ಕೂಡಲಸಂಗಮ ಬಸವ ಜಯಮೃತ್ಯಂಜಯ ಸ್ವಾಮೀಜಿ ಬೆಂಗಳೂರು: ಅಧಿಕಾರಕ್ಕೆ ಬಂದರೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೊಡುವುದಾಗಿ ಎಂಬ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದು, ಕೊಟ್ಟ ಮಾತಿನಂತೆ ನಡೆದುಕೊಳ್ಳಿ ಎಂದು ಕೇಳುತ್ತಿದ್ದೇವೆಯೇ, ಹೊರತು ನಾವು ಬೇರೆ ಏನೂ ಕೇಳುತ್ತಿಲ್ಲ. ಈ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಮಧ್ಯಪ್ರವೇಶ ಮಾಡಬೇಕು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯಂಜಯ ಶ್ರೀಗಳು ಆಗ್ರಹಿಸಿದರು.
ನಗರದ ಫ್ರೀಡಂ ಪಾರ್ಕ್ ನಲ್ಲಿ ಈಟಿವಿ ಭಾರತ ಜೊತೆಗೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು. ಒಂದು ವೇಳೆ ಮೀಸಲಾತಿ ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ 224 ಕ್ಷೇತ್ರದಲ್ಲಿಯೂ ಪ್ರವಾಸ ಮಾಡಿ ಮೀಸಲಾತಿ ವಿಚಾರದಲ್ಲಿ ಬಿಜೆಪಿ ಮಾತು ತಪ್ಪಿದ ಕುರಿತಾಗಿ ಆಂದೋಲನ ಹಮ್ಮಿಕೊಂಡು ಜನಜಾಗೃತಿ ಮೂಡಿಸಲಾಗುವುದು. ಯಾರು ಯಾರು ಮೀಸಲಾತಿ ವಿಚಾರದಲ್ಲಿ ಏನೇನು ಮಾಡಿದರು ಎಂದು ಜನರಿಗೆ ತಿಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಯಡಿಯೂರಪ್ಪ ಕೈ ಹಿಡಿಯಲಿಲ್ಲ: ಅಧಿಕಾರ, ಹಣ ಕೇಳುತ್ತಿಲ್ಲ, ಮೀಸಲಾತಿಯನ್ನು ಕೇಳುತ್ತಿದ್ದೇವೆ. ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ನಮ್ಮ ಸಮುದಾಯಕ್ಕೆ 2ಎ ಮೀಸಲಾತಿ ನೀಡುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಅದರಂತೆ ಈಗ ಮೀಸಲಾತಿ ನೀಡಬೇಕು ಎಂದು ಕೇಳುತ್ತಿದ್ದೇವೆ. ಕೊಟ್ಟ ಮಾತು ತಪ್ಪಬಾರದು. ಯಡಿಯೂರಪ್ಪ 2 ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರೂ ನಮ್ಮ ಸಮುದಾಯದ ಕೈ ಹಿಡಿಯಲಿಲ್ಲ ಎಂದರು.
ಸಿಎಂ ಬೊಮ್ಮಾಯಿ ಬೇಡಿಕೆ ಈಡೇರಿಸಿಲ್ಲ: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ 18 ತಿಂಗಳಾದರೂ ಬೇಡಿಕೆ ಈಡೇರಿಸಿಲ್ಲ. ಬೊಮ್ಮಾಯಿ ಅವರು 6 ಬಾರಿ ಮಾತು ಕೊಟ್ಟು ತಪ್ಪಿದ್ದಾರೆ. ತಾಯಿ ಮೇಲೆ ಆಣೆ ಮಾಡಿ ಹೋರಾಟ ಹತ್ತಿಕ್ಕಿದರು. ನಾವೂ ಅವರ ಮಾತನ್ನು ನಂಬಿದ್ದೆವು. ಆದರೆ 2ಎ ಮೀಸಲಾತಿ ನೀಡುವ ಬದಲು 2ಡಿ ಅಂಥ ಕೊಟ್ಟರು. ಇದು ನಮ್ಮ ಸಮಾಜದ ಅಸಮಾಧಾನಕ್ಕೆ ಕಾರಣವಾಗಿದೆ. 2ಡಿ ಮೀಸಲಾತಿ ತಿರಸ್ಕರಿಸಿದ್ದೇವೆ. ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಅಣಿಯಾಗಿದ್ದೇವೆ ಹಾಗಾಗಿಯೇ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಆರಂಭಿಸಿದ್ದು, ಬೇಡಿಕೆ ಈಡೇರುವವರೆಗೂ ಹೋರಾಟ ನಡೆಸಲಿದ್ದೇವೆ ಎಂದು ತಿಳಿಸಿದರು.
ಸುಳ್ಳು ಭರವಸೆ ಕಣ್ಣೊರೆಸುವ ತಂತ್ರ: ನಮ್ಮ ಸಮುದಾಯಕ್ಕೆ 2ಎ ಮೀಸಲಾತಿ ಕೊಡಬೇಕು. ಇದು ಸಾಧ್ಯವಾಗಲ್ಲ ಎನ್ನುವುದಾದರೆ ಅದನ್ನು ನೇರವಾಗಿ ಹೇಳಬೇಕು. ಅದರ ಬದಲು ಮತ್ತೆ ಮತ್ತೆ ಸುಳ್ಳು ಭರವಸೆ ನೀಡಿ ಸಮಾಜದ ಜನರ ಕಣ್ಣೊರೆಸುವ ತಂತ್ರ ಮಾಡಬಾರದು. ಸದ್ಯದಲ್ಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ. ಆಗ ಇದನ್ನೇ ಮತ್ತೆ ನೆಪವಾಗಿರಿಸಿಕೊಂಡು ಮುಂದುವರಿಯುವುದು ಬಿಜೆಪಿಯ ತಂತ್ರವಾಗಿದೆ. ಹಾಗಾಗಿ ಇಂಥ ಭರವಸೆಯನ್ನೆಲ್ಲಾ ನಾವು ಇನ್ನು ಮುಂದೆ ನಂಬುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರ ರಚಿಸಿರುವ ಹೊಸ ಪ್ರವರ್ಗವನ್ನು ನಾವು ತಿರಸ್ಕರಿಸಿದ್ದು, ನಮಗೆ 2ಎ ಮೀಸಲಾತಿ ನೀಡಬೇಕು. ಹಿಂದುಳಿದ ವರ್ಗಗಳ ಆಯೋಗ ಅಂತಿಮ ವರದಿ ನೀಡಿ ಅದರ ಅನುಸಾರ ಸರ್ಕಾರ ಸ್ಪಷ್ಟ ನಿರ್ಧಾರ ಘೋಷಣೆ ಮಾಡುವವರೆಗೂ ನಾವು ಧರಣಿ ನಿಲ್ಲಿಸುವುದಿಲ್ಲ. ಎಲ್ಲಾ 224 ಕ್ಷೇತ್ರಕ್ಕೂ ತೆರಳಿ ಬಿಜೆಪಿ ಮಾತು ತಪ್ಪಿದ ಹಾಗೂ ಯಾರು ಯಾರು ಮೀಸಲಾತಿ ವಿಚಾರದಲ್ಲಿ ಏನೇನು ಮಾಡಿದರು ಎಂದು ಜನರಿಗೆ ತಿಳಿಸುತ್ತೇವೆ ಎಂದರು.
ಹೋರಾಟ ಮತ್ತೆ ಆರಂಭ: ನಗರದ ಫ್ರೀಡಂ ಪಾರ್ಕ್ ನಲ್ಲಿ ಪಂಚಮಸಾಲಿ ಸಮುದಾಯದ ಹೋರಾಟ ಮತ್ತೆ ಆರಂಭಗೊಂಡಿದೆ. ಕೂಡಲ ಸಂಗಮ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಧರಣಿ ಆರಂಭಿಸಲಾಗಿದೆ. ಧರಣಿ ದಿನ ಸಂಕ್ರಾಂತಿ ಆಚರಿಸಿ ಹೋರಾಟದ ಕಾವು ಹೆಚ್ಚಿಸುವ ಘೋಷಣೆ ಮೊಳಗಿಸಲಾಯಿತು. ಸರ್ಕಾರದ ವಿರುದ್ಧ ಧರಣಿ ನಿರತ ಸಮುದಾಯದ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.
2ಡಿ ಪ್ರವರ್ಗ ರಚಿಸಿದ್ದರೂ ಸರ್ಕಾರಕ್ಕೆ ಬಿಸಿ: ಮೀಸಲಾತಿ ವಿಚಾರದಲ್ಲಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ತಂತ್ರವಾಗಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕವಾಗಿ 2ಡಿ ಪ್ರವರ್ಗ ರಚಿಸಿದ್ದರೂ ಸರ್ಕಾರಕ್ಕೆ ಹೋರಾಟದ ಬಿಸಿ ತಗ್ಗಿಲ್ಲ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಮತ್ತೆ ಹೋರಾಟ ಭುಗಿಲೆದ್ದಿದೆ. ಶಿಗ್ಗಾಂವಿಯಲ್ಲಿ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಎರಡು ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ನಂತರ ಹೋರಾಟವನ್ನು ರಾಜ್ಯ ರಾಜಧಾನಿಗೆ ಸ್ಥಳಾಂತರ ಮಾಡಲಾಗಿದೆ. ನಗರದ ಫ್ರೀಡಂ ಪಾರ್ಕ್ ನಲ್ಲಿ ಕೂಡಲಸಂಗಮ ಶ್ರೀಗಳ ನೇತೃತ್ವದಲ್ಲಿ ಮೀಸಲಾತಿ ಹೋರಾಟ ಸಮಿತಿಯಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗಿದೆ.
ಇದನ್ನೂ ಓದಿ:ಅತಿ ಕಡಿಮೆ ದರದಲ್ಲಿ ವಿದ್ಯುತ್ ಪೂರೈಕೆ ಕೋಲ್ ಇಂಡಿಯಾ ಗುರಿಯಾಗಿರಲಿ: ಸಿಐಎಲ್ ಮುಖ್ಯಸ್ಥ