ಬೆಂಗಳೂರು:ರಾಜ್ಯ ವಿಧಾನಸಭೆ ಚುನಾವಣೆ ನಾಮಪತ್ರ ಹಿಂಪಡೆಯಲು ಸೋಮವಾರ ಕೊನೆಯ ದಿನವಾಗಿದ್ದು, 517 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. ಅಖಾಡದಲ್ಲಿ 2,613 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ. ಚುನಾವಣಾ ಕಣ ಜಿದ್ದಾಜಿದ್ದು ಸ್ಪರ್ಧೆಗೆ ಸಜ್ಜಾಗಿದೆ. ಇಂದು (ಸೋಮವಾರ) ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಅದರಂತೆ 517 ಅಭ್ಯರ್ಥಿಗಳು ತಮ್ಮ ನಾಮಪತ್ರ ವಾಪಸು ಪಡೆದು ಕಣದಿಂದ ಹಿಂದೆ ಸರಿದರು. ಆ ಮೂಲಕ ಸದ್ಯ ಕಣದಲ್ಲಿರುವ ಅಭ್ಯರ್ಥಿಗಳ ಸಂಖ್ಯೆ 2,613. ಪುರುಷ ಅಭ್ಯರ್ಥಿಗಳ ಸಂಖ್ಯೆ 2,427 ಇದ್ದರೆ, 184 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದರೆ, 2 ಇತರರು ಇದ್ದಾರೆ.
ಏಪ್ರಿಲ್ 20ರವರೆಗೆ ರಾಜ್ಯಾದ್ಯಂತ ಒಟ್ಟು 5,101 ನಾಮಪತ್ರ ಸ್ವೀಕರಿಸಲಾಗಿತ್ತು. ಈ ಪೈಕಿ ಇದೀಗ ಕಣದಲ್ಲಿರುವುದು 2,613 ಅಭ್ಯರ್ಥಿಗಳು. ಬಿಜೆಪಿಯಿಂದ 224 ಅಭ್ಯರ್ಥಿಗಳು, ಕಾಂಗ್ರೆಸ್ನಿಂದ 223 ಅಭ್ಯರ್ಥಿಗಳು, ಜೆಡಿಎಸ್ನಿಂದ 207 ಅಭ್ಯರ್ಥಿಗಳು, ಎಎಪಿಯಿಂದ 209 ಅಭ್ಯರ್ಥಿಗಳು, ಬಿಎಸ್ಪಿಯಿಂದ 113 ಅಭ್ಯರ್ಥಿಗಳು, ಜೆಡಿ(ಯು) 8, ಸಿಪಿಐಎಂ 4, ಎನ್ಪಿಪಿಯ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನೋಂದಾಯಿತ ಮಾನ್ಯತೆ ಪಡೆಯದ ವಿವಿಧ ಪಕ್ಷಗಳಿಂದ 685 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇನ್ನು 918 ಪಕ್ಷೇತರ ಅಭ್ಯರ್ಥಿಗಳು ರಣಕಣದಲ್ಲಿದ್ದಾರೆ.
ಬೆಂಗಳೂರಲ್ಲಿ 56 ಮಂದಿ ನಾಮಪತ್ರ ವಾಪಸ್:ಇತ್ತ ಬೆಂಗಳೂರಿನ 28 ಕ್ಷೇತ್ರಗಳಿಂದ 56 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. ಬೆಂಗಳೂರಲ್ಲಿ ಒಟ್ಟು 704 ನಾಮಪತ್ರ ಸಲ್ಲಿಸಿದ್ದರು. ಇದೀಗ 389 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ 28, ಕಾಂಗ್ರೆಸ್ 28, ಜೆಡಿಎಸ್ 24, ಎಎಪಿ 28, ಬಿಎಸ್ ಪಿ 21 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ನ ಬಂಡಾಯವೆದ್ದಿದ್ದ 16 ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದರು. ಕಾಂಗ್ರೆಸ್ನ 6 ಬಂಡಾಯ ಅಭ್ಯರ್ಥಿಗಳು, ಬಿಜೆಪಿಯ 7 ಬಂಡಾಯ ಅಭ್ಯರ್ಥಿಗಳು ಹಾಗೂ ಜೆಡಿಎಸ್ನ 3 ಬಂಡಾಯ ಅಭ್ಯರ್ಥಿಗಳು ಕಣದಿಂದ ಹಿಂದಕ್ಕೆ ಸರಿದಿದ್ದಾರೆ.
ಬೆಂಗಳೂರಲ್ಲಿ ಪ್ರಮುಖವಾಗಿ ಚಿಕ್ಕಪೇಟೆಯ ಕೈ ಬಂಡಾಯ ಅಭ್ಯರ್ಥಿ ಗಂಗಾಂಬಿಕೆ ತಮ್ಮ ನಾಮಪತ್ರ ವಾಪಸ್ ಪಡೆದರು. ಆದರೆ ಇತ್ತ ಗಾಂಧಿನಗರದ ಬಿಜೆಪಿ ಬಂಡಾಯ ಅಭ್ಯರ್ಥಿ ಕೃಷ್ಣಯ್ಯ ಶೆಟ್ಟಿ ನಾಮಪತ್ರ ಹಿಂಪಡೆಯದೇ ಕಣದಲ್ಲೇ ಉಳಿದುಕೊಂಡಿದ್ದಾರೆ. ಇತ್ತ ಪುಲಕೇಶಿನಗರದಿಂದ ಕೈ ಬಂಡಾಯ ಅಭ್ಯರ್ಥಿ ಅಖಂಡ ಶ್ರಿನಿವಾಸ್ ಬಿಎಸ್ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಇನ್ನು ಚಿಕ್ಕಪೇಟೆ ಕೈ ಬಂಡಾಯ ಅಭ್ಯರ್ಥಿ ಕೆಜಿಎಫ್ ಬಾಬು ಕಣದಲ್ಲಿದ್ದಾರೆ.