ಬೆಂಗಳೂರು:ರಾಜ್ಯದ ಶಕ್ತಿ ಕೇಂದ್ರವಾಗಿರುವ ವಿಧಾನಸೌಧಕ್ಕೆ ಕಳೆದ ವಾರ ಶಾಸಕ ಸೋಗಿನಲ್ಲಿ ವ್ಯಕ್ತಿಯೋರ್ವ ತೆರಳಿ ಸದನದೊಳಗೆ ಪ್ರವೇಶಿಸಿದ ಪ್ರಕರಣ ಬೆಳಕಿಗೆ ಬಂದ ನಂತರ ತಪಾಸಣೆ ಚುರುಕುಗೊಳಿಸಿದ್ದ ಪೊಲೀಸರು ಕಳೆದ ನಾಲ್ಕು ದಿನಗಳಲ್ಲಿ 250ಕ್ಕಿಂತ ಹೆಚ್ಚು ನಕಲಿ ಪಾಸ್ಗಳನ್ನು ಪತ್ತೆ ಹಚ್ಚಿದ್ದಾರೆ.
ಸಚಿವರ ಹಾಗೂ ಶಾಸಕರ ಪಾಸ್ಗಳನ್ನು ಕಲರ್ ಝರಾಕ್ಸ್ ಮಾಡಿ ಭದ್ರತಾ ಸಿಬ್ಬಂದಿ ಹಾಗೂ ಮಾರ್ಷಲ್ಗಳಿಗೆ ಯಾಮಾರಿಸುತ್ತಿದ್ದವರ ಖರ್ತನಾಕ್ ಪ್ಲಾನ್ ಬಹಿರಂಗಗೊಂಡಿದೆ. ಇದೀಗ ನಕಲಿ ಪಾಸ್ ಬಳಸಿ ವಿಧಾನಸೌಧಕ್ಕೆ ಒಳಪ್ರವೇಶಿಸುತ್ತಿದ್ದವರಿಗೆ ನಗರ ಪೊಲೀಸರು ಬ್ರೇಕ್ ಹಾಕಿದ್ದಾರೆ. ಜನಪ್ರತಿನಿಧಿಗಳಿಗೆ ವಿಧಾನಸೌಧ ಪ್ರವೇಶಕ್ಕೆ ಗುರುತಿನ ಚೀಟಿ ನೀಡಲಾಗುತ್ತದೆ. ಅದೇ ರೀತಿ ಸಚಿವ-ಶಾಸಕರ ಸಿಬ್ಬಂದಿಗೂ ಅಧಿಕೃತವಾಗಿ ಪಾಸ್ ನೀಡಲಾಗುತ್ತದೆ. ಅಲ್ಲದೆ, ಕಾರುಗಳಿಗೆ ಪ್ರತ್ಯೇಕವಾಗಿ ಪಾಸ್ ನೀಡಲಾಗುತ್ತದೆ. ಇದನ್ನೇ ದುರ್ಬಳಕೆ ಮಾಡಿಕೊಳ್ಳುವ ಕೆಲವರು ಕಾರುಗಳಿಗೆ ನೀಡಲಾಗುವ ಪಾಸ್ಗಳಿಗೆ ಕಲರ್ ಝರಾಕ್ಸ್ ಮಾಡಿ ಒಳ ಪ್ರವೇಶಿಸಿರುವುದು ಕಂಡುಬಂದಿದೆ.
ಅಧಿಕೃತವಲ್ಲದ ಹಾಗೂ ನವೀಕರಣಗೊಳ್ಳದ ಪಾಸ್ಗಳನ್ನು ತೋರಿಸಿ ವಿಧಾನಸೌಧ ಹಾಗೂ ವಿಕಾಸಸೌಧಕ್ಕೆ ಪ್ರವೇಶಿಸಿದ್ದ ಸುಮಾರು 300ಕ್ಕಿಂತ ಹೆಚ್ಚು ನಕಲಿ ಪಾಸ್ಗಳನ್ನು ಪತ್ತೆ ಹಚ್ಚಲಾಗಿದೆ. ಈ ಪೈಕಿ ಅವಧಿ ಮುಗಿದಿರುವ, ಅಧಿಕೃತ ಪಾಸ್ಗಳನ್ನು ಝರಾಕ್ಸ್ ಮಾಡಿಸಿಕೊಂಡಿರುವುದೇ ಅಧಿಕವಾಗಿದೆ. ರಾಜಕಾರಣಿಗಳ ಬೆಂಬಲಿಗರಿಂದಲೇ ಪಾಸ್ಗಳ ದುರ್ಬಳಕೆ ಮಾಡಿಕೊಂಡಿರುವುದು ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ನಕಲಿ ಪಾಸ್ ಬಳಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಭದ್ರತೆ ಉಸ್ತುವಾರಿ ವಹಿಸಿಕೊಂಡಿರುವ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಎಚ್ಚರಿಸಿದ್ದಾರೆ.
ಕಳೆದ ಶುಕ್ರವಾರ ಬಜೆಟ್ ಮಂಡನೆ ವೇಳೆ ತಿಪ್ಪೆರುದ್ದಪ್ಪ ಎಂಬಾತ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕ ಸೋಗಿನಲ್ಲಿ ಸದನ ಪ್ರವೇಶಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದ. ಇದು ಪೊಲೀಸರು ಭದ್ರತೆ ವೈಫಲ್ಯಕ್ಕೆ ಸಾಕ್ಷಿಯಾಗಿತ್ತು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಿಪ್ಪೆರುದ್ದಪ್ಪನ ವಿರುದ್ಧ ವಿಧಾನಸೌಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ್ ವರದಿ ನೀಡುವಂತೆ ಶರಣಪ್ಪ ಅವರಿಗೆ ಸೂಚಿಸಿದ್ದರು. ಹಾಗೆ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಈ ಬಗ್ಗೆ ಆತಂಕ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಪರ್ಯಾಯ ಮಾರ್ಗ ಕೈಗೊಳ್ಳುವುದಾಗಿ ಸದನದಲ್ಲಿ ಭರವಸೆ ನೀಡಿದ್ದರು.
ತಪಾಸಣೆ ಬಿಗಿಗೊಳಿಸಿದ ಪೊಲೀಸರು:ಸದನದಲ್ಲಿ ನಕಲಿ ಶಾಸಕ ಪತ್ತೆ ಹಿನ್ನೆಲೆಯಲ್ಲಿ ಭದ್ರತಾ ತಪಾಸಣೆ ಕಾರ್ಯ ಚುರುಕುಗೊಳಿಸಲಾಗಿತ್ತು. ವಿಧಾನಸೌಧ ಹಾಗೂ ವಿಕಾಸಸೌಧಕ್ಕೆ ಪ್ರವೇಶಿಸುವ ಪ್ರತಿಯೊಬ್ಬ ವ್ಯಕ್ತಿ ಹಾಗೂ ವಾಹನಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಒಳ ಬಿಡಲಾಗುತ್ತಿದೆ. ಇದೇ ರೀತಿ ಜುಲೈ 10ರಂದು ವಿಧಾನಸೌಧದಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ಉದ್ಯೋಗಿ ಬ್ಯಾಗಿನಲ್ಲಿ ಚಾಕು ಇರುವುದನ್ನು ಪತ್ತೆ ಹಚ್ಚಲಾಗಿತ್ತು.
ಪೊಲೀಸ್ ವಿಚಾರಣೆ ವೇಳೆ ಕ್ರಿಮಿನಲ್ ಉದ್ದೇಶವಿಲ್ಲದಿರುವುದು ಕಂಡುಬಂದಿದ್ದರಿಂದ ಮುಚ್ಚಳಿಕೆ ಪತ್ರ ಬರೆಸಿ ಪೊಲೀಸರು ಬಿಟ್ಟು ಕಳುಹಿಸಿದ್ದರು. ವಿಧಾನಸೌಧಕ್ಕೆ ಪ್ರವೇಶಿಸುವ ಎಲ್ಲಾ ಗೇಟ್ಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ತಪಾಸಣೆ ಬಿಗಿಗೊಳಿಸುವಂತೆ ಸೂಚಿಸಲಾಗಿದೆ. ಅಲ್ಲದೆ, ಬ್ಯಾಗ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಇಟ್ಟುಕೊಂಡು ಅನುಮಾನಸ್ಪಾದವಾಗಿ ಬರುವ ಎಲ್ಲರನ್ನು ಲೋಹಪರಿಶೋಧಕ ಯಂತ್ರಗಳ ಪರೀಕ್ಷೆ ಒಳಪಡಿಸಬೇಕು. ಅಲ್ಲದೆ, ಬ್ಯಾಗ್ಗಳನ್ನು ಕಡ್ಡಾಯವಾಗಿ ಸ್ಕಾನಿಂಗ್ ಒಳಪಡಿಸಬೇಕು. ಅಧಿಕೃತ ಗುರುತಿನ ಚೀಟಿ ಅಥವಾ ಪಾಸ್ ಇದ್ದರೆ ಮಾತ್ರ ಒಳಪ್ರವೇಶಿಸುವಂತೆ ಮಾರ್ಷಲ್ಗಳಿಗೂ ಖಡಕ್ ಎಚ್ಚರಿಕೆ ನೀಡಿರುವುದಾಗಿ ಶರಣಪ್ಪ ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ವಿಧಾನಸೌಧದೊಳಗೆ ಎಂಎಲ್ಸಿಗಳ ಕಾರು ಪ್ರವೇಶಕ್ಕೆ ಅಡ್ಡಿ, ಪಾರ್ಕಿಂಗ್ ಸಮಸ್ಯೆ: ಸಭಾಪತಿಗಳ ನೇತೃತ್ವದಲ್ಲಿ ಸಭೆಗೆ ನಿರ್ಧರಿಸಿದ ಸರ್ಕಾರ