ಬೆಂಗಳೂರು : 2A ಮೀಸಲಾತಿ ನೀಡುವಂತೆ ಪಂಚಮಸಾಲಿ ಲಿಂಗಾಯತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಇತ್ತ ಸಿಎಂ ಬೊಮ್ಮಾಯಿ ಸರ್ಕಾರವೂ ಮೀಸಲಾತಿ ಸಂಬಂಧ ಮಹತ್ವದ ಘೋಷಣೆ ಮಾಡುವ ನಿರೀಕ್ಷೆ ಇದೆ. ಆದರೆ, ಪಂಚಮಸಾಲಿ ಲಿಂಗಾಯತರಿಗೆ 2A ಮೀಸಲಾತಿ ನೀಡಲು ಇರುವ ಹತ್ತಾರು ವಿಘ್ನ ಸಿಎಂ ಬೊಮ್ಮಾಯಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಚುನಾವಣಾ ಹೊಸ್ತಿಲಲ್ಲಿರುವ ಸಿಎಂ ಬೊಮ್ಮಾಯಿ ಇದೀಗ ಪಂಚಮಸಾಲಿ ಲಿಂಗಾಯತರಿಗೆ 2A ಮೀಸಲಾತಿ ಕೊಡುವ ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಈಗಾಗಲೇ ಹಿಂದುಳಿದ ವರ್ಗಗಳ ಕಾಯಂ ಆಯೋಗ ಪಂಚಮಸಾಲಿ ಮೀಸಲಾತಿ ಸಂಬಂಧ ಮಧ್ಯಂತರ ವರದಿ ನೀಡಿದೆ. ಪಂಚಮಸಾಲಿ ಸಮುದಾಯಕ್ಕೆ 2Aಗೆ ಸೇರ್ಪಡೆಗೊಳಿಸಿದರೆ ಅದರಡಿ ಈಗಾಗಲೇ ಮೀಸಲಾತಿ ಪಡೆಯುತ್ತಿರುವ 102 ಹಿಂದುಳಿದ ವರ್ಗಗಳಿಗೆ ಸಮಸ್ಯೆ ಎದುರಾಗುವ ಆತಂಕ ವ್ಯಕ್ತಪಡಿಸಿರುವ ಆಯೋಗ, ಪಂಚಮಸಾಲಿ ಮೀಸಲಾತಿಗಾಗಿ ಪ್ರತ್ಯೇಕ ಪ್ರವರ್ಗ ಸೃಷ್ಟಿಸಲು ಶಿಫಾರಸು ಮಾಡಿದೆ ಎನ್ನಲಾಗಿದೆ. ಹೀಗಾಗಿ ಸಿಎಂ ಬೊಮ್ಮಾಯಿ ಮತ್ತಷ್ಟು ಗೊಂದಲಕ್ಕೆ ಸಿಲುಕಿದ್ದಾರೆ. ದೆಹಲಿ ಭೇಟಿ ವೇಳೆ ಹೈಕಮಾಂಡ್ ಬಳಿ ಪಂಚಮಸಾಲಿ ಮೀಸಲಾತಿ ಬಗ್ಗೆ ಚರ್ಚೆ ನಡೆಸಿ, ಕೆಲ ಸಲಹೆ ಸೂಚನೆಗಳನ್ನು ಪಡೆದುಕೊಂಡು ಬಂದಿದ್ದಾರೆ.
ಇದೀಗ ಪಂಚಮಸಾಲಿ ಸೇರಿ ವೀರಶೈವ ಲಿಂಗಾಯತರಿಗೆ ಮೀಸಲಾತಿ ನೀಡುವ ಬಗ್ಗೆ ಒಲವು ಹೊಂದಿರುವ ಸರ್ಕಾರ ಇತರ ಸಮುದಾಯಗಳಿಗೆ ಅನ್ಯಾಯವಾಗದ ರೀತಿಯಲ್ಲಿ, ಕಾನೂನು ತೊಡಕು ಬರದಂತೆ ಅಳೆದು ತೂಗಿ ಮೀಸಲಾತಿ ಕಲ್ಪಿಸುವ ಬಗ್ಗೆ ಚಿಂತನೆ ನಡೆಸಿದೆ ಎನ್ನಲಾಗಿದೆ. ಪಂಚಮಸಾಲಿಗೆ 2A ಅಡಿ ಮೀಸಲಾತಿ ನೀಡಿದರೆ, ಕೋರ್ಟ್‌ನಲ್ಲಿ ಅದು ತಿರಸ್ಕೃತವಾಗುವ ಸಾಧ್ಯತೆನೇ ಹೆಚ್ಚಿರುವ ಭೀತಿ ಇದೆ. ಈಗಾಗಲೇ ಎಸ್ ಸಿ ಎಸ್ ಟಿ ಮೀಸಲಾತಿ ಹೆಚ್ಚಳದಿಂದ 50% ಪರಿಮಿತಿ ಮೀರಿದ್ದು, ಇತ್ತ EWS ಗೂ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿರುವ ಕಾರಣ, ಇದೀಗ ಪಂಚಮಸಾಲಿ ಲಿಂಗಾಯತರಿಗೆ ಮೀಸಲಾತಿ ಕಲ್ಪಿಸಿದರೆ ನ್ಯಾಯಾಲಯದಲ್ಲಿ 50% ಮೀರುವಾಗಿನ ತೂಗು ಗತ್ತಿಯಿಂದ ಹೇಗೆ ತಪ್ಪಿಸುವುದು ಎಂಬ ಗೊಂದಲದಲ್ಲಿ ಸರ್ಕಾರ ಇದೆ.
ಪಂಚಮಸಾಲಿ ಮೀಸಲಾತಿಗೆ ಕಗ್ಗಂಟು ಏನು?: ಪಂಚಮಶಾಲಿ ಉಪಜಾತಿಯನ್ನು 2A ಹಿಂದುಳಿದ ಜಾತಿ ಪ್ರವರ್ಗಕ್ಕೆ ಸೇರಿಸಬೇಕೆಂದು ಸದ್ಯದ ಬೇಡಿಕೆ. ವೀರಶೈವ ಲಿಂಗಾಯಿತ ಸಮಾಜದಲ್ಲಿ ಒಟ್ಟು 102 ಉಪಜಾತಿಗಳಿದ್ದು, ಇವುಗಳ ಪೈಕಿ 34 ಉಪ ಜಾತಿಗಳನ್ನು ಕೇಂದ್ರ ಸರ್ಕಾರದ ಒ.ಬಿ.ಸಿ. 2A ಪಟ್ಟಿಯಲ್ಲಿ ಸೇರಿಸಲಾಗಿದೆ. 2Aರಡಿ 15% ಮೀಸಲಾತಿ ಕಲ್ಪಿಸಲಾಗುತ್ತಿದೆ. ಈಗಾಗಲೇ 2A ಪ್ರವರ್ಗದಡಿ ವೀರಶೈವ ಲಿಂಗಾಯತದ 34 ಉಪಜಾತಿಗಳಾದ ಗೌಲಿ, ಕಾವಾಡಿಗ, ಮೇದಾರ, ಬಾಟರ್, ಗೌರಿ, ಗೌರಿ ಮರಾಠ, ಬರ್ನಡ ಗೌರಿಗು, ಅಗಸ, ಗುರುವ, ಹುಗಾರ, ಜೀರ್, ಜೇಡ, ಕುರುಜಿನಶೆಟ್ಟಿ, ಬಿಳಿಮಗ್ಗ, ಜಾಡರು, ಅಕ್ಕಸಾಲಿ, ಕಮ್ಮಾರ, ಕಮ್ಮಾಲಿ, ಬಡೀಗ, ನಾಯಿಂಡ, ಬಂಡಾರಿ, ಜಜಂತ್ರಿ, ಗಾಣಿಗ, ಗಾಣಿಗರ, ಸಜ್ಜನ, ಬಳೆಗಾರ, ಸಜ್ಜನ ಗಾಣಿಗರ, ನೀಲಗಾರಿ ಮೀಸಲಾತಿ ಪಡೆಯುತ್ತಿದ್ದಾರೆ.