ಬೆಂಗಳೂರು: ರಾಜ್ಯದಲ್ಲಿ ಇಂದು ಹಳೆಯ ದಾಖಲೆಗಳನ್ನು ಮೀರಿದ್ದು ಒಂದೇ ದಿನ 248 ಹೊಸ ಕೊರೊನಾ ಪಾಸಿಟಿವ್ ಕೇಸ್ಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 2,781ಕ್ಕೆ ಏರಿಕೆಯಾಗಿದ್ದು, ಮೇ 31ರೊಳಗೆ ಮೂರು ಸಾವಿರದ ಗಡಿ ದಾಟುವ ಸಾಧ್ಯತೆಯಿದೆ.
ಕೊರೊನಾಗೆ ಇಂದು ಮತ್ತೊಬ್ಬರು ಬಲಿಯಾಗಿದ್ದು, ಸಾವಿನ ಸ್ಸಂಖ್ಯೆ 48ಕ್ಕೆ ಏರಿಕೆಯಾಗಿದೆ. 15 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈವರೆಗೆ 894 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಇಂದು ಪತ್ತೆಯಾಗಿರುವ ಹೊಸ ಪ್ರಕರಣಗಳಲ್ಲಿ 227 ಮಂದಿ ಅಂತರ್ ರಾಜ್ಯ ಪ್ರಯಾಣಿಕರಾಗಿದ್ದು, ಒಂದು ಅಂತಾರಾಷ್ಟ್ರೀಯ ಪ್ರಕರಣವಾಗಿದೆ. ಇದುವರೆಗೆ 2,64,489 ಕೊರೊನಾ ಪರೀಕ್ಷೆಗಳು ಮಾಡಲಾಗಿದ್ದು, ಇಂದು ರಾಯಚೂರು, ಯಾದಗಿರಿ, ಕಲಬುರಗಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 60ರ ಗಡಿ ದಾಟಿದೆ.
ಚಿಕ್ಕಬಳ್ಳಾಪುರದ ಪಿ - 2762, 50 ವರ್ಷದ ಮಹಿಳೆ ರಸ್ತೆ ಅಪಘಾತದಲ್ಲಿ ತಲೆಗೆ ಪೆಟ್ಟಾಗಿರುವ ಹಿನ್ನೆಲೆ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೇ 28ರಂದು ಕಿಡ್ನಿ ಹಾಗೂ ನಿಮೋನಿಯಾ ಸಮಸ್ಯೆ ಹಿನ್ನೆಲೆ ಬೆಂಗಳೂರಿನ ಆಸ್ಪತ್ರೆಗೆ ವರ್ಗಾಯಿಸಲಾಗಿದ್ದು, ಮೇ 29ರಂದು ನಿಧನರಾಗಿದ್ದಾರೆ. ಪರೀಕ್ಷೆಯ ವೇಳೆ ಪಾಸಿಟಿವ್ ಇರುವುದು ದೃಢವಾಗಿದೆ.
ಬೆಂಗಳೂರು ಒಂದರಲ್ಲೇ ಸೋಂಕಿತರ ಸಂಖ್ಯೆ ತ್ರಿಶತಕ ದಾಟಿದ್ದು, ಈವರಗೆ 303 ಜನರಿಗೆ ಸೋಂಕು ತಗುಲಿದ್ದು, 151 ಮಂದಿ ಮಾತ್ರ ಗುಣಮುಖರಾಗಿದ್ದಾರೆ. 10 ಮಂದಿ ಕೊರೊನಾಗೆ ಬಲಿಯಾಗಿದ್ದು, ಒಬ್ಬರು ಅನ್ಯಕಾರಣಕ್ಕೆ ಸಾವನ್ನಪ್ಪಿದ್ದಾರೆ.
ಶತಕ - ದ್ವಿಶತಕ ಬಾರಿಸಿದ ಕೊರೊನಾ
ಮೇ ತಿಂಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನಕ್ಕೆ 100-200 ದಾಟುತ್ತೆ ಎಂದು ಯಾರು ಕೂಡ ಊಹಿಸಿರಲಿಲ್ಲ. 60 ಗಡಿ ದಾಟಿದ್ದೇ ಆತಂಕ ಸೃಷ್ಟಿಸಿತ್ತು. ಒಂದೇ ದಿನ ಅತಿಹೆಚ್ಚು ಪ್ರಕರಣಗಳು ದಾಖಲಾದ ದಿನಗಳು.
ಮೇ 19 - 149
ಮೇ 21 - 143
ಮೇ 22 - 138
ಮೇ 23 - 216
ಮೇ 24 - 130
ಮೇ 26 - 101
ಮೇ 27 - 135
ಮೇ 28 - 115
ಮೇ 29 - 248