ಬೆಂಗಳೂರು: ಜುಲೈ 10 ರಂದು ಸರ್ಕಾರ ಹೊರಡಿಸಿದ ಆದೇಶದಂತೆ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಎರಡನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸಲಾಗುವುದಿಲ್ಲ. ಪರೀಕ್ಷೆ ಬದಲಾಗಿ ಆಂತರಿಕ ಅಂಕಗಳು ಮತ್ತು ಹಿಂದಿನ ಸೆಮಿಸ್ಟರ್ ಅಂಕಗಳ ಸರಾಸರಿಯ ಆಧಾರದಲ್ಲಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಬೆಂಗಳೂರು ಕೇಂದ್ರ ವಿವಿ ತಿಳಿಸಿದೆ.
ಪರೀಕ್ಷೆ ರದ್ದಾಗಿದ್ದರೂ ಸಹ ಪರೀಕ್ಷೆ ಶುಲ್ಕ ಕಟ್ಟುವಂತೆ ವಿವಿ ಆಡಳಿತ ವಿದ್ಯಾರ್ಥಿಗಳಿಗೆ ಸೂಚಿಸಿದೆ. ಎರಡನೇ ಸೆಮಿಸ್ಟರ್ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸುವುದು ಮತ್ತು ಪರೀಕ್ಷಾ ಅರ್ಜಿಗಳನ್ನು ಸಲ್ಲಿಸುವುದು ಕಡ್ಡಾಯವಾಗಿದ್ದು ಆ.15 ರಂದು ಕೊನೆಯ ದಿನಾಂಕ ಎಂದು ಆದೇಶಿಸಿದೆ. ಹೀಗಾಗಿ, ಪರೀಕ್ಷೆ ರದ್ದಾದ ಮೇಲೆ ಶುಲ್ಕವೇಕೆ ಎನ್ನುವ ಪ್ರಶ್ನೆ ಉದ್ಭವಿಸಿದೆ.