ಬೆಂಗಳೂರು:ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಡಾ. ಅಶ್ವತ್ಥ ನಾರಾಯಣ್ ಫೌಂಡೇಶನ್ ವತಿಯಿಂದ ಈವರೆಗೂ 15,000 ಲಸಿಕೆ ನೀಡಲಾಗಿದ್ದು, ಇನ್ನು ಕೆಲ ದಿನದಲ್ಲೇ 10,000 ಲಸಿಕೆ ಕೊಡಲಾಗುವುದು ಎಂದು ಡಿಸಿಎಂ ಡಾ. ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದರು.
ಮಲ್ಲೇಶ್ವರ ಕ್ಷೇತ್ರದಲ್ಲಿ ನಡೆಯುತ್ತಿರುವ ಲಸಿಕೆ ಅಭಿಯಾನದ ನಿಮಿತ್ತ ಸೋಮವಾರದಂದು ಶ್ರೀರಾಮಪುರದ ಬಿಬಿಎಂಪಿ ಶಾಲೆಯ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮಗಳೊಂದಿಗೆ ಅವರು ಮಾತನಾಡಿರು.
ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಪ್ರತಿಯೊಬ್ಬರಿಗೂ ಲಸಿಕೆ ಸಿಗುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ಪ್ರತಿ ಸ್ಲಮ್‌ನಲ್ಲಿಯೂ ಜನರ ಮನೆಗಳ ಸಮೀಪವೇ ಲಸಿಕೆ ನೀಡುವ ಕೆಲಸ ಆಗುತ್ತಿದೆ. ಬೀದಿಬದಿ ವ್ಯಾಪಾರಿಗಳು, ಸ್ಲಂ ನಿವಾಸಿಗಳು, ಸೆಕ್ಯುರಿಟಿ ಗಾರ್ಡ್, ಆಟೋ ಚಾಲಕರು ಸೇರಿದಂತೆ ಬಿಪಿಎಲ್ ಕಾರ್ಡ್ ಉಳ್ಳ ಎಲ್ಲರನ್ನು ಹುಡುಕಿ ಲಸಿಕೆ ನೀಡಲಾಗುತ್ತಿದೆ. ನಮ್ಮ ಪಕ್ಷದ ಕಾರ್ಯಕರ್ತರು ಹಗಲಿರುಳೆನ್ನದೇ ಕೆಲಸ ಮಾಡುತ್ತಿದ್ದಾರೆ ಎಂದರು.
ಈಗಾಗಲೇ ಸರಕಾರದಿಂದ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಇನ್ನು 18 ವರ್ಷ ಮೇಲ್ಪಟ್ಟವರಿಗೆ ಶೀಘ್ರವೇ ಲಸಿಕೆ ಅಭಿಯಾನ ಪ್ರಾರಂಭ ಮಾಡಲಾಗುವುದು. ಜತೆಗೆ, ನಮ್ಮ ಬಿಬಿಎಂಪಿ ವತಿಯಿಂದ ಆದ್ಯತಾ ವಲಯದ ಜನರಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ. ಮಲ್ಲೇಶ್ವರ ಮಾತ್ರವಲ್ಲದೆ, ಇಡೀ ನಗರದಲ್ಲಿ ಈ ಕೆಲಸ ವೇಗವಾಗಿ ನಡೆಯುತ್ತಿದೆ. ಸದ್ಯದ ಅಂಕಿ-ಅಂಶದ ಪ್ರಕಾರ ಬೆಂಗಳೂರಿಲ್ಲಿ 30- 35%ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ ಎಂದರು.
ಇದನ್ನೂ ಓದಿ:ವೈದ್ಯರ ಮೇಲೆ ಹಲ್ಲೆ ಖಂಡಿಸಿ ಫೋರ್ಟಿಸ್ ಆಸ್ಪತ್ರೆ ವೈದ್ಯರಿಂದ ಪ್ರತಿಭಟನೆ
18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವುದಕ್ಕೆ ಮೊದಲು ಲಸಿಕೆ ಅಭಿಯಾನಕ್ಕಾಗಿಯೇ ರಾಜ್ಯ ಸರ್ಕಾರ ಪ್ರತ್ಯೇಕ ಆ್ಯಪ್ ಸಿದ್ಧತೆ ಮಾಡುತ್ತಿದೆ. ಹೊಸ ಹಾಗೂ ಸುಧಾರಿತ ತಂತ್ರಜ್ಞಾನ ಬಳಸಿಕೊಂಡು ಈ ಆ್ಯಪ್ ಸಿದ್ಧಪಡಿಸಲಾಗುತ್ತಿದೆ. ಅದು ಶೀಘ್ರವೇ ಬಳಕೆಗೆ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು. 18 ವರ್ಷ ಮೇಲ್ಪಟ್ಟವರಿಕೆ ವ್ಯಾಕ್ಸಿನೇಷನ್ ಶುರುವಾದ ಮೇಲೆ ಲಸಿಕೆಗೆ ಸಹಜವಾಗಿಯೇ ಬೇಡಿಕೆ ಹೆಚ್ಚಾಗಲಿದೆ. ಅದಕ್ಕೂ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆ್ಯಪ್ ಬಂದ ಮೇಲೆ ಆಯಾ ಪ್ರದೇಶದವರು ಆಯಾ ಪ್ರದೇಶದಲ್ಲೇ ಲಸಿಕೆ ಪಡೆಯಬೇಕಿದ್ದು, ಅದಕ್ಕೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ವ್ಯಾಕ್ಸಿನೇಷನ್ ನಡೆದ ಶ್ರೀರಾಂಪುರ ಬಿಬಿಎಂಪಿ ಶಾಲೆ ಸೇರಿದಂತೆ ಸುಬ್ರಹ್ಮಣ್ಯ ನಗರದ ಬಾಲಾಜಿ ಸಮುದಾಯ ಭವನ ಹಾಗೂ ಮಲ್ಲೇಶ್ವರದ 7ನೇ ಮುಖ್ಯ ರಸ್ತೆಯಲ್ಲಿರುವ ದೇಶಪಾಂಡೆ ಭವನದ ಲಸಿಕೆ ಶಿಬಿರಕ್ಕೂ ಡಿಸಿಎಂ ಭೇಟಿ ನೀಡಿ ಪರಿಶೀಲನೆ ನಡೆಸಿದರು.