂಚು ತಿಳಿಯದ ಮಾಲೀಕ ಸಂಪೂರ್ಣವಾಗಿ ನಂಬಿದ್ದ. ಇದನ್ನೇ ದುರ್ಬಳಕೆ‌ ಮಾಡಿಕೊಂಡ ಆರೋಪಿಗಳು ತಮ್ಮ ಅಸಲಿ ಆಟ ಶುರು ಮಾಡಿಕೊಂಡಿದ್ದರು. ವಿಶ್ವಾಸದ ಸೋಗಿನಲ್ಲಿ ಗಿರವಿ ಅಂಗಡಿಗೆ ಹೋಗಿ ನಕಲಿ ಚಿನ್ನ ಅಡವಿಟ್ಟು ಹಂತ-ಹಂತವಾಗಿ ಲಕ್ಷಾಂತರ ರೂಪಾಯಿ ಪಡೆದಿದ್ದಾರೆ. ಇದಾದ ಕೆಲವು ದಿನಗಳ ಬಳಿಕ ಗ್ರಾಹಕರಿಗೆ ಮಾಲೀಕ ಫೋನ್ ಮಾಡಿ ಗಿರವಿ ಇಟ್ಟ ಚಿನ್ನಾಭರಣ ಬಿಡಿಸಿಕೊಳ್ಳುವಂತೆ ತಿಳಿಸಿದ್ದಾರೆ. ಸರಿಯಾಗಿ ಸ್ಪಂದಿಸದಿದ್ದಕ್ಕೆ ಅನುಮಾನಗೊಂಡ ಮಾಲೀಕ ಚಿನ್ನ ಪರಿಶೀಲಿದಾಗ ನಕಲಿ ಎಂಬುವುದು ಗೊತ್ತಾಗಿದೆ.

ಘಟನೆ ಸಂಬಂಧ ಮಾಲೀಕ ಪ್ರಕಾಶ್ ಚಾಂದ್ ನೀಡಿದ್ದ ದೂರಿನ ಮೇರೆಗೆ ಮೂವರು ಆರೋಪಿಗಳನ್ನು ಬಂಧಿಸಿರುವ ವೈಯಾಲಿಕಾವಲ್ ಪೊಲೀಸರು, ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ. ಇದೇ ತರಹ ಬೇರೆ ಬೇರೆ ಆಭರಣದಂಗಡಿ ಮಾಲೀಕರಿಗೆ ಮೋಸ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಸಂಪೂರ್ಣ ತನಿಖೆ ಬಳಿಕವಷ್ಟೇ ಆರೋಪಿಗಳ ಅಸಲಿ‌ ಕಹಾನಿ ಹೊರಬೀಳಲಿದೆ.

ABOUT THE AUTHOR

...view details