ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಬೆಂಗಳೂರು: ಮಹಾ ನಗರದಲ್ಲಿ 26 ಪ್ರತಿಪಕ್ಷ ನಾಯಕರು ಸೇರುತ್ತಿದ್ದೇವೆ. 2ನೇ ಸಭೆ ಇದಾಗಿದೆ ಎಂದು ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ತಿಳಿಸಿದರು. ನಗರದ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು "ನಾವು ಲೋಕಸಭೆ ಚುನಾವಣೆ ಬಗ್ಗೆ ಚರ್ಚೆ ಮಾಡುತ್ತೇವೆ. ಇದೊಂದು ಗೇಮ್ ಚೇಂಜರ್ ಸಭೆಯಾಗಲಿದೆ. ಇಲ್ಲಿ ಅಸೆಂಬ್ಲಿ ಸಮಾವೇಶ ನಡೆಯುತ್ತಿದೆ. ರಾಷ್ಟ್ರೀಯ ಪ್ರತಿಪಕ್ಷ ನಾಯಕರೆಲ್ಲ ಭಾಗವಹಿಸುತ್ತಿದ್ದು, ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದೇವೆ" ಎಂದು ತಿಳಿಸಿದರು.
ಎಲ್ಲ ಪಕ್ಷಗಳು ಒಂದೇ ಸಾಮಾನ್ಯ ವಿಷಯಕ್ಕಾಗಿ ಸೇರುತ್ತಿದ್ದೇವೆ. ಪ್ರಜಾಪ್ರಭುತ್ವವನ್ನು ಉಳಿಸಬೇಕಿದೆ. ಮೂಲಭೂತ ಹಕ್ಕುಗಳನ್ನು ಸಂರಕ್ಷಣೆ ಮಾಡಬೇಕಿದೆ. ಬಿಜೆಪಿ ಸಿಬಿಐ, ಇಡಿ ಮೂಲಕ ವಿಪಕ್ಷಗಳ ಧ್ವನಿ ಅಡಗಿಸಲು ಪ್ರಯತ್ನಿಸುತ್ತಿದೆ. ಮಹಾರಾಷ್ಟ್ರ ರಾಜಕಾರಣದ ಬೆಳವಣಿಗೆ ಕೂಡ ಇದರ ಭಾಗ ಎಂದು ಅವರು ವಿವರಿಸಿದರು.
ಗೇಮ್ ಚೇಂಜರ್ ಸಭೆ: ಮಣಿಪುರ ಕಳೆದ 75 ದಿನಗಳಿಂದ ಸುಟ್ಟು ಕರಕಲಾಗುತ್ತಿದೆ. ಒಂದೇ ಒಂದು ಸಭೆ ನಡೆಸಿ ಮಣಿಪುರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿಲ್ಲ. ಪ್ರಧಾನಿ ಅವರು ಉಸಿರೇ ಬಿಡ್ತಿಲ್ಲ, ಒಂದೇ ಒಂದು ಪದವನ್ನೂ ಮಾತನಾಡ್ತಿಲ್ಲ. 26 ಪಕ್ಷಗಳು ಸೇರುತ್ತಿರುವುದು ಸಾಮಾನ್ಯ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದಕ್ಕೆ. ಸರ್ವಾಧಿಕಾರಿ ಸರ್ಕಾರದ ಕ್ರಿಯೆಗಳ ವಿರುದ್ಧ ನಾವು ಹೋರಾಡುವುದಕ್ಕೆ. ಸಂಸತ್ತಿನ ಅಧಿವೇಶನ ಜು.20ರ ನಂತರ ಪ್ರಾರಂಭವಾಗುತ್ತಿದೆ. ಪಾರ್ಲಿಮೆಂಟ್ ಸ್ಟ್ರಾಟಜಿ ಬಗ್ಗೆ ಕೂಡ ಚರ್ಚೆ ಮಾಡುತ್ತೇವೆ. ಗೇಮ್ ಚೇಂಜರ್ ಸಭೆ ಇದಾಗಿರುತ್ತದೆ ಎಂಬ ವಿಶ್ವಾಸವಿದೆ. ಪಾಟ್ನಾ ಸಭೆ ಬಳಿಕ ಎನ್ಡಿಎ ಕೂಡ ಸಭೆ ಮಾಡ್ತಿದೆ. ಇದೇ ನಮ್ಮ ಮೊದಲ ಅಸಲಿ ಜಯ ಎಂದು ಭಾವಿಸುತ್ತೇನೆ ಎಂದರು.
ಹತ್ತಾರು ವಿಷಯಗಳ ಮೇಲೆ ಚರ್ಚೆ: ನಿರುದ್ಯೋಗ, ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ನಾವಿಲ್ಲಿ ಸೇರುತ್ತಿರುವುದು ಅಧಿಕಾರಕ್ಕಾಗಿ ಅಲ್ಲ. ನೈಜ ವಾಸ್ತವ ಸಮಸ್ಯೆಗಳು, ಪ್ರಜಾಪ್ರಭುತ್ವಕ್ಕೆ ಆಗುತ್ತಿರುವ ಧಕ್ಕೆಗಳ ಬಗ್ಗೆ ಚರ್ಚೆ ಮಾಡಲು. 26 ಪಕ್ಷಗಳು ಇರುವುದರಿಂದ ಹತ್ತಾರು ವಿಷಯಗಳ ಮೇಲೆ ಚರ್ಚೆ ನಡೆಯಲಿದೆ. ಇದು ಒಂದೇ ಪಕ್ಷದ ಒಕ್ಕೂಟ ಅಲ್ಲ. ಎಲ್ಲ ಪಕ್ಷಗಳು ಒಟ್ಟಾಗಿ ಸೇರುತ್ತಿರುವ ಒಕ್ಕೂಟ. ಒಕ್ಕೂಟಕ್ಕೆ ಹೆಸರು ನೀಡಬೇಕು ಎಂಬ ಬಗ್ಗೆ ಕೂಡ ನಿರ್ಧಾರ ಮಾಡುತ್ತೇವೆ. ಸೀಟು ಹಂಚಿಕೆ ಸಂಬಂಧ ಮೈತ್ರಿಕೂಟ ನಿರ್ಧಾರ ಮಾಡುತ್ತದೆ. ಆದರೆ ಒಂದೇ ಸಭೆಯಲ್ಲಿ ಇದು ಅಂತಿಮವಾಗುವುದಿಲ್ಲ. ಯುಪಿಎ ಹೊರತುಪಡಿಸಿದ ಪಕ್ಷಗಳೂ ಕೂಡ ಒಕ್ಕೂಟದಲ್ಲಿವೆ. ಸೆಕ್ಯುಲರಿಸಂ ಮೇಲೆ ನಂಬಿಕೆ ಇರುವ ಹಾಗೂ ಸರ್ವಾಧಿಕಾರ ವಿರೋಧಿಸುವ ಯಾವ ಪಕ್ಷವನ್ನಾದರೂ ನಾವು ಸ್ವಾಗತಿಸುತ್ತೇವೆ. ಆದರೆ ಕೆಲ ಪ್ರಾದೇಶಿಕ ಪಕ್ಷಗಳು ಕಳೆದ ಚುನಾವಣೆಯಲ್ಲಿ ತನ್ನ ನಿಲುವು ಏನು ಎಂಬುದನ್ನು ಸಾಬೀತು ಮಾಡಿದೆ ಎಂದರು.
ಇದನ್ನೂ ಓದಿ:ಜು.17-18 ರಂದು ಬೆಂಗಳೂರಿನಲ್ಲಿ ಪ್ರತಿಪಕ್ಷಗಳ ಸಭೆ: ವಿಪಕ್ಷಗಳ ಪ್ರಮುಖ ನಾಯಕರಿಗೆ ಖರ್ಗೆ ಆಹ್ವಾನ
ರಾಷ್ಟ್ರೀಯ ನಾಯಕರಿಗೆ ಔತಣಕೂಟ: ರಾಷ್ಟ್ರೀಯ ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭೆ ಸದಸ್ಯ ಜೈರಾಂ ರಮೇಶ್ ಮಾತನಾಡಿ "ಇಂದು ರಾಷ್ಟ್ರೀಯ ನಾಯಕರಿಗೆ ಔತಣಕೂಟ ಇದೆ. ನಾಳೆ ಅಧಿಕೃತ ಸಭೆ ಬೆಳಗ್ಗೆ ಪ್ರಾರಂಭ ಆಗುತ್ತಿದೆ. ಪ್ರಧಾನಿ ಹಾಗೂ ಆಡಳಿತ ಪಕ್ಷಕ್ಕೆ ಭಯ ಶುರುವಾಗಿದೆ. ನಮ್ಮ ಪಾಟ್ನಾ ಸಭೆ ಆದ ಬಳಿಕ ಪ್ರಧಾನಿಗೆ ಎನ್ಡಿಎ ಮೈತ್ರಿಕೂಟದ ನೆನಪಾಗಿದೆ. ಇಷ್ಟು ದಿನ ಎನ್ಡಿಎ ನೆನಪೇ ಇರಲಿಲ್ಲ. ಅದು ಭೂತ ಕಾಲದಲ್ಲಿ ಸೇರಿಕೊಂಡಿತ್ತು. ಇದು ನಮ್ಮ ಪಾಟ್ನಾ ಸಭೆಯ ಪರಿಣಾಮ" ಎಂದರು.
ದೇಶದ ಭವಿಷ್ಯ ರೂಪಿಸುವ ಸಭೆ:ಡಿಸಿಎಂ ಡಿ ಕೆ ಶಿವಕುಮಾರ್ ಮಾತನಾಡಿ "ಇದೊಂದು ದೊಡ್ಡ ಪ್ರಾರಂಭ. ಎಲ್ಲ ಪ್ರತಿ ಪಕ್ಷಗಳು ಒಂದಾಗಿರುವುದು ಯಶಸ್ವಿ ದಿನ. ದೇಶದ ಭವಿಷ್ಯವನ್ನು ಪುನರ್ ರೂಪಿಸುವುದು ಹೇಗೆ? ಎಂಬ ಬಗ್ಗೆ ಚರ್ಚೆ ಮಾಡಲಿದ್ದೇವೆ. ಕೆಪಿಸಿಸಿ ಪರವಾಗಿ, ಸಿಎಂ ಪರವಾಗಿ ನಾವು ಎಐಸಿಸಿಗೆ ಹಾಗೂ ಎಲ್ಲ ಪಕ್ಷಗಳ ನಾಯಕರಿಗೆ ಆತಿಥ್ಯ ನೀಡುತ್ತಿದ್ದೇವೆ. ಕರ್ನಾಟಕಕ್ಕೆ ಬಹುಮತ ಸಿಕ್ಕಿದ್ದು ಇಡೀ ದೇಶಕ್ಕೆ ಹೊಸ ಸಂದೇಶ. ಇದೊಂದು ಉತ್ತಮ ಚಾಲನೆ ಹಾಗೂ ಆರಂಭ. ಒಗ್ಗಟ್ಟಾಗಿ ಸಾಗುವುದರಿಂದ ಯಶಸ್ಸು ಸಿಗಲಿದೆ. ದೇಶದ ಭವಿಷ್ಯ ರೂಪಿಸುವ ಸಭೆ. ಕೇವಲ ಕಾಂಗ್ರೆಸ್ ಪಕ್ಷದ ಸಭೆಯಲ್ಲ" ಎಂದು ತಿಳಿಸಿದರು.
ಜೆಡಿಎಸ್ಗೆ ಆಹ್ವಾನ ಇದೆಯಾ?:ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ವೇಣುಗೋಪಾಲ್ "ಸರ್ವಾಧಿಕಾರಿ ಧೋರಣೆ ವಿರೋಧಿಸುವ ಯಾರು ಬೇಕಾದರೂ ನಮ್ಮೊಂದಿಗೆ ಕೈ ಜೋಡಿಸಬಹುದು. ಅವರಿಗೆ ಪ್ರತ್ಯೇಕವಾಗಿ ಆಹ್ವಾನ ನೀಡುವ ಅಗತ್ಯತೆ ಇಲ್ಲ. ಕಳೆದ ವರ್ಷದಲ್ಲಿ ಅವರ( ಜೆಡಿಎಸ್) ನಿಲುವು ಏನು ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದರು. ಜೂ.22ರಂದು ಯಶಸ್ವಿಯಾಗಿ ಪಾಟ್ನಾದಲ್ಲಿ ಸಭೆ ನಡೆದಿದೆ. ಇದು ಅದರ ಮುಂದುವರಿದ ಭಾಗ. ನಾಳೆ 11 ಗಂಟೆಗೆ ಸಭೆ ಆರಂಭವಾಗಲಿದೆ. 26 ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ನಾವೆಲ್ಲ ಸಮಾನ ಉದ್ದೇಶಕ್ಕಾಗಿ ಒಗ್ಗೂಡಿದ್ದೇವೆ. ಸಂವಿಧಾನ, ಪ್ರಜಾಪ್ರಭುತ್ವದ ರಕ್ಷಣೆ ಮಾಡುವ ನಿಟ್ಟಿನಲ್ಲಿ ಒಗ್ಗೂಡಿದ್ದೇವೆ. ಬಿಜೆಪಿ ಎಲ್ಲಾ ಸಂಸ್ಥೆಗಳನ್ನು ವಿರೋಧ ಪಕ್ಷಗಳನ್ನು ಹತ್ತಿಕ್ಕಲು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ವೇಣುಗೋಪಾಲ್ ಆರೋಪಿಸಿದರು.
ಹಲವು ವಿಚಾರಗಳ ಬಗ್ಗೆ ಯಾವ ನಿಲುವು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಮಂಗಳವಾರದ ಸಭೆಯಲ್ಲಿ ಚರ್ಚೆ ನಡೆಯಲಿದೆ. ಸೋನಿಯಾ ಗಾಂಧಿ ಭಾಗಿಯಾಗುತ್ತಿರುವುದು ನಮಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ. ವಿಪಕ್ಷಗಳ ಒಕ್ಕೂಟಕ್ಕೆ ಯಾರು ನಾಯಕರಾಗುತ್ತಾರೆ? ಎಂಬ ಬಗ್ಗೆ ಚಿಂತನೆ ಮಾಡಬೇಡಿ. ದೇಶದ ಪರಿಸ್ಥಿತಿಯ ಬಗ್ಗೆ ಯೋಚನೆ ಮಾಡಿ. ರಾಜಕೀಯದಲ್ಲಿ ತ್ರಿಶಂಕು ಸ್ಥಿತಿಯಲ್ಲಿ ರಾಜಕೀಯ ಪಕ್ಷಗಳು ಇರಬಾರದು. ಜನರ ಗಮನ ಬೇರೆ ಕಡೆ ಸೆಳೆಯಲು ನಾಯಕತ್ವದ ಬಗ್ಗೆ ಪ್ರಶ್ನೆ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಯಡಿಯೂರಪ್ಪ ಆಪರೇಷನ್ ಕಮಲದ ಮೂಲಕ ಸರ್ಕಾರ ನಡೆಸಿದರು. ಆದರೆ ಇವಾಗ ಅವರ ಪರಿಸ್ಥಿತಿ ಏನಾಯ್ತು?. ಮಹಾರಾಷ್ಟ್ರದಲ್ಲೂ ಕೂಡಾ ಅದೇ ಆಗಲಿದೆ ಎಂದು ಕೆ ಸಿ ವೇಣುಗೋಪಾಲ್ ಹೇಳಿದರು.
ಇದನ್ನೂ ಓದಿ:ಬೆಂಗಳೂರಲ್ಲಿ ಇಂದಿನಿಂದ ಪ್ರತಿಪಕ್ಷಗಳ ಸಭೆ: ಪಾಲ್ಗೊಳ್ಳುವ ಪಕ್ಷಗಳು, ನಾಯಕರ ಪಟ್ಟಿ ಇಲ್ಲಿದೆ..